Saturday 31 January 2015

ಹೆಣ್ಣು-1


 
  ಹೆಣ್ಣೆಂದರೇನು, ಸೌಂದರ್ಯವೇನು..,ಈ ಸಾಲನ್ನು ಸಾಮಾನ್ಯವಾಗಿ ನೀವೆಲ್ಲಾ ಕೇಳಿರಬಹುದು..ನಿಜ ಹೆಣ್ಣು ಸೌಂದರ್ಯದ ಬೀಡು.. ಸಾಮಥ್ರ್ಯ, ಗುಣ, ಗೌಣ, ಸಾಮಿಪ್ಯಗಳ ಸಮುದ್ರ ಹೌದು. ಹೆಣ್ಣು ಮಗು ಕುಟುಂಬವೊಂದರ ಜೀವಾಳವೆಂದು ಕುಮಾರಸಂಭವದಲ್ಲಿ ಉಲ್ಲೇಖಿಸಿದ್ದರೆ,ಮಹಾಭಾರತದೊಳಗೆ ಹೆಣ್ಣಿನಲ್ಲಿ ಸೌಭಾಗ್ಯ ಹಾಗೂ ಸೊಬಗು ಸದಾ ನೆಲೆಗೊಂಡಿರುತ್ತದೆ ಎಂಬ ಮಾತನ್ನು ಹೇಳಲಾಗಿದೆ. ಅಂದರೆ ಹೆಣ್ಣು ಸಾಮಾನ್ಯದವಳಲ್ಲ ಅಂದಿನಿಂದ ಇಂದಿನವರೆಗೂ ಅವಳ ಇತಿಹಾಸದ ವೈಖರಿಯೇ ದೀರ್ಘವಾಗಿದೆ. ಅವಳು ಕಷ್ಟ-ಸುಖ ಎರಡರಲ್ಲೂ  ಸಮಾನವಾಗಿ ಹೊಂದಿಕೊಳ್ಳುವವಳು. ಅವಳಿಗೆ ಅವಳೆ ಸಾಟಿ. ಚಿಕ್ಕ ಮಗುವಾಗಿದ್ದಾಗ ಮಗುವಾಗಿ, ಸ್ವಲ್ಪ ದೊಡ್ಡವಳಾದ ಮೇಲೆ ಮನೆಯ ಮಗಳಾಗಿ, ಆನಂತರ ಮದುವೆಯಾದ ಮೇಲೆ ಮಡದಿಯಾಗಿ, ಇನ್ನೊಬ್ಬರ ಮನೆಯ ಸೊಸೆಯಾಗಿ, ಬೇರೆಯವರ ಮನೆ ಬೆಳಗುವ ಜ್ಯೋತಿಯಾಗಿ, ಮಗುವಾದ ನಂತರ ತಾಯಿಯಾಗಿ, ಮೊಮ್ಮಗುವಾದಾಗ ಅಜ್ಜಿಯಾಗಿ ಹೀಗೆ ನಾನಾ ರೂಪದಲ್ಲೂ, ಎಲ್ಲ ಥರದಲ್ಲೂ ತಾಯಿ ಎಂದು ಪೂಜಿಸುವ ಮಾತೆಯಾಗಿರುತ್ತಾಳೆ. ಸಹಜವಾಗಿ ಅವಳ ಕಷ್ಟಗಳು, ಸೇವೆಗಳು, ಇನ್ನೊಬ್ಬರ ಸುಖಕ್ಕೆ ಸಂತೋಷಕ್ಕೆ ಇರುತ್ತದೆಯೇ ಹೊರತು ಅವಳಿಗಾಗಿ ಇರೋದಿಲ್ಲ. ಎನೇ ಕಷ್ಟಬಂದರೂ ನಾನಾ ವಿಧದಲ್ಲಿ ಸಹಿಸಿಕೊಳ್ಳುವ ಶಕ್ತಿ ಕೂಡ ಅವಳಿಗಿರುತ್ತದೆ ಎಂದರೆ ತಪ್ಪಿಲ್ಲ..
ನಾವು ಕೂಡ ಒಂದು ಹೆಣ್ಣನ್ನು ಯಾವ ರೀತಿ ನೋಡಬಹುದು ಎಂಬುದನ್ನು ಒಮ್ಮೆ ಯೋಚಿಸಿ ನೋಡಿದರೆ, ಉಪಯೋಗಕ್ಕಾಗಿಯೇ ಬಳಸಿಕೊಳ್ಳುತ್ತೇವೆ ಅನ್ನಿಸುತ್ತೆ. ಹುಡುಗನೊಬ್ಬ ಹುಡುಗಿಯನ್ನು ಪ್ರೀತಿ ಬಲೆಯಲ್ಲಿ ಬಿಳಿಸಿಕೊಂಡು ಅವಳಿಂದ ಎಲ್ಲಾ ಸುಖ ಪಡೆದ ಮೇಲೆ ಒಬ್ಬಳನ್ನೇ ಎಕಾಂಗಿಯಾಗಿಸಿ ಕೈ ಬಿಟ್ಟು ಹೋಗುವ ಪರಿ, ಗಂಡನಾದವನು ಮನೆಯಲ್ಲಿ ಕೆಲಸ ಮಾಡಿಕೊಳ್ಳುವ ಮತ್ತು ಅವಳ ಜೊತೆ ಸರಸವಾಡುವ ಸಮಯ ಬಂದಾಗ, ‘ನೀನೇ ಚಿನ್ನಾ, ನೀನೇ ಬಂಗಾರವೆಂದು’ ಅವಳನ್ನು ಬಣ್ಣ ಬಣ್ಣವಾಗಿ ಕರೆದು, ಎಲ್ಲವನ್ನೂ ಪಡೆದಾದ ಮೇಲೆ ಕೂಗಿ ರಂಪಾಟ ಮಾಡುವ ಪರಿ, ಮಗುವಾಗಿದ್ದಾಗ ತಾಯಿಯ ಎಲ್ಲಾ ಪ್ರೀತಿ ಅನುಭವಿಸಿ, ಆನಂತರ ಅವಳ ಇಳಿವಯಸ್ಸಿನಲ್ಲಿ ವೃದ್ಧಾಶ್ರಮಕ್ಕೆ ದೂಡುವ ಪರಿ,ಹಿಂದಿನಿಂದ ಇಂದಿನವರೆಗೂ ನಡೆದು ಬಂದಿದ್ದು,ಈಗಲೂ ನಡೆಯುತ್ತಿದೆ..ಇದು ಒಂದು ರೀತಿಯ ದೌರ್ಜನ್ಯವಾದರೆ, ಇನ್ನೂ ನಾವೇ ಕಂಡುಹಿಡಿದುಕೊಂಡ ‘ಅಲ್ಟ್ರಾಸೌಂಡ್’ ಎಂಬ ತಂತ್ರಜ್ಞಾನದಿಂದ ಭ್ರೂಣದ ಲಿಂಗವನ್ನು ಪತ್ತೆಹಚ್ಚಿ ಅದು ಹೆಣ್ಣು ಮಗುವಾಗಿದ್ದರೆ ಅದನ್ನು ಹತ್ಯೆಮಾಡಿ ಅಲ್ಲಿ ಕೂಡ ರಾಕ್ಷಸತನ ತೋರುವ ಮಾನವತಾವಾದಿಗಳು ನಾವು. ಇದುವರೆಗೂ ಮಹಿಳೆಯರ ಸ್ಥಿತಿಗತಿ, ಭೇದಭಾವ, ಕ್ರೌರ್ಯ ಇತ್ಯಾದಿಗಳನ್ನು ತಡೆಯಲು ವಿಚಾರ ಸಂಕೀರ್ಣ,ಮಹಿಳಾಮಣಿಗಳ ಸಂಘ ಹೋರಾಟ ನಡೆದರೂ ಅದು ಸಾಕ್ಷ್ಯಾಧಾರ ಚಿತ್ರಣವಾಗಿಯೇ ಉಳಿದಿದೆ ಹೊರತು ನಿಲ್ಲಿಸುವ ಸಾಮಾಜಿಕ ಗುರಿಯ ಗೆಲುವು ಆಗಿಲ್ಲ. ಇದಕ್ಕೆ ತಾಂತ್ರಿಕತೆಯ ಪರವಾದ ಕೇವಲ ಲಾಭ ಕೇಂದ್ರೀಕೃತ, ಧನದಾಹೀ ಸಮಾಜದ ಧೋರಣೆಗಳೇ ಮುಖ್ಯಕಾರಣ ಎನ್ನಬಹುದಾಗಿದೆ. ನಾವು ಆಡುವ ಭಾಷೆಗೆ ‘ತಾಯ್ನುಡಿ’ ಬದುಕುವ ನಾಡಿಗೆ ‘ತಾಯ್ನಾಡು’ ಎನ್ನುತ್ತೇವೆ. ಅಲ್ಲದೇ ನಮ್ಮನ್ನು ಹೆತ್ತವಳು ಹೆಣ್ಣು, ಅವಳೇ ನಮಗೆ  ಮೊದಲ ದೇವರು, ಮುಂದೆ ಜೀವನದ ನೋವು-ನಲಿವಲ್ಲಿ ಜೊತೆಯಾಗಿ ಸಂಗಾತಿಯಾಗುವವಳು ಹೆಣ್ಣು. ಇಷ್ಟೆಲ್ಲಾವನ್ನು ಅರಿತು ಹೆಣ್ಣಿನ ಮೇಲೆ ಮಾಡುವ ದೌರ್ಜನ್ಯವನ್ನು ಬಿಟ್ಟು, ಜನಪ್ರೀಯ ಸಂಸ್ಕ್ರತಿ ಮತ್ತು ಮಾಧ್ಯಮಗಳಲ್ಲಿ ಹೆಣ್ಣನ್ನು ವ್ಯಾಪಾರದ ದೃಷ್ಟಿಯಿಂದ ತೋರುವುದನ್ನು ವಿರೋಧಿಸಬೇಕು. ತುಕ್ಕು ಹಿಡಿದ ಹಳಸಿದ ಸಾಮಾಜಿಕ ಮೌಲ್ಯಗಳನ್ನು ದಿಕ್ಕರಿಸಿ ಮಹಿಳೆಯರ ಮತ್ತು ಮಕ್ಕಳ ಕ್ಷೇಮಾಭಿವೃದ್ಧಿಯ ಬಗ್ಗೆ ಚಿಂತನೆ ನಡೆಸಿ ಕಾರ್ಯಮಗ್ನರಾಗಬೇಕು. ಆಗಲೇ ಅವಳಿಗೊಂದು ಸಮಾಜದಲ್ಲಿ ಬೆಲೆ ಸಿಗುತ್ತದೆ ಅಲ್ವಾ ಏನಂತೀರಿ..!?

No comments:

Post a Comment