Wednesday 11 March 2015

ಎಕ್ಸಾಮ್ ಓ.ಕೆ... ಟೆನ್ಷನ್ ಯಾಕೆ...


        ದೊಂದು ಕೆಟ್ಟ ಸುದ್ಧಿ; ಸುಮಾರು ಪತ್ರಿಕೆಗಳಲ್ಲಿ ಟಿ.ವಿಯಲ್ಲಿ ಅದರ ತಕ್ಕಮಟ್ಟಿಗೆ ಸುದ್ಧಿ ಪ್ರಕಟವಾಗಿತ್ತು. ಪ್ರತಿಭಾವಂತ ವಿದ್ಯಾರ್ಥಿಯೊಬ್ಬ ಪರೀಕ್ಷೆ ಬರೆದ ನಂತರ ಫಲಿತಾಂಶದ ಕುರಿತು ತಳಮಳಗೊಂಡು, ವಿಕೃಮನಸ್ಸಿನ ಭಾವನೆಗೆ ಸಿಕ್ಕಿ ತಳಮಳಗೊಂಡು ಆತ್ಮಹತ್ಯೆಗೆ ಶರಣಾಗಿದ್ದ. ಎಲ್ಲಾ ಮುಗಿದು ಪರೀಕ್ಷೆ ಫಲಿತಾಂಶ ಬಂದಾಗ ಅವನು ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದ.
ಹೌದು ನಮ್ಮಲ್ಲಿ ಅನೇಕ ವಿದ್ಯಾರ್ಥಿಗಳು ಪರೀಕ್ಷೆಗೆ ಸಂಬಂಧಿಸಿದ ಆತಂಕಕ್ಕೆ ಒಳಗಾಗುತ್ತಾರೆ. ಫಲಿತಾಂಶ ಹೇಗೆ ಬರುತ್ತದೆಯೋ ಏನೋ? ಮನೆಯಲ್ಲಿ ಅಪ್ಪ ಬೈತಾರೇನೋ? ಸಫೋಸ್ ನಾನು ಫೇಲಾದರೆ!?, ನನ್ನ ಕಥೆ ಮುಗಿದೆ ಹೋಯಿತು ಎಂದು ನಲುಗುತ್ತಾರೆ. ಈ ರೀತಿಯ ಮನಸ್ಥಿತಿಗಳೇ ಮೇಲೆ ಹೇಳಿದ ಕೆಟ್ಟ ಸುದ್ದಿಗೆ ಕಾರಣ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಪರೀಕ್ಷೆ ಎದುರಿಸುವ ಮತ್ತು ಫಲಿತಾಂಶ ಸ್ವಿಕರಿಸುವ ಮನೋಭಾವ ಒಬ್ಬರಿಗಿಂತ ಒಬ್ಬರಲ್ಲಿ ಭಿನ್ನವಾಗಿರುತ್ತದೆ. ಕಎಲವರು ಪರೀಕ್ಷೆ ಮುಗಿಯುತ್ತಿದ್ದಂತೆ ನಿರಾಳರಾದರೆ,ಇನ್ನು ಕೆಲವರು ಮುಂದೆ ಓದುವ ಕಾಟ ತಪ್ಪಿತಲ್ಲ ಎಂದು ಸಂತಸಪಡುತ್ತಾರೆ, ಗೆಳೆಯರೊಂದಿಗೆ ಪ್ರವಾಸ, ಪಾರ್ಟಿ, ಚಲನಚಿತ್ರ, ವಿಕ್ಷಣೆಯ ಮೂಲಕ ಸಂಭ್ರಮ ಪಡುತ್ತಾರೆ. ಕೆಲವರಿಗೆ ಪರೀಕ್ಷೆಯ ಪ್ರಾರಂಭದಿಂದ ಹಿಡಿದು ಫಲಿತಾಂಶ ಪ್ರಕಟವಾಗುವವರೆಗೂ ಹೃದಯ ಜೋರಾಗಿ ಬಡಿದುಕೊಳ್ಳುತ್ತಲೆ ಇರುತ್ತದೆ. ಇನ್ನೊಂದಿಷ್ಟು ವಿದ್ಯಾರ್ಥಿಗಳು  ಏನೇ ಭಯವಿದ್ದರೂ ತಮ್ಮ ಅಂತರಂಗದೊಳಗೆ ಇಟ್ಟುಕೊಂಡು ಒದ್ದಾಡುತ್ತಿರುತ್ತಾರೆ.
ಇಂದಿನ ಸ್ಫರ್ದಾತ್ಮಕ ಯುಗದಲ್ಲಿ ಫಲಿತಾಂಶ ಕಡಿಮೆಯಾದರೆ, ಮಗುವಿನ ಶೈಕ್ಷಣಿಕ ಬದುಕು ಭವಿಷ್ಯವೆರಡು ಡೋಲಾಯಮಾನವಾಗುತ್ತದೆ. ಹಾಗಂತ ಪರೀಕ್ಷೆಯೇ ಎಲ್ಲದಕ್ಕೂ ಅಂತಿಮ ಮಾನದಂಡವಲ್ಲ. ಓದು ಬೇಕು ಆದರೆ ಭಯದ ಓದು ಬೇಡ. ಪರೀಕ್ಷಾ ಭಯದಿಂದ ದೂರವಾಗಿ ಧೈರ್ಯದಿಂದ ಅತ್ಯಂತ ಸಮರ್ಥವಾಗಿ ಪರೀಕ್ಷೆಯನ್ನು ಎದುರಿಸಬೇಕು. ಪರೀಕ್ಷೆ ನಡೆದಾದ ಮೇಲೆ ಹಾಗಾಯ್ತು- ಹೀಗಾಯ್ತು ಅಂತ ತಲೆ ಕೆಡಿಸಿಕೊಳ್ಳದೇ ಏನೇ ಆದರೂ ಸ್ವೀಕರಿಸುವೇ ಎನ್ನುವ ಧೃಡತೆ ಮನದಲ್ಲಿ ಮೂಡಿಸಿಕೊಳ್ಳಬೇಕು. ತಂದೆ-ತಾಯಂದಿರೂ ಅಷ್ಟೇ ಮಕ್ಕಳಿಗೆ ಪರೀಕ್ಷೆಯನ್ನು ಭಯದ ನೆರಳಲ್ಲಿ ಇಟ್ಟು ತೋರಿಸಬೇಡಿ.
ಸಾಮಾನ್ಯವಾಗಿ ವಿದ್ಯಾರ್ಥಿಗಳ ಎದೆಯಲ್ಲಿ ಆತಂಕ, ದುಗುಡ, ತಳಮಳ ಆರಂಭವಾಗುವುದೇ ಈ ಪರೀಕ್ಷೆಗಳ ಸಮಯ ಬಂದಾಗ, ಎಲ್ಲವನ್ನೂ ಓದಿ ಪರಿಪೂರ್ಣರಾಗಿದ್ದರೂ, ಮನಸ್ಸಿನಲ್ಲಿ ಅದೇನೋ ಒಂದು ರೀತಿಯ ಭಯ ಮನೆಮಾಡಿರುತ್ತದೆ. ಈ ಭಯಗಳನ್ನು ಹೇಗೆ ಹೋಗಲಾಡಿಸಿಕೊಳ್ಳುವುದು?, ಹೇಗೆ ಪರೀಕ್ಷೆಯನ್ನು ನಿರ್ಭಯವಾಗಿ ಎದುರಿಸುವುದು?, ಮನಸ್ಸಿನ ತುಮುಲಗಳನ್ನು ನಿವಾರಿಸಿಕೊಂಡು ಪರೀಕ್ಷೆಯ ಭಯ ನಿವಾರಿಸಿಕೊಳ್ಳುವುದು ಎಂಬ ಚಿಂತನೆಯಲ್ಲಿ ನೀವಿದ್ದರೆ ದಯವಿಟ್ಟು ಕೆಳಗಿನ ಅಂಶಗಳನ್ನು ಪಾಲಿಸಿ, ಯಶಸ್ಸು ನಿಮ್ಮದಾಗುವುದು ಖಂಡಿತ.
1. ಸರಿಯಾದ ವೇಳಾಪಟ್ಟಿ ಇರಲಿ ನಿಮ್ಮ ಓದಿಗೆ :
ನಿಮ್ಮ ಓದಿನ ಪೂರ್ವ ತಯಾರಿಯ ಜೊತೆಗೆ ಸರಿಯಾದ ವೇಳಾಪಟ್ಟಿ ನಿಮ್ಮ ಬಳಿ ಇರಲಿ. ಒಂದೊಂದು ವಿಷಯಕ್ಕೆ ಇಂತಿಷ್ಟು ಸಮಯ ಎಂಬಂತೆ ಅದರಲ್ಲಿ ಪ್ರತಿಯೊಂದು ವಿಷಯಕ್ಕೂ ಮನ್ನಣೆ ಇರಲಿ. ಟೈಮ್ ಟೇಬಲ್  ಗೋಡೆಗೆ ಮಾತ್ರಾ ಸೀಮಿತವಾಗಿರದೇ ಪಾಲಿಸುವ ಮನಸ್ಸಿನ ಗೋಡೆಯ ಮೇಲೂ ಅದನ್ನು ಅಚ್ಚೊತ್ತಿಕೊಂಡಿರಿ. ಪ್ರತಿ ವಿಷಯದ ಓದಿನ ನಡುವೆ 5/10 ನಿಮಿಷಗಳ ಅಂತರವಿರಲಿ.
2. ಸಮರಭ್ಯಾಸಕ್ಕೆ ಇಂದೇ ಅಡಿ ಇಡಿ;
  ಪರೀಕ್ಷೆ ಎನ್ನುವುದು ಒಂದು ರೀತಿಯಲ್ಲಿ ಯುದ್ಧವಿದ್ದ ಹಾಗೇ. ಅದಕ್ಕೆ ಯುದ್ಧಬ್ಯಾಸ ಇಂದೇ ಪ್ರಾರಂಭವಾಗಲಿ. ಬಹುತೇಕರು ಪರೀಕ್ಷೆಗೆ ಇನ್ನೂ ಅನೇಕ ವಾರಗಳಿವೆ. ಆಮೇಲೆ ಓದಿದರಾಯಿತು. ಎಂದು ಓದಿನ ಕಾರ್ಯಕ್ರಮವನ್ನು ಮುಂದೂಡುತ್ತಾ ಇರುತ್ತಾರೆ. ಇದು ತಪ್ಪು. ನೀವು ಇಂದಿನಿಂದಲೇ ಪರೀಕ್ಷೆಯ ಯುದ್ಧಕ್ಕೆ ಸನ್ನದ್ಧರಾಗಲೂ ಅಡಿ ಇಡಿ. ಇಂದೇ ಓದನ್ನು ಪ್ರಾರಂಭಿಸಿ.

3. ಗೊಂದಲಬೇಡ ನಿಮ್ಮ ಸಾಮಥ್ರ್ಯದ ಮೇಲೆ ನಂಬಿಕೆ ಇರಲಿ:
ಮನೋವಿಜ್ಞಾನಿಗಳ ಪ್ರಕಾರ ಗೊಂದಲವು ಮಾನಸಿಕ ಪ್ರಕ್ರಿಯೆ. ಕೆಲವು ಸಂಧರ್ಭಗಳಲ್ಲಿ ಇದು ಸ್ವಾಭಾವಿಕ, ಮನಸ್ಸು ಮಾಡಿದರೆ ಈ ಭಯದಿಂದ ಹೊರಬರಬಹುದು. ಮುಖ್ಯವಾಗಿ ಪರೀಕ್ಷೆ ಎದುರಿಸುವ ಸಮಯ ಅದಕ್ಕಿಂತ ಮುಂಚಿನ ಪರೀಕ್ಷಾಭ್ಯಾಸದಲ್ಲಿ ಗೊಂದಲ ಮಾಡಿಕೊಳ್ಳಬೇಡಿ. ನಿಮ್ಮ ವಿಶ್ವಾಸ ನಿಮ್ಮಲ್ಲಿರಲಿ. ನನ್ನ ಹತ್ತಿರ ಇದು ಸಾಧ್ಯ,ಅಂದುಕೊಂಡಿದ್ದಕ್ಕಿಂತ ಜಾಸ್ತಿನೇ ಸಾಧಿಸುತ್ತೇನೆ ಎಂಬ ನಂಬಿಕೆ ಮನದಲ್ಲಿರಲಿ. ಯಾವ ವಿಷಯ ಮೊದಲು ಓದಬೇಕು, ಯಾವುದಕ್ಕೆ ಎಷ್ಟು ಸಮಯ ಮೀಸಲಿಡಬೇಕು ಎಂಬುದನ್ನು ಬೇಗ ನಿರ್ಣಯಿಸಿ. ಅದಕ್ಕಾಗೆ ಸಮಯ ವ್ಯರ್ಥ ಮಾಡದಿರಿ.

4. ಓದಿನ ಜೊತೆ ಆಟ-ಊಟ- ಮನರಂಜನೆಯೂ ಇರಲಿ:
ಪರೀಕ್ಷೆಗಳು ಹತ್ತಿರವಾಗುತ್ತಿದ್ದಂತೆ ಬಹುತೇಕ ವಿದ್ಯಾರ್ಥಿಗಳು ಆಟ-ಊಟ- ಮನರಂಜನೆಗಳನ್ನು ದೂರತಳ್ಳಿ ಲೋಕದ ಸಂಪರ್ಕವನ್ನು ಒಂದು ಕೊಠಡಿಗೆ ಸೀಮಿತವಾಗಿ ಒಟ್ಟುಕೊಳ್ಳುತ್ತಾರೆ. ಇದರಿಂದ ಲಾಬಕ್ಕಿಂತ ನಷ್ಟವೇ ಹೆಚ್ಚು. ನಿಮ್ಮ ದಿನವಿಡೀ ಓದಿನ ಜೊತೆಗೆ ಎಲ್ಲ ಮನರಂಜನೆಯನ್ನು ಅನುಭವಿಸಿ. ಅದು ಮನಸ್ಸಿಗೆ ಉಲ್ಲಾಸ ನೀಡಿ ಓದಿನ ಸುಸ್ತನ್ನು ತೊಡೆದುಹಾಕುತ್ತದೆ.
5. ಮರೆಯುವಿಕೆಗೆ ಒಂದು ಸಣ್ಣ ಪಟ್ಟಿಯಿರಲಿ:
ಬಹುತೇಕರಿಗೆ ಗಣಿತ, ವಿಜ್ಞಾನದ ವಿಷಯಗಳು ಕಬ್ಬಿಣದ ಕಡಲೆಕಾಯಿ. ಅದನ್ನು ನೀವು ಸುಲಿದ ಬಾಳೆ ಹಣ್ಣಿನಂತೆ ಪರಿವರ್ತಿಸಿಕೊಳ್ಳಬೇಕೆಂದರೆ ಸೂತ್ರಗಳ, ಸರಳ ರೇಖಾ ಸಮೀಕರಣಗಳ, ರಾಸಾಯನಿಕ ಸೂತ್ರಗಳ, ಸಮಾಜ ವಿಷಯದ ಇಸವಿಗಳ ಒಂದು ಪಟ್ಟಿಯನ್ನು ತಯಾರಿಸಿಕೊಳ್ಳಬೇಕು. ಈ ರೀತಿ ನಿಮ್ಮ ಪಟ್ಟಿಯನ್ನು ನಿರ್ವಹಿಸಿದರೆ ಬಿಡುವಿನ ಸಮಯದಲ್ಲಿ ಒಮ್ಮೊಮ್ಮೆ ಅದರ ಮೇಲೆ ಕಣ್ಣಾಡಿಸುತ್ತಾ ಇದ್ದರೆ ಮರೆಯುವಿಕೆಯನ್ನು ತಡೆಯಬಹುದು.

6. ಓದಿನ ಮನನ ಮಾಡಲು ಒಂದಿಷ್ಟು ಸಮಯ ಮೀಸಲಿಡಿ:
ನೀವು ಎಷ್ಟು ಓದುತ್ತೀರಿ ಎನ್ನುವುದು ಮುಖ್ಯವಲ್ಲ. ಓದಿದ್ದು ಎಷ್ಟು ನೆನಪಿಟ್ಟುಕೊಂಡಿದ್ದೇವೆ ಎನ್ನುವುದು ಮುಖ್ಯ. ಓದಿನ ಮಧ್ಯೆ ಮಧ್ಯೆ ಅಥವಾ  ಬಸ್‍ನಲ್ಲಿ ಪ್ರಯಾಣಿಸುವಾಗ, ಎನಾದರೂ ಕೆಲಸ ಮಾಡುವಾಗ ಹೀಗೆ ಸಮಯ ಸಿಕ್ಕಾಗ ಓದಿದ್ದನ್ನು ಮನನ ಮಾಡಿಕೊಳ್ಳುತ್ತಿರಿ. ಹೀಗೆ ಮನನ ಮಾಡಿಕೊಳ್ಳುವುದರಿಂದ ಓದಿದ್ದು ಶಾಶ್ವತ ನೆನಪಿಟ್ಟುಕೊಳ್ಳಬಹುದಾಗಿದೆ.
7. ಬರೆದು ಓದಿ;
ಲೆಕ್ಕ ಬಿಡಿಸುವಾಗ ಅಥವಾ ರಾಸಾಯನಿಕ ಸೂತ್ರಗಳನ್ನು ಓದುವಾಗ ಸಾಧ್ಯವಾದಷ್ಟು ಬರೆದು ಓದಿ.ಇದರಿಂದ ನಿಮ್ಮ ಬರವಣಿಗೆಯ ವೇಗವು ಹೆಚ್ಚುವುದರ ಜೊತೆಗೆ ಓದಿದ್ದು ಮನಸ್ಸಲ್ಲಿ ಅಚ್ಚೊತ್ತಿ ನೆನಪಿನಲ್ಲಿರಲು ಸಹಾಯಕವಾಗುತ್ತದೆ.
8.ಪರೀಕ್ಷೆಯಲ್ಲಿ ಗಡಿಬಿಡಿಯಿಂದ ಒತ್ತಡಕ್ಕೆ ಸಿಲುಕಿಕೊಳ್ಳಬೇಡಿ:
ಎಲ್ಲಾ ಓದಿನ ನಂತರ ಪರೀಕ್ಷೆಗೆ ಕುಳಿತಾಗ ಒತ್ತಡವನ್ನು ತಂದುಕೊಳ್ಳಬೇಡಿ. ಪರೀಕ್ಷೆಯ ದಿನ ಆದಷ್ಟು ಕೂಲ್ ಆಗಿರಿ. ಒತ್ತಡಕ್ಕೆ ಸಿಲುಕಿ ಗಡಿಬಿಡಿ ಮಾಡಿಕೊಂಡರೆ ಗೊತ್ತಿದ್ದು ನೆನಪು ಹೋಗಬಹುದು. ಇಂತ ಪ್ರಶ್ನೆಗಳಿಗೆ ಇಷ್ಟು ಸಮಯದೊಳಗೆ ಉತ್ತರಿಸಿಕೊಳ್ಳಬೇಕು ಎಂದು ಮೊದಲೇ ಮನದಲ್ಲಿ ಟೈಮ್ ಸೆಟ್ ಮಾಡಿಕೊಂಡಿರಿ.

ಓದು ವಿದ್ಯಾರ್ಥಿಯ ಭವಿಷ್ಯದ ಅಡಿಪಾಯ ಹೌದು. ಆದರೆ ಅದೇ ಅವರ ಬದುಕಲ್ಲ. ಪೋಷಕರೇ ದಯವಿಟ್ಟು ಮಕ್ಕಳ ಮೇಲೆ ಒತ್ತಡ ಹೇರಬೇಡಿ. ಬದುಕು ಕಲಿಯುವುದಕ್ಕಾಗಿ ಮಕ್ಕಳು ಓದಬೇಕು. ಕಲಿಕೆ ಅವರ ಬದುಕನ್ನು ರೂಪಿಸಲು ಸಹಕಾರಿ ಹಾಗೆಯೇ ಪರೀಕ್ಷೆ ಕಲಿಕೆಯ ಗುಣಮಟ್ಟವನ್ನು ಪರೀಕ್ಷಿಸುವ ಮಾನದಂಡವಷ್ಟೆ. ವಿದ್ಯಾರ್ಥಿಗಳೇ ಇದರ ಬಗ್ಗೆ ಹೆದರುವ ಅವಶ್ಯಕತೆ ಇಲ್ಲ. ಧೈರ್ಯದಿಂದ ಎದುರಿಸಿ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ. ನಿಮ್ಮ ಓದನ್ನು ಇಂದೇ ಆರಂಭಿಸಿ ವಿದ್ಯಾರ್ಥಿಗಳೆ... ಅಲ್ ದಿ ಬೆಸ್ಟ್...

No comments:

Post a Comment