Tuesday 11 August 2015

ಅತ್ತೆ ಸೊಸೆ...ಕಿರಿಕ್...


          ಮನಸ್ತಾಪ, ಜಗಳ, ವೈಮನಸ್ಸು ಇದು ಮಹಿಳೆಯರ ಸಹಜ ದೌರ್ಬಲ್ಯ...ಅವರ ಕಷ್ಟ ಕಾರ್ಪಣ್ಯ ಎಷ್ಟಿದ್ದರೂ, ಒಳಗೊಳಗೆ ಪ್ರಾರಂಭವಾಗುವ ಮುನಿಸು, ಜಲಸು, ಬೇರೆಯದನ್ನು ತನ್ನದಾಗಿಸಿಕೊಳ್ಳಲು ನಡೆಸುವ ಹೋರಾಟ ಎಲ್ಲವೂ ರೌದ್ರಾವತಾರದಂತೆ ಹೊಡೆದಾಡುತ್ತಲೇ ಇರುತ್ತವೆ.ಇನ್ನೂ ಇಬ್ಬರು ಹೆಂಗಸರ ಕಚ್ಚಾಟ ಪ್ರಾರಂಭವಾದರಂತೂ ಸಾಮಾಜಿಕವಾಗಿ ಪಸರಿಸದಿದ್ದರೆ ಅವರಿಗೆ ಸಮಾಧಾನ ಇರಲ್ಲ ಬಿಡಿ. ಇಲ್ಲಿ ಬರುವ ಎರಡು ಪಾತ್ರಗಳು ಹೆಣ್ಣೆ ಆದರೂ ಭಾವಗಳು ಬೇರೆ, ಅದೇ ಅವರ ಜಿದ್ದಿಗೆ ಹೆಚ್ಚು ಕಾರಣವಾದರೂ ಅರಿತು ಬಾಳಲು ಆಗುವುದಿಲ್ಲ ಎಂದರ್ಥವಲ್ಲ. ಬರವಣಿಗೆಗೂ ಮುನ್ನ ಈ ಪೀಠಿಕೆ ಯಾಕೆಂದರೆ  ಇದು ಸಾಮಾನ್ಯ ವಿಷಯವಲ್ಲ ಏರಡು ಹೆಂಗಳೆಯರ ಮಧ್ಯೆ ಕಂಡು ಬರುವ, ಪರಸ್ಫರ ಅಧಿಕಾರದಿಂದಲೋ, ಸ್ಥಾನ ಮಾನದ ಘನತೆಯಿಂದಲೋ  ಕೂಡಿರುವ ವಾದ ವಿವಾದ ಅದುವೇ ಅತ್ತೆ ಸೊಸೆಯರ ವಿಕಾರ ನಾದ...
          ಅತ್ತೆ ಸೊಸೆ ಕಾನ್ಸೆಪ್ಟ್ ತಲೆಗೆ ಮೂಡಿದಾಗಲೇ ನಮಗೆ ತೋಚುವುದೇ ದಿನಂಪ್ರತಿ ಕಾಣುತ್ತಿರುವ ಜಗಳದ ಅವರಿಬ್ಬರ ಜಲಕು. ಈ ಅತ್ತೆ ಸೊಸೆ ಜಗಳ ಇಂದು ನಿನ್ನೆಯದಲ್ಲ. ಅನಾದಿ ಕಾಲದಿಂದಲೂ  ಇತ್ತು ಇಂದು ಇದೆ. ಆದರೆ ಅದು ಮುಂದೆ ಪ್ರವೃತ್ತಿ ಆಗುವುದು ಬೇಡ ಎನ್ನುವ ನಿಟ್ಟಿಲ್ಲಿ ಈ ಬರಹ ಅಷ್ಟೆ.

           ಒಂದು ಕಡೆ ಮನೋವೈಧ್ಯರು ಹೇಳುತ್ತಾರೆ ಅತ್ತೆ ಸೊಸೆಯ ಜಗಳಕ್ಕೆ ಮುಖ್ಯ ಕಾರಣ ಅವರ ಪರಸ್ಫರ ಧನಾತ್ಮಕ ನಿರೀಕ್ಷೆಗಳೇ ಕಾರಣವಂತೆ. ಆದರೆ ಕೆಲವೊಮ್ಮೆ ಅಧಿಕಾರ, ನಾನು ನನ್ನದು ಎನ್ನುವ ಭಾವೈಕ್ಯವೂ ಬರಬಹುದೇನೋ ಹೇಳಲಾಗದು. ನಾವೆಲ್ಲ ಸಮಾಜದಲ್ಲಿ ಮಹಿಳೆ ನಿರ್ಲಕ್ಷ್ಯಕ್ಕೊಳಪಟ್ಟಿದ್ದರೂ, ಆಕೆಯನ್ನು ದೇವತೆಯ ಸ್ಥಾನದಲ್ಲಿಯೇ ನೋಡುತ್ತೇವೆ., ಭೂಮಿಯನ್ನು ನೀರನ್ನು ಕೂಡ ಸ್ತ್ರೀ ರೂಪಿಯಾಗಿ, ಅಮ್ಮನ ಪಾತ್ರದಲ್ಲಿ ದೇವತೆಯಾಗಿ ಕಾಣುತ್ತೇವೆ. ಇಷ್ಟೆಲ್ಲಾ ಆದರೂ ಹೆಣ್ಣನ್ನೂ ಹೆಣ್ಣೆ ಏಕೆ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ.ಇನ್ನೂ ಗಹನವಾಗಿ ಆಲೋಚನೆಗೆ ಕುಳಿತರೆ, ಬಲಗಾಲಿಟ್ಟು ಬಂದ ಸೊಸೆಗೆ ಅತ್ತೆ ರಾಕ್ಷಸಿಯಂತೆ ಕಾಣುವುದ್ಯಾಕೆ?, ಸಂಧರ್ಭಕ್ಕೆ ತಕ್ಕಂತೆ ಸೊಸೆಯ ಪಾಲಿಗೆ ಅತ್ತೆ ಯಾಕೆ ತಾಯಿಯಾಗುತ್ತಿಲ್ಲ?, ಅತ್ತೆಯ ಬುದ್ಧಿ ಮಾತುಗಳ್ಯಾಕೆ ಸೊಸೆಗೆ ತಾಯಿಯ ಬುದ್ಧಿ ಮಾತುಗಳಾಗುತ್ತಿಲ್ಲ?, ಗಂಡನ ಮನೆಗೆ ಬಂದಾಗ  ಅತ್ತೆಯೂ ತನ್ನ ತಾಯಿಯಂತೆ ಎಂದು ಯಾಕೆ ಅಂದುಕೊಳ್ಳುವುದಿಲ್ಲ?, ಮಗನನ್ನು ಕಂಡುಕೊಂಡ ಪ್ರೀತಿಯಲ್ಲಿಯೇ ಅತ್ತೆ ಯಾಕೆ ಸೊಸೆಯನ್ನು ಕಾಣುವುದಿಲ್ಲ?, ಸಂಧರ್ಭದ ಆಧಾರದಲ್ಲಿ  ನಮ್ಮ ಮನಸ್ಥಿತಿಗಳು ಬದಲಾಗುತ್ತವೆಯಾ?, ತಾಯಿ ಮನೆ ಸ್ವರ್ಗ, ಅತ್ತೆ ಮನೆ ನರಕ ಎನ್ನೋ ಮನೋಕ್ಲಿಷೆ ಸರ್ವವ್ಯಾಪಿಯಾಗಿ ಬಿಟ್ಟಿದೆಯಾ?, ಅತ್ತೆ ಸೊಸೆಯರ ಸಂಬಂಧ ವ್ಯತಿರಿಕ್ತವಾಗೋದ್ಯಾಕೆ?, ಅತ್ತೆ ಸೊಸೆಯನ್ನು ಮಗಳಂತೆ, ಸೊಸೆ ಅತ್ತೆಯನ್ನು ಅಮ್ಮನಂತೆ ಯಾಕೆ ನೋಡಿಕೊಳ್ಳಬಾರದು!? ಇತ್ಯಾದಿ ಪ್ರಶ್ನೆಗಳಿಗೆ ಉತ್ತರವೇ ಸಿಗುವುದಿಲ್ಲ. ಬಹುಶಃ ಕವಿ ಜಿ.ಎಸ್. ಶಿವರುದ್ರಪ್ಪ ಬಹಳ ಹಿಂದೆಯೇ “ಸ್ತ್ರೀ ಎಂದರೆ ಅಷ್ಟೇ ಸಾಕೆ ..!?” ಎಂಬ ಪ್ರಶ್ನೆ ಮಾಡಿದ್ದು ಇದಕ್ಕೆ ಎನಿಸುತ್ತದೆ.
          ದಿನಂಪ್ರತಿ ಎನ್ನದೇ ಅತ್ತೆ ಸೊಸೆಯರ ಬಗೆಗಿನ ಸುದ್ಧಿಗಳಂತೂ ಕಿವಿಗೆ ಬೀಳುತ್ತಲೇ ಇರುತ್ತವೆ. ಅತ್ತೆಯ ಕಾಟಕ್ಕೆ ನೇಣು ಬಿದಿದುಕೊಂಡ ಸೊಸೆ, ವರದಕ್ಷಿಣೆಗಾಗಿ ಅತ್ತೆಯಿಂದ ಹಿಂಸೆ, ಮಾವ ಹಾಗೂ ಅತ್ತೆಯ ಮೇಲೆ ಕೇಸ್ ದಾಖಲಿಸಿದ ಸೊಸೆ... ಹೀಗೆ ಒಂದರ ಮೇಲೊಂದರಂತೆ ದಿನಂಪ್ರತಿ ಘಟನೆಗಳು ಘಟಿಸುತ್ತಲೇ ಇವೆ.  ಆದರೆ ಯಾರೊಬ್ಬರು ಸಮಸ್ಯೆಯ ಬಗ್ಗೆ ತಲೆಕೆಡಿಸಿಕೊಳ್ಳದೇ, ಬಗೆ ಹರಿಸಿಕೊಳ್ಳದೇ, ಹೇಗೆ ಬದಲಾಯಿಸಿಕೊಳ್ಳಬೇಕು ಎಂಬುದನ್ನು ಚಿಂತಿಸುತ್ತಿಲ್ಲದಿರುವುದೇ ಸಮಸ್ಯೆಯ ಜ್ವಾಲಕ್ಕೆ ಇನ್ನಷ್ಟು ತುಪ್ಪ ಎರೆದಂತಾಗಿದೆ. ಇನ್ನೂ ಮಾಧ್ಯಮಗಳಂತೂ ಏಕಾಏಕಿ ಸಂಧರ್ಭದ ಲಾಭ ಪಡೆದು ಸುಮ್ಮನಾಗುತ್ತಿವೆ. ಎಂಟರ್ ಟೈನ್ ಮೆಂಟ್ ಹೆಸರಿನಲ್ಲಿ ಮನೆಮಂದಿಗೆ ಜಗಳಗಳನ್ನು ತಂದಿಕ್ಕಿ ರಂಪಾಟ ಮಾಡುತ್ತಾ ಬೇಳೆ ಬೇಯಿಸಿಕೊಳ್ಳುತ್ತಿವೆ. ಬೇಸರದ ಸಂಗತಿ ಎಂದರೆ ಪೋಸಿಟಿವ್ ವಿಷಯ ನೀಡಿ ಇಂತಹ ಕೌಟಂಬಿಕ ವಿಚಾರಗಳನ್ನು ತಿಳಿ ಹೇಳಲು ಯಾವ ಮಾಧ್ಯಮವೂ ಪುಷ್ಟಿ ನೀಡುತ್ತಿಲ್ಲ...
 ಇದು ಕೇವಲ ಒಂದೆರಡು ಮನೆಗಳ ಸಮಸ್ಯೆಯಲ್ಲ. ಪ್ರಪಂಚದ ಮುಕ್ಕಾಲು ಭಾಗ ಸಂಸಾರಗಳಲ್ಲಿ ಅತ್ತೆ ಸೊಸೆ ವೈಮನಸ್ಸು ಇದ್ದದ್ದೆ. ಅತ್ತೆ  ಒಳ್ಳೆಯವಳಾದರೆ ಸೊಸೆ ಕೆಟ್ಟವಳು. ಅತ್ತೆ ತಾಟಕಿಯಾದರೆ ಸೊಸೆಗೆ ಗೋಳು. ಇವರ ಮಧ್ಯೆ ಸಾಮರಸ್ಯವೇ ಸಾಧ್ಯವಿಲ್ಲವಾ ಎನ್ನುವುದು ವಿದ್ವಾಂಸರ ಮುಂದಿರುವ ಯಕ್ಷ ಪ್ರಶ್ನೆ.
ಮಗನಿಗೆ ಹೆಂಡತಿ ಬರುತ್ತಾಳೆ ಎಂದರೆ ಅತ್ತೆ ಸ್ಥಾನಕ್ಕೇರುವ ಆ ಮನೆಯ ಸೊಸೆಯ ಮನಸ್ಸಿನಲ್ಲೊಂದು ಸಣ್ಣ ಏರುಪೇರು ಉಂಟಾಗುತ್ತದೆ.  ಸೊಸೆ ತನ್ನ ಮಗನನ್ನು ತನ್ನಿಂದ ಕಸಿದುಕೊಂಡು  ಬಿಡುತ್ತಾಳೇನೋ ಎನ್ನುವ ಆತಂಕ ಪ್ರತಿಯೊಂದು ಅಮ್ಮನಲ್ಲೂ ಇರುತ್ತೆ. ಇದು ಹೆತ್ತವಳ ಪ್ರೀತಿಯ ಚಡಪಡಿಕೆ ಅಷ್ಟೆ. ಮದುವೆಯ ನಂತರ ಮಗ ಪತ್ನಿಯನ್ನು ಕರೆದಾಗ ತಾಯಿ ಸಣ್ಣದೊಂದು ಶಾಕ್ ಅನುಭವಿಸುತ್ತಾಳೆ.   ಜತನದಿಂದ ಸಾಕಿದ ಮಗನನ್ನು ಸೊಸೆ ಬಂದು ಕೈವಶ ಮಾಡಿಕೊಂಡಳೆಂಬ ಭಾವನೆ ಅತ್ತೆಗೆ. ಮಗ ವಯಸ್ಸಿಗೆ ಬಂದಿದ್ದಾನೆ ಈಗವನಿಗೆ ಹೆಂಡತಿ ಪ್ರೀತಿಯೂ ಅಷ್ಟೆ ಮುಖ್ಯ ಎಂದಾಲೋಚಿಸಿದರೆ ಏನಾಗುತ್ತದೆ!?? ಇನ್ನೂ ಏನಾದರೂ ಮಗ ಅಮ್ಮನ ಮಾತೇ ಸರಿ ಎಂದು ಪುಸಲಾಯಿಸಿದರೆ  ಸೊಸೆಗೆ ಮಗನನ್ನು ತನ್ನ ಕೈಮುಷ್ಠಿಯಲ್ಲೇ ಇರಿಸಿಕೊಂಡು ಆಡಿಸುತ್ತಿದ್ದಾಳೆ ಎನ್ನೋ ಭಾವನೆ ಅದನ್ನೆ ಯಾಕೆ ಸೊಸೆಯಾದವಳು ದೊಡ್ಡದು ಎಂದು ಗೊಗೆರೆದುಕೊಳ್ಳಬೇಕು. ಎಲ್ಲವೂ ಸ್ವಲ್ಪ ಸಮಯ ಕೊಟ್ಟು ಆಲೋಚಿಸಿದರೆ ಯಾವುದು ಸಮಸ್ಯೆ ಅಥವಾ ತಪ್ಪು ಅನ್ನಿಸುವುದಿಲ್ಲ.. ಇದು ಜಗಳವಲ್ಲ, ಮನಸು ಮನಸುಗಳ ಹೊಡೆದಾಟ.  ನಮ್ಮ ಎದುರಾಗುವ ಎಲ್ಲಾ ಪೂರ್ವಾಗ್ರಹಗಳಿಂದ ಹೊರಬಂದು ನೋಡಿದಾಗ ಅತ್ತೆ ಮಾತ್ರಾ ಕೆಟ್ಟವಳು ಅಂತ ಎಲ್ಲಿಯೂ ಹೇಳಲಾಗದು. ಎಷ್ಟೋ ಬಾರಿ ಅತ್ತೆ ಹೊಂದಿಕೊಂಡರೂ, ಸೊಸೆ ಅತ್ತೆಯನ್ನು ನಿರ್ಲಕ್ಷ್ಯದಿಂದ ನೋಡುತ್ತಾಳೆ. ಮನೆಕೆಲಸ ಮಗುವಿನ ಆರೈಕೆ ಎಲ್ಲವನ್ನೂ ಅತ್ತೆಗೊಪ್ಪಿಸಿ, ತಾವು ಮಾತ್ರಾ ಕ್ಲಬ್, ಪಬ್ ಎನ್ನುತ್ತಾ ಕಾಲ ಕಳೆಯುವ ಸೊಸೆಯಂದಿರೂ ಇದ್ದಾರೆ.
              ಅವಳು ಸರಿ ಇಲ್ಲ. ಇವಳಿಗೆ ಅಹಂಕಾರ ಅಂತೆಲ್ಲ ಪರಸ್ಫರ ಆರೋಪ ಮಾಡಿಕೊಳ್ಳುವುದಕ್ಕಿಂತ ಸಾಮರಸ್ಯದ ಬದುಕು ನಡೆಸಬೇಕು. ಇದೇನೂ ಕಷ್ಟದ ಕೆಲಸವಲ್ಲ. ಪರಸ್ಫರ ಗೌರವ, ಪ್ರೀತಿ ಇದ್ದರೆ ಅತ್ತೆ ಸೊಸೆ ತಾಯಿ- ಮಗಳಂತಿರಬಹುದು. ಅತ್ತೆಯಾದವಳು ತನ್ನ ಹಿರಿತನದಿಂದ ಸೊಸೆಯನ್ನು ವಾತ್ಸಲ್ಯದಿಂದ ಮಗನ ಜವಾಬ್ಧಾರಿ ಅವಳಿಗೊಪ್ಪಿಸಿದರೆ ಸೊಸೆಯೂ ಅತ್ತೆಯನ್ನು ಪ್ರೀತಿಯಿಂದ ಕಾಣುತ್ತಾಳೆ. ಹಿರಿಯರನ್ನು ಗೌರವದಿಂದ ಕಂಡು ಅವರನ್ನು ಪ್ರೀತಿಯಿಂದಾಗಿ ನೋಡಿಕೊಂಡು ಸೊಸೆಗೂ ಗಂಡನ ಪ್ರೀತಿ ಹಿರಿಯರ ವಾತ್ಸಲ್ಯ ದೊರಕುತ್ತದೆ. ಎಲ್ಲ ಸಂಸ್ಕಾರವಂತರೊಳಗೂ ಜಗಳವನ್ನು ನಿಯಂತ್ರಿಸುವ ಶಮನಗೊಳಿಸುವ, ಹತ್ತಿಕ್ಕುವ, ನಂದಿಸುವ ಒಂದು ಅದ್ಭುತ ಇನ್ ಬ್ಯುಲ್ಟ್ ಸಿಸ್ಟಮ್ ರಚನೆ ಇರುತ್ತದೆ. ಅದನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡಿಕೊಳ್ಳಬೇಕಷ್ಟೆ. ನಾವು ನಮ್ಮೊಳಗೆ ವಿಕಾರತೆಯ ಅನಾವರಣ ಮಾಡಿಕೊಂಡು ಅಪ್ರಬುದ್ದ ಮನಸ್ಸಿನ ಬಡಬಡಿಕೆಯ ತಾಂಡವವನ್ನು ಪ್ರದರ್ಶಿಸುತ್ತಾ ಇರುತ್ತೇವೆಯೋ ಹೊರತು ಸಂಸಾರ ದೋಣಿ ಬಳುಕುವ ನೃತ್ಯ ನಿಲ್ಲಿಸಿಕೊಂಡು ಸರಿದೂಗಿಸಿಕೊಳ್ಳುವುದಿಲ್ಲ. ಸೊಸೆಯಂದಿರೆ ನಿವೇಕೆ ಅತ್ತೆಯನು ಕೆಟ್ಟವಳಂತೆ ಕಾಣುತ್ತೀರಿ. ಅತ್ತೆ ಯಾವಾಗಲೂ ಸೊಸೆಯಿಂದ ನಿರೀಕ್ಷಿಸುವುದು, ನಯವಾದ ಮಾತು, ಉತ್ತಮ ನಡತೆ, ಗುಣ, ಆಡಮಬರವಿಲ್ಲದ ಸೌಂದರ್ಯಪ್ರಜ್ಞೆ, ಮನೆಯವರನ್ನೆಲ್ಲಾ ಪ್ರೀತಿಯಿಂದ ಓಲೈಸುವ ಮನೊಭಾವ ಅಷ್ಟೆ. ಮಗ ಪ್ರತಿ ದಿನ ಆಫೀಸ್‍ಗೆ ಹೋಗುವಾಗ ಅಮ್ಮ ಟಿಫಿನ್ ರೆಡಿ ಮಾಡಿ ಕೊಡುವುದು ಹೊಸತೇನಲ್ಲ ಆದರೆಸೊಸೆ ಬಂದ ಮೇಲೆ ಇದು ಬದಲಾಗಬೇಕು ಅತ್ತೇ ನಾನೀದಿನಲ್ಲಾ ಇನ್ನೂ ನೀವ್ಯಾಕೆ ಇದನ್ನೆಲ್ಲಾ ಮಾಡ್ಬೇಕು. ಅನ್ನುವ ಸೊಸೆಯ ಪ್ರೀತಿ ತುಂಬಿದ ಮಾತು ಬದುಕೆಂಬ ಕ್ರಿಕೆಟ್ ಜಗತ್ತಿನಲ್ಲಿ ಕ್ರಿಕೆಟ್ ಖಾತೆ ತೆರೆದಂತೆ. ಅಲ್ಲಿ ಅತ್ತೆ ನಿಮ್ಮೆದುರು ಏನೇ ಗೊಣಗಿದರೂ ಮರೆಯಲ್ಲಿ ನಿಂತು ಆನಂದದ ಕಣ್ಣೀರು ಸುರಿಸುತ್ತಾಳೆ. ಹೆಣ್ಮಕ್ಕಳೆ ಒಂದು ನೆನಪಿಟ್ಟುಕೊಳ್ಳಿ ಇಂದು ನೀವು ಸೊಸೆಯಾಗಿ ಮನೆ ಬೆಳಗಿದರೆ ನಾಳೆ ನಿಮಗೆ ಸಿಗುವ ಸೊಸೆ ಮುತ್ತಿನಂತವಳಾಗಿರುತ್ತಾಳೆ.



"ಅತ್ತೆ ಸೊಸೆ ಜಗಳವೆಂಬುದು ಅನಾಧಿಕಾಲದಿಂದಲೂ ಇದೆ. ಅದೊಂಥರ ಇನ್‍ಬಾರ್ನ್ ಸಿಸ್ಟಮ್. ಅತ್ತೆಯಾದವಳು ಅವಳ ಅತ್ತೆಯಿಂದ ಅನುಭವ ಪಡೆದಿರುತ್ತಾಳೆ ಅದನ್ನು ಅವಳು ತನ್ನ ಸೊಸೆ ಮೇಲೆ ತೀರಿಸಿಕೊಳ್ಳುತ್ತಾಳೆ. ಆದರೆ ಸೊಸೆಯಂದಿರು ಅತ್ತೆ ಮೇಲೆ ಹರಿಹಾಯಲು ಕಾರಣ ತಾನು ಸ್ವತಂತ್ರ ವಾಗಿರಲು ಭಯಸುವುದೇ ಆಗಿರುತ್ತದೆ. ಇದನ್ನು ಪೂರ್ಣ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ ಆದರೆ ಇಂತಹ ದೌರ್ಜನ್ಯ ಕಂಡುಬಂದಾಗ ‘ಕೌಟುಂಬಿಕ ದೌರ್ಜನ್ಯ ಕಾಯ್ದೆ’ಯಡಿ ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿ ದೂರು ನೀಡಬಹುದಾಗಿದೆ."
-ಪ್ರಮೀಳಾ ನೇಸರ್ಗಿ.
ವಕೀಲರು, ಶಿಕ್ಷಣ ತಜ್ಞರು, ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತೆ.

1 comment:

  1. ಹಲೋ,
    ನಾನು ಜೋಶ್ ಹಾಲಿ, ಒಬ್ಬ ವೈಯಕ್ತಿಕ ಸಾಲದಾತ, ವ್ಯಕ್ತಿಗಳು, ಸಂಸ್ಥೆಗಳು, ಸಂಸ್ಥೆಗಳು, ಇತ್ಯಾದಿಗಳಿಗೆ ಯಾವುದೇ ಅವಕಾಶವಿಲ್ಲದೆ 2% ಬಡ್ಡಿದರದಲ್ಲಿ ವಾಸಿಸುವ ಅವಕಾಶವನ್ನು ಒದಗಿಸುವ .... ನಿಮ್ಮ ಸಾಲವನ್ನು ತೀರಿಸಲು ನೀವು ತಕ್ಷಣದ ಸಾಲವನ್ನು ಬೇಕು ಅಥವಾ ನಿಮಗೆ ನಿಮ್ಮ ವ್ಯವಹಾರವನ್ನು ಸುಧಾರಿಸಲು ಸಾಲ ಬೇಕೇ? ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳಿಂದ ನಿಮ್ಮನ್ನು ತಿರಸ್ಕರಿಸಲಾಗಿದೆ? ನಿಮಗೆ ಬಲವರ್ಧನೆ ಸಾಲ ಅಥವಾ ಅಡಮಾನ ಅಗತ್ಯವಿದೆಯೇ? ನಿಮ್ಮ ಎಲ್ಲಾ ಚಿಂತೆಗಳೂ ಮುಗಿಯಿತು, ಏಕೆಂದರೆ ನಿಮ್ಮ ಎಲ್ಲ ಹಣಕಾಸಿನ ಸಮಸ್ಯೆಗಳೂ ಹಿಂದಿನ ಒಂದು ವಿಷಯವಾಗಿದೆ.
    ಹೆಚ್ಚಿನ ವಿವರಗಳಿಗಾಗಿ (Joshhawleyloanfirm@gmail.com) ಇಮೇಲ್ ಮೂಲಕ ಸಂಪರ್ಕಿಸಿ ..

    ಅಭಿನಂದನೆಗಳು!

    ReplyDelete