Thursday 5 February 2015

ಕಂಬಳ ಕಂಡೀರಾ!!?



ಸಾಮಾನ್ಯವಾಗಿ ನವೆಂಬರ್‍ನಿಂದ ಪ್ರಾರಂಭವಾಗಿ ಮಾರ್ಚ್ ತಿಂಗಳ ಅಂತ್ಯದವರೆಗೆ ನಡೆಯುವ ಹಾಗೂಮೊದಲ ಭತ್ತದ  ಬೆಳೆಯ ಕೊಯ್ಲು ಮುಗಿದು ಎರಡನೇ ಸುಗ್ಗಿ ಬೆಳೆಗೆ ಭೂಮಿ ಹದ ಮಾಡುವ ಸಮಯದಲ್ಲಿ ನಡೆಯುವುದೇ ಕರಾವಳಿ ದಕ್ಷಿಣ ಕನ್ನಡ ಜಿಲ್ಲೆಯ ಪುರಾತನ ಹಾಗೂ ವಿಶಿಷ್ಟ ಮಾದರಿಯ ಸಾಂಸ್ಕ್ರತಿಕ ಕ್ರೀಡೆಯೆ “ಕಂಬಳ”.. ಕರಾವಳಿಯ ಜನರ ಜೀವನ ವೃತ್ತಿಯ ಸಮಯದಲ್ಲಿ ಬೇಸಾಯದ ಜೊತೆಗೆ ಕೋಳಿ-ಕೋಣ,ದನ-ಕರು, ನಾಯಿ-ಬೆಕ್ಕುಗಳನ್ನು ಸಾಕುವುದು ಕೂಡ ಬದುಕಿನಲ್ಲಿ ಹುದುಗಿ ಹೋಗಿರುವ ಅಂಶ. ಬೇಸಾಯದ ಸಂದರ್ಭದಲ್ಲಿ ಬೇಸಾಯಕ್ಕಿಂತ ಮುಂಚೆ ಗದ್ದೆ ಉಳುಮೆ ಮಾಡಿ, ಅದರಲ್ಲಿ ಕೋಣಗಳನ್ನು ಓಡಿಸಿ ಓಟದ ಸ್ಫರ್ಧೆಯಾಗಿಸಿ ಕೃಷಿ ಬದುಕನ್ನು ಸಂಭ್ರಮಿಸುವ ಸಾಂಕೇತಿಕತೆಯೇ ಕಂಬಳ ಆಗಿದೆ..ಇನ್ನೊಂದು ಅರ್ಥದಲ್ಲಿ ಹೇಳೋದಾದರೆ ದಷ್ಟ-ಪುಷ್ಟವಾಗಿ ಬೆಳೆಸಿದ ಕೋಣಗಳನ್ನು ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿಓಡಿಸುವ ಸ್ಪರ್ಧೆಯೇ ಕಂಬಳ ಎನ್ನಬಹುದು. ಕಂಬಳ ಕರಾವಳಿ ಕರ್ನಾಟಕದ ಜಾನಪದ ಕ್ರೀಡೆ ಯಾಗಿದ್ದು,ಇದಕ್ಕೆ 800 ರಿಂದ 900 ವರ್ಷಗಳ ಇತಿಹಾಸವಿದೆ.ಕಂಬಳದ ಬಗ್ಗೆ ಉಲ್ಲೇಖವಿರುವ ಅನೇಕ ಶಾಸನಗಳು ದೊರಕಿದ್ದು ಉಡುಪಿಯ ಕೆಂಜೂರಿನಲ್ಲಿ ದೊರಕಿರುವ ಆಳುಪರಾಣಿ ಬಲ್ಲಮಹಾದೇವಿಗೆ ಸೇರಿದ ಕಲ್ಬರಹದಲ್ಲಿ ಕಂಬಳದ ಉಲ್ಲೇಖವಿರುವುದು ಕಂಡುಬರುತ್ತದೆ. ಮುಖ್ಯವಾಗಿ ಹಿಂದಿನ ಕಾಲದಲ್ಲಿ ರಾಜರುಗಳ ಬೆಂಬಲ ಮತ್ತು ಪ್ರೋತ್ಸಾಹದೊಂದಿಗೆ ನಡೆಯುತ್ತಿದ್ದ ಕಂಬಳ ಇದೀಗ ಪದ್ದತಿ ಉಳಿಸಿಕೊಂಡು ಬಂದಿರುವ ಮನೆಯವರ ಆಯೋಜನೆಯಲ್ಲಿ ಸ್ಪರ್ಧೆಯ ರೂಪದಲ್ಲಿ ನಡೆಯುತ್ತಿದೆ. ಪ್ರಾರಂಭದಲ್ಲಿ ಇದೊಂದು ಸ್ಫರ್ಧೆಯಾಗಿರದೆ, ಸಾಮೂಹಿಕ ಶ್ರಮ ಸಂಸ್ಕ್ರತಿಯ ಮೂಲಕ ಭತ್ತದ ಶ್ರಮ ಸಂಸ್ಕ್ರತಿಯನ್ನು ಪ್ರೋತ್ಸಾಹಿಸುವುದಾಗಿತ್ತಂತೆ.ಮತ್ತೊಂದು ಕಥೆಯ ಪ್ರಕಾರ,ಸುಗ್ಗಿಯ ಬೆಳೆಯನ್ನು ಮದುಮಗಳಿಗೆ ಹೋಲಿಸುತ್ತಿದ್ದ ಅಂದಿನ ಜನ ಕಂಬುಲವನ್ನು ಭೂಮಿಗೆ ಹೋಲಿಸಿ ಗದ್ದೆ ಮಧ್ಯೆ ಬಾಳೆಗಿಡ ನೆಟ್ಟು ಅವೆರಡರ ಮದುವೆ ಸಮಾರಂಭವೆಂಬಂತೆ ಈ ಕ್ರೀಡೆಯನ್ನು ಆಚರಣೆ ತಂದಿದ್ದಾರೆಂದು ಹಿರಿಯರು ಹೇಳುತ್ತಾರೆ.

ಕರಾವಳಿ ಕರ್ನಾಟಕದ ಜನಪದ ಆಚರಣೆಯಾದ ಕಂಬಳದಲ್ಲಿ ಗದ್ದೆಯ ಮಧ್ಯೆ ಕೋಣಗಳು ಓಡುವಾಗ ಆಗಸದೆತ್ತರಕ್ಕೆ ಚಿಮ್ಮುವ ಗದ್ದೆಯ ಕೆಸರಿನ ವೈಭವದ ಅಂದ ಒಮ್ಮೆ ನೋಡಬೇಕು ಅದರ ಅನುಭವವೇ ಒಂಥರ ವಿಶಿಷ್ಟವಾದದು.ಕಂಬಳ ಧಾರ್ಮಿಕ ಹಾಗೂ ಫಲವಂತಿಕೆಯ ಆಚರಣೆ ಕೂಡ ಹೌದು. ತುಳುನಾಡಿನಲ್ಲಿ ಈಗಲೂ ತನ್ನದೇ ಶೈಲಿಯಲ್ಲಿರುವ ಕೋಣಗಳ ಈ ಓಟ.ಇದೀಗ ವ್ಯಾವಹಾರಿಕ ಆಯಾಮ ಪಡೆದು ಸಾಂಗಿಕ ಬಲದೊಂದಿಗೆ ಬೆಳೆಯುತ್ತಿರುವುದು ಹಿಂಸೆಯೆಂಬ ಮನೋಭಾವ ತಳೆದಿದೆ. ಭತ್ತದ ಕೊಯಿಲಿನ ನಂತರ ರೈತರ ಮನೋರಂಜನಗೋಸ್ಕರ ಎರ್ಪಡುತ್ತಿದ್ದ ಈ ಆಟ, ಉಳ್ಳವರ ಸೋಲು ಗೆಲುವಿನ ಪೈಪೋಟಿಯಲ್ಲಿ ನಿಷೇಧವೆಂಬ ಪ್ರಶಸ್ತಿ ಪಡೆಯೋವರೆಗೂ ಹೋಗಿದ್ದು  ಒಂದು ರೀತಿಯ ಅಸಹನೆಯೇ ಎನ್ನಬಹುದು. ಮೂಲತಃ ಕಂಬಳಗದ್ದೆ ಎನ್ನುವುದು ಉತ್ಪತ್ತಿ ತರುವ ಹೊಲವಾಗಿದ್ದು, ಧಾರ್ಮಿಕ ಆಚರಣೆಯ ಭಾಗವೇನೂ ಆಗಿರಲಿಲ್ಲ. ನಿಧಾನವಾಗಿ ಈ ಹೊಲಗಳು ದೇವಸ್ಥಾನದ ಸೇವೆಗೆ ಧಾನ ಬಿಟ್ಟಿದ್ದರಿಂದ ಧಾರ್ಮಿಕ ಹಿನ್ನಲೆ ಒದಗಿ ಬಂದಿರಬಹುದೆಂದು ಅಭಿಪ್ರಾಯಿಸಲಾಗಿದೆ.
ಪ್ರಸ್ತುತ ತುಳು-ಕರಾವಳಿಯ ಭಾಗದಲ್ಲಿ 30 ಕ್ಕೂ ಹೆಚ್ಚು ಸ್ಥಳದಲ್ಲಿ ಕಂಬಳದ ಆಚರಣೆ ಇಂದು ಇರುವುದಲ್ಲದೇ,ಇತ್ತೀಚಿನ ದಿನಗಳಲ್ಲಿ ಓಟದ ಕೋಣಗಳನ್ನು ಸಾಕುವುದು ಒಂದು ಘನತೆ,ಸೋಲು-ಗೆಲುವು ಮರ್ಯಾದೆ,ಬಹುಮಾನ ಪಡೆಯುವುದು ಪ್ರತಿಷ್ಠೆಯ ವಿಚಾರ ಕೂಡ ಆಗಿದೆ.
ತೀರಾ ಇತ್ತೀಚೆಗೆ ಕಂಬಳವೆನ್ನುವುದು ಪ್ರಾಣಿ ಹಿಂಸೆ, ಅದನ್ನು ನಿಷೇಧಿಸಬೇಕೆನ್ನುವ ಸರ್ಕಾರದ ತೀರ್ಮಾನಕ್ಕೆ ಕರಾವಳಿ ಜನ ಅಸಮಾಧಾನವಾಗಿದ್ದರು. ಹಿಂದೆ ಇದ್ದ ಅನೇಕ ಜಾನಪದ ಕ್ರೀಡೆಗಳು ಮರೆಯಾಗುತ್ತಿರುವ ಇಂದಿನ ಆಧುನಿಕತೆಯಲ್ಲಿ ಈಗಿರುವ ಆಟವನ್ನು ನಿಷೇಧಿಸಿದರೆ,ಮುಂದೆಲ್ಲಿ ಇದನ್ನು ಕಾಣುವುದು ಎಂಬ ಪ್ರಶ್ನೇ! ಎಲ್ಲರಲ್ಲೂ ಉದ್ಭವಿಸುವುದು ಸಹಜ ಆದರೀಗ ಅದಕ್ಕೆ ಸುಪ್ರಿಂಕೋರ್ಟ್ ತಡೆಯಾಜ್ಞೆ ನೀಡಿದ್ದು, ಸಿಸಿಟಿವಿ ಸೇರಿದಂತೆ ಹಲವಾರು ಷರತ್ತಿನಡಿ ಹಿಂಸೆ ನೀಡದೆ ಕಂಬಳ ನಡೆಸಲು ಅನುಮತಿ ನೀಡಿದ್ದು ಖುಷಿ ಕೊಡುವ ವಿಚಾರ.. ಮುಂದೆಯೂ ಕೂಡ ಎಂದಿನಂತೆ ಕಂಬಳ ನಡೆಯುತ್ತೆ, ರೈತಮಿತ್ರರಿಗೆ ಮನರಂಹನೆ ದೊರಕುತ್ತದೆ ಎಂಬುದು ಸಂತೋಷದ ವಿಚಾರ. ಎನೇ ಇರಲಿ ಸಾಮಾನ್ಯವಾಗಿ ಕುದುರೆ,ಶ್ವಾನದಂತಹ ಪ್ರಾಣಿಗಳ ಆಟಕ್ಕೆ ವಿದೇಶದಲ್ಲೇ ಭಾರಿಮನೋರಂಜನೆ ಸಿಗುತ್ತಿರುವಾಗ ಈ ಕಾಲದಲ್ಲಿ ನಮ್ಮ ಶತಮಾನದ ಇತಿಹಾಸವಿರುವ ಈ ಹಳ್ಳಿ ಸೊಗಡಿನ ಪ್ರಾಚೀನ ಕಾಲದ ಕಂಬಳದ ಕ್ರೀಡೆಗೆ ವಿದೇಶಿಯರು ಕೂಡ ಆಕರ್ಷಿತರಾಗಿ ನಮ್ಮ ಈ ಕ್ರೀಡೆ ವಿಶ್ವವ್ಯಾಪಿಯಾಗುವುದರಲ್ಲಿ ಯಾವ ಸಂಶಯವೂ ಇಲ್ಲ.ಇಂತಹ ಹಿನ್ನೆಲೆ,ಹಿರಿಮೆ ಮೇಲ್ತನವನ್ನು ಹೊಂದಿರುವ ಕರುನಾಡಿನ ಕಂಬಳ ವಿಶ್ವದೆಲ್ಲೆಡೆ ಹರಡಿ ಕರುನಾಡಿನ ಸಂಸ್ಕ್ರತಿ ಇನ್ನೂ ಹೆಚ್ಚಾಗಿ ಹಬ್ಬಿ ಕರುನಾಡ ಕಂಪು ಎಲ್ಲೆಡೆ ಸೂಸಲಿ ಎಂಬುದು ನನ್ನ ಹೆಬ್ಬಯಕೆ.

ಕಂಬಳದ ವಿಧಗಳು:
1.ಬಾರೆ ಕಂಬಳ
2.ಪೊಕರೆ ಕಂಬಳ
3.ಅರಸು ಕಂಬಳ
4.ಆಧುನಿಕ ಕಂಬಳ

ಕಂಬಳ ಗದ್ದೆಯ ವಿಧಗಳು:
1.ಒಂಟಿ ಗದ್ದೆಯ ಕಂಬಳ
2.ಜೋಡಿ ಗದ್ದೆಯ ಕಂಬಳ

ಕಂಬಳದ ವಿಶಿಷ್ಟತೆ:
ಕಂಬಳ ಗದ್ದೆಯ ಜೊತೆ ಕಂಬಳದಲ್ಲಿ ಭಾಗಿಯಾಗುವ ಕೋಣಗಳನ್ನು ಸಿಂಗರಿಸುವುದು. ಒಬ್ಬ ವ್ಯಕ್ತಿ ಸಿಂಗರಿಸಿದ ಕೋಲಿನಿಂದ ತನ್ನದೇ ಶೈಲಿಯಲ್ಲಿ ಕೂಗುತ್ತಾ ಕೋಣಗಳನ್ನು ಓಡಿಸುವುದು.





No comments:

Post a Comment