Friday 10 July 2015

ಹೆಣ್ಣು -7


        ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಮಾಮೂಲಿ ಎನ್ನುವಂತೆ ನಡೆದು ಹೋಗುತ್ತಲೇ ಇದೆ. ಪ್ರಕರಣಗಳು ನಡೆದ ಬೆನ್ನಲ್ಲೇ ಒಂದಷ್ಟು ಹೋರಾಟ, ಪ್ರತಿಭಟನೆ ಕೊನೆಗೆ ಆರೋಪಿಯ ಸೆರೆ ಅಂತಿಮವಾಗಿ ಆತನಿಗೊಂದಿಷ್ಟು ವರ್ಷದ ಜೈಲು ಸಜೆ ಹೀಗೆ ಏನಿದೆ ಅದರಲ್ಲಿ ಎನ್ನುವಷ್ಟು ಸಾರಾಸಗಟಾಗಿ ಬೆತ್ತಲೆ ಜಗತ್ತು ಹೆಣ್ಣಿನ ಮಾನವನ್ನು ದಿನೇ ದಿನೇ ಬೆತ್ತಲಾಗಿಸುತ್ತಿದೆ. ಅಷ್ಟೇ ಅಲ್ಲದೇ ಸಮಾಜದಲ್ಲಿ ಹೆಣ್ಣಿನ ಶೋಷಣೆ, ಕೀಳರಿಮೆ ಇತ್ಯಾದಿಗಳು ನಡೆಯುತ್ತಲೇ ಇದೆ. ಯಾಕೆ ನಮ್ಮ ಸಮಾಜ ಹೀಗಾಗುತ್ತಿದೆ? ಕಾಮದ ಕ್ರೂರ ಕತ್ತಿಗೆ ಇಂದಿನ ಹೆಣ್ಮಕ್ಕಳು ಬಲಿಯಾಗುತ್ತಿದ್ದಾರೆ? ಇಂತಹ ಸನ್ನಿವೇಶಗಳು ಎದುರಾಗಲೂ ಹೆಣ್ಣಿನ ತಪ್ಪು ಇರಬಹುದಾ? ಕಣ್ಣೇದುರೆ ಅನಿಷ್ಟ ನಡೆದು ಹೋದರೂ ಜನ ಸುಮ್ಮನೆ ಕುಳಿತುಕೊಳ್ಳಲು ಕಾರಣವಾಗುವ ಅನ್ಯ ಷಡ್ಯಂತ್ರಗಳು ನಡೆಯುತ್ತಿವೆಯಾ? ಎನ್ನುವ ಒಂದಿಷ್ಟು ವಿಚಾರಗಳು ಪ್ರಶ್ನೆಗಳಾಗಿ ಮೂಡಿ ಬರುತ್ತವೆ.




ಹಕ್ಕಿ ಬಯಸುವುದು ಬೆಚ್ಚಗಿನ ಗೂಡಿನ ಆಸರೆ, ಮಗು ಬಯಸುವುದು ಅಮ್ಮನ ತೋಳಿನ ಆಸರೆ, ಹಾಗೆಯೇ ಹೆಣ್ಣು ಯಾವಾಗಲೂ ಬಯಸುವುದು ಗಂಡಿನ ಆಸರೆ, ಆದರೆ ಅದೇ ಗಂಡು ಇಂದು ಹೆಣ್ಣನ್ನು ಮೋಹಿಸಿ ತನ್ನ ಭೋಗಕ್ಕಾಗಿ ಉಪಯೋಗಿಸಿ, ಎಲ್ಲ ಸುಖ ಪಡೆದ ಮೇಲೆ ನಿಷ್ಕಾರಣವಾಗಿ ಅವಳ ಮೇಲೆ ವೈರುಧ್ಯ ಸಾಧಿಸಿ, ಅವಳಿಗೂ ನನಗೂ ಯಾವ ಸಂಬಂಧವಿಲ್ಲ ಎನ್ನುವಂತೆ ನಡೆದುಕೊಂಡು ನೋವಿನ ಸರಪಳಿಯಲ್ಲೇ ತನ್ನ ಹಟವನ್ನೇ ಸಾಧಿಸುತ್ತಾನೆ. ಸದಾ ಹೆಣ್ಣಿನ ರೂಪ, ಅವಳ ದೇಹಕ್ಕೆ ಹಪಹಪಿಸುವ ಇಂದಿನ ಯುವ ಜನಾಂಗ ಕಾಮದ ಆಸೆಗೆ ಸೋತು, ರೇಪ್ ಎನ್ನುವ ರೌದ್ರವನ್ನು ಮೈಗೂಡಿಸಿಕೊಂಡು ತನ್ನ ಹುಟ್ಟಿಗೆ ಕಾರಣಳಾದ ಹೆಣ್ಣಿನ ಕುಲಕ್ಕೆ ಮಸಿ ಬಡಿದು, ಸಾಯಿಸುವ ಕ್ಷಣದವರೆಗೆ ಮೆರೆಯುತ್ತಿದೆ. ಜಗತ್ತು ಅಪ್ಡೇಟ್ ಆಗಿದೆ ನಾವು ಬದಲಾವಣೆಯ ಗಾಳಿಗೆ ಸಿಲುಕಿದ್ದೇವೆ ಅದೇ ಇಂದು ಇಷ್ಟೆಲ್ಲವುದಕ್ಕೆ ಕಾರಣ ಅನಿಸಿದರೆ ತಪ್ಪೇನು ಇಲ್ಲ. ಇಂದಿನ ಮೊಬೈಲ್ ಒಂದರಿಂದಲೇ ಹೆಣ್ಣು ಗಂಡಿನ ಬಣ್ಣದ ಮಾತಿಗೆ ಮರುಳಾಗಿ ಕಾಮಧಾಟಕ್ಕೆ ಸಿಲುಕಿ ಬೆತ್ತಲಾಗಿ ಬಳಲುತ್ತಿದ್ದಾಳೆ. ಕೆಲವೊಂದು ಪ್ರಕರಣಗಳಲ್ಲಿ ಹೆಣ್ಣಿನ ತಪ್ಪು ಇದೆ ಎನಿಸುತ್ತದೆ. ಯಾಕೆಂದರೆ ಅವಶ್ಯಕತೆಗೆ ಬಂದ ಒಂದಿಷ್ಟು ವಸ್ತುಗಳು ಅವಶ್ಯವಿಲ್ಲದೇ ಉಪಯೋಗಿಸಿ ಇಂದಿನ ಯುವ ಜನಾಂಗ ದಾರಿ ತಪ್ಪುತ್ತಿದೆ.
ಇವೆಲ್ಲವನ್ನು ಬಿಟ್ಟು ಮುಂದೆ ಹೋದರೆ ಹೆಣ್ಣಿಗೆ ಕಿರುಕುಳಗಳೂ ಸಹಜ ಎನಿಸುತ್ತದೆ. ವರ್ಗಗಳ ಪ್ರಾಬಲ್ಯ ಎಷ್ಟೋ ಬಾರಿ ಇನ್ನೊಬ್ಬರಿಗೆ ನೋವಾಗುತ್ತದೆ ಎಂದು ತಿಳಿದರೂ ಮೆರೆಯುತ್ತಲೇ ಇದೆ. ಒಂದು ಹುಡುಗಿ ಒಂಟಿಯಾಗಿ ನಡೆದುಕೊಂಡು ಹೋದರೆ ಆಕೆ ನೋಡುವವರಿಗೆ ಆಟಿಕೆಯ ಗೊಂಬೆಯಂತೆ ಕಾಣುತ್ತಾಳೆ. ಸಮಾಜ ಆಡುವ ಮಾತಿಗೆ ಅವಳ ಮೈ ಮನಸು ಎರಡು ಹದಗೆಡುವಂತಾಗುತ್ತಿದೆ. ರಸ್ತೆಯಲ್ಲಿ ಅಣ್ಣ ತಂಗಿಯರೇ ಇಂದು ಜೊತೆ ಹೋದರೂ ಎನೆಲ್ಲಾ ಮಾತುಗಳು ಕೇಳುವ ಪರಿಸ್ಥಿತಿಗಳು ಬಂದಿವೆ. ಇನ್ನು ಅವಳೊಬ್ಬಳೆ ಅನುಭವಿಸುವ ನೋವುಗಳನ್ನು ಪಟ್ಟಿಗೈದರೆ ಅನುಭವವಾಗುತ್ತದೋ ಇಲ್ಲವೋ ಆದರೆ ಅನುಭವಿಸಿದರೆ ಚೆನ್ನಾಗಿ ಅರಿವಾಗಬಹುದು.
ಹೆಣ್ಣು ಸಮಾಜದ ಕಣ್ಣು ಅವಳೇ ಇಂದು ಸಮಾಜದ ಕಠೋರ ಕಿರುಕುಳ ತಾಳಲಾರದೆ ಮಣ್ಣಾಗುತ್ತಿದ್ದಾಳೆ. ಅವಳು ವಾತ್ಸಲ್ಯಮಯಿ ಎಂಥಾ ಘೋರ ನೋವನ್ನಾದರೂ ತಡೆದುಕೊಳ್ಳುವ ಕ್ಷಮಯಾಧರಿತ್ರಿ ಹಾಗಂತ ಕೆಟ್ಟದ್ದಕ್ಕೆ  ಮಾತ್ರಾ ಬಳಸುತ್ತಿದ್ದರೆ ಖಂಡಿತ ಸಮಾಜ ಕೆಡುವುದಲ್ಲದೇ ಉದ್ದಾರವಂತೂ ಆಗಲ್ಲ. ಆದ್ದರಿಂದ ಇನ್ನಾದರೂ ಎಲ್ಲರೂ ಅವಳ ಉಪಸ್ಥಿತಿಯನ್ನು ಅರಿಯೋಣ ಜೊತೆಗೆ ಗೌರವವನ್ನು ನೀಡೋಣ. ಹೆಣ್ಣೇ ಈ ಮಣ್ಣಿಗೆ ಭೂಷಣವೆನ್ನುವುದನ್ನು ಅರಿಯೋಣ. ಇಂದಿನಿಂದಲೇ ನಾವು ಬದಲಾಗೋಣ, ನಮ್ಮ ತನವನ್ನು ಬದಲಾಯಿಸಿಕೊಂಡು ಸಮಾಜವನ್ನು ಬದಲಾಯಿಸೋಣ.

No comments:

Post a Comment