Tuesday 22 September 2015

ಗುರುತ್ವ ... ಇದು ಗುರು ಶಿಷ್ಯರ ಸಂಬಂಧ


      ಪ್ರೀತಿಯ ಮಾತುಗಳಲ್ಲಿ ಸಿಹಿಮುತ್ತು ಎಷ್ಟು ಮುಖ್ಯವೋ? ಹೆಮ್ಮೆಯ ದೇಶಕ್ಕೆ ಪ್ರಭುತ್ವ ಎಷ್ಟು ಮುಖ್ಯವೋ? ಹಾಗೆ ನಲ್ಮೆಯ ಮುಗ್ಧಮನಸಿನ ಮಕ್ಕಳಿಗೆ ಗುರು ಅಥವಾ ಗುರುತ್ವ ಇವೆಲ್ಲಕ್ಕಿಂತ ಮುಖ್ಯ. ಇದೇ ಇಂದಿನ ಜನಾಂಗದ ಕೊರತೆ. ಗುರು ಎಂದರೆ ಭಾರ. ಶಿಷ್ಯನೆಂದರೆ  ಹಗುರವೆಂದರ್ಥವಲ್ಲ. ಗುರು ಎಲ್ಲ ರೀತಿಯಲ್ಲೂ ಭಾರ. ತಿಳಿವಿನಲ್ಲಿ, ಅರಿವಿನಲ್ಲಿ, ಆನಂದದಲ್ಲಿ, ವಿಧ್ಯೆಯಲ್ಲಿ, ಬಗೆ ಬಗೆಯ ಜ್ಞಾನದಲ್ಲಿ.
ಆದರೆ ಶಿಷ್ಯ ಶೂನ್ಯ. ಇನ್ನೂ ಹೆಚ್ಚಿನ ಮಾತಲ್ಲಿ ಹೇಳಬೇಕೆಂದರೆ ಶಿಷ್ಯನೇನನ್ನೂ ಬೇಡುವುದಿಲ್ಲ. ಗುರು ಏನನ್ನೂ ಭರವಸೆ ನೀಡುವುದಿಲ್ಲ. ಶಿಷ್ಯನಲ್ಲಿ ತೃಷೆಯಿದೆ, ಗುರುವಿನಲ್ಲಿ ತಕ್ಕ ಭರವಸೆಯಿದೆ. ಈ ಸಾಮೀಪ್ಯದಲ್ಲಿ ಯಾರೂ ಮೇಲಲ್ಲ, ಯಾರು ಕೀಳಲ್ಲ.
 ಶಿಷ್ಯತ್ವ ಒಂದು ಸ್ತ್ರೀತ್ವ. ಶಿಷ್ಯನೊಂದು ಧ್ವಾರ, ಶಿಷ್ಯನೊಂದು ಗರ್ಭ, ಶಿಷ್ಯನೊಂದು ಸ್ವೀಕೃತಿ. ಗುರುತ್ವ ಎಂದೂ ಪುರುಷತ್ವ. ಗುರು ಕೊಡುಗೈ ತುಂಬಿದ ಕೊಡ. ಕೊಡುವುದೊಂದು ಗೊತ್ತು. ಅವನು ಕೊಡಬೇಕು ಅದು ಮಳೆ ತುಂಬಿದ ಮೋಡ.

  ಗುರು ಶಿಷ್ಯ ಪರಿಕಲ್ಪನೆಯೇ ಭಿನ್ನವಾದುದು. ಗುರು ಜ್ಞಾನವನ್ನು ಕೊಡುವುದಿಲ್ಲ. ತನ್ನ ಅಸ್ತಿತ್ವವನ್ನೇ ಸಮಗ್ರವಾಗಿ ಶಿಷ್ಯನೊಂದಿಗೆ ಹಂಚಿಕೊಳ್ಳುತ್ತಾನೆ. ಶಿಷ್ಯನೂ ಅರಸುತ್ತಿರುವುದು ಜ್ಞಾನವನ್ನಲ್ಲ ಬದಲಾಗಿ ತನ್ನ ಸಮಗ್ರ ಅಸ್ತಿತ್ವ ಅಷ್ಟೆ. ಅವನಿದ್ದಾನೆ ಆದರೂ ಅವನಾರಿದ್ದಾನೆಂಬುದು ಅವನೇ ಅರಿತಿಲ್ಲ. ಅದನ್ನೇ ಅರಿಯುವ ಗಾಢ ಯತ್ನ ಅವನದು. ತನಗೆ ತಾನೇ ಬತ್ತಲಾಗುವ ತೃಷೆ ಅವನದು. ಹೀಗೆ ಗುರು ಶಿಷ್ಯರ ಸಂಬಂಧ ಶಿಷ್ಯನಿಗೋ ಒಂದು ಹುಡುಕಾಟ. ಹಾಗೆ ಗುರುವಿಗೂ ಕೂಡ. ಈ ಹುಡುಕಾಟವನ್ನು ಪೂರ್ಣಗೊಳಿಸಲು ಶಿಷ್ಯನಲ್ಲಿ ಆತ್ಮವಿಶ್ವಾಸವನ್ನು ಸೃಷ್ಟಿಸುವುದೇ ಅವನ ಕಾರ್ಯ ಉಳಿದೆಲ್ಲವೂ ತಂತಾನೇ ಘಟಿಸುವುದು.
ಮನೆಯಲ್ಲಿ ತಾಯಿಯ ಪ್ರೀತಿ, ಅವಳ ಪಾಠಗಳೆಷ್ಟು ಮುಖ್ಯವೋ ಅಂತೆಯೇ ಶಾಲೆಯಲ್ಲಿ ಒಬ್ಬ ಒಳ್ಳೆಯ ಗುರು ಅವನ ಮಾರ್ಗದರ್ಶನವೂ ಅಷ್ಟೆ ಅಗತ್ಯ. ಗುರುವಿನ ಕೈಯಲ್ಲಿ ಅಸಾಧ್ಯವಾದದ್ದು ಏನೂ ಇಲ್ಲ . ಹೀಗೆ ಹೇಳುವಾಗ ಒಂದು ಮಾತು ಬಹಳ ಹತ್ತಿರಕ್ಕೆ ನೆನಪಾಗುತ್ತದೆ. ಪ್ರಾರ್ಥನೆಗಾಗಿ ಜೋಡಿಸಿರುವ ಸಾವಿರ ಕೈಗಳಿಗಿಂತ ಹಿರಿದಾದ್ದನ್ನು, ಕೆಲಸ ಮಾಡುತ್ತಿರುವ ಎರಡು ಕೈಗಳು ಸಾಧಿಸಬಲ್ಲದು. ಈ ಮಾತು ನಿಜವಾಗಿಯೂ ಹೌದು ಏನಿಸುತ್ತದೆ. ಗುರು ಎನ್ನುವ ಏರಡು ಅಕ್ಷರದಲ್ಲಿ ಎಷ್ಟು ಭಾವ, ಭಕ್ತಿ, ಭಯ ಅಡಗಿದೆಯೋ ಹಾಗೆಯೇ ಅವರ ಕೆಲಸದಲ್ಲೂ ಕೂಡ ಅಷ್ಟೆ ಪರಿಶ್ರಮ ಅಗತ್ಯವಿದೆ. ಈ ಮೊದಲೇ ಹೇಳಿದ ಹಾಗೆ ನಮ್ಮ ದೇಶದ ಪ್ರಭುತ್ವ ನಿಂತಿರುವುದು ಈ ಗುರು ಅಥವಾ ಗುರುತ್ವದ ಮೇಲೆ ಯಾಕೆಂದರೆ ನಮ್ಮ ಹೆಮ್ಮೆಯ ರಾಷ್ಟ್ರದ ಮಕ್ಕಳನ್ನು ತಿದ್ದಿ, ಬುದ್ದಿ, ಬೆಳೆಸುವುದು ಗುರುವಾದವನ ಕೈಯಲ್ಲೇ ಅಡಗಿದೆ. ಮಾನ್ಯ ಸಿದ್ಧೇಶ್ವರ ಸ್ವಾಮಿಯವರ ಒಂದು ಮಾತು ಎಷ್ಟು ಚಂದಕ್ಕಿದೆ ನೋಡಿ, “ದೋಷಗಳನ್ನು ಬಿಟ್ಟು ಸದ್ಗುಣಗಳನ್ನು ಅರಸೋದು ಗುಣಗ್ರಾಹಿತವಾಗುತ್ತದೆ. ದಿನಪತ್ರಿಕೆ ಹಿಡಿದು  ಒಂದೆರಡು ಗಂಟೆ ಓದಿನೋಡಿ  ಆಮೇಲೆ ನೀವು ಬರೆದಿಟ್ಟ ವಿಷಯಗಳು ಯಾವುದಕ್ಕೆ ಸಂಬಂಧಿಸಿದ್ದೆಂದು ಕಣ್ಣಾಟಿಸಿ. ನಿಮಗೆ ಅಚ್ಚರಿಯಾಗುತ್ತದೆ ಯಾಕೆಂದರೆ ಶೇ. 90 ರಷ್ಟು ಕೆಡುಕಿನ ವಿಚಾರಗಳೇ  ಬರೆದಿಟ್ಟ ಹಾಳೆಯಲ್ಲಿರುತ್ತದೆÉ. ದೃಷ್ಟಿಯನ್ನು ಬದಲಿಸಿ ಒಳ್ಳೆಯದನ್ನೇ ಹುಡುಕುವ ಕೆಲಸ ಶುರುಹಚ್ಚಿ ಕೆಲವೇ ತಿಂಗಳಲ್ಲಿ ಉಲ್ಟಾ ಫಲಿತಾಂಶ ಬಂದಿರುತ್ತದೆ”. ಹೌದು ಇದು ಗ್ಯಾರಂಟಿ. ಬಹುಶಃ ಈ ಮಾತು ಎಲ್ಲದಕ್ಕೂ ಹೋಲಿಕೆಯಾಗುತ್ತದೆ ಎನಿಸುತ್ತದೆ. ಹಾಗೆ ಇಲ್ಲಿ ಕೂಡ. ಒಬ್ಬ ಶಿಕ್ಷಕ ಅಥವಾ ಗುರು ಎಂದರೆ ಕೇವಲ ಹೆಸರಿಗೆ ಮಾತ್ರಾ ಅಲ್ಲ. ಇಡೀ ಸಮಾಜವನ್ನೇ ಉಳಿಸಿ ಬೆಳೆಸುವ ಜವಾಬ್ಧಾರಿ ಅವನ ಕೈಯಲ್ಲಿದೆ. ಅಂತೆಯೇ ಗುರುವೊಬ್ಬ ಒಳ್ಳೆಯವನಾಗಿದ್ದರೆ ಖಂಡಿತಾ ಶಿಷ್ಯಂದಿರು ಒಳ್ಳೆಯವರಾಗಿ ಬೆಳೆಯಲು ಸಾಧ್ಯ. ಮಕ್ಕಳು ಒಳ್ಳೆಯವರಾದರೆ ಸಮಾಜ ಒಳ್ಳೆಯದಾಗಲೂ ಸಾಧ್ಯ. ಯಾಕೆಂದರೆ ಇಂದಿನ ಮಕ್ಕಳೆ ನಾಳೆಯ ಪ್ರಜೆಗಳಲ್ಲವೇ!?...
          ಗುರು ಶಿಷ್ಯವೆಂಬ ಎರಡೂ ಬಿಂದುಗಳು ನಿಧಾನವೋ, ಶೀಘ್ರವೋ ಸ್ಫಂಧಿಸುವವು, ಒಂದಾಗುವವು. ಇಲ್ಲಿ ಮಿಲನ ಶರೀರದಲ್ಲ, ಮನಸ್ಸಿನದ್ದಲ್ಲ, ಬದಲಾಗಿ ಆತ್ಮದ್ದು.
ಎರಡು ದೀಪಗಳು ಸನಿಹ  ಬಂದಾಗ ಒಂದೇ ಜ್ವಾಲೆಯಾದಂತೆ. ಗುರು ಶಿಷ್ಯ ಎರಡು ಒಂದಾದರೆ ಬೆಳಕು ಉನ್ನತಿಯಲ್ಲಿ ಉರಿಯುವುದರಲ್ಲಿ ಎರಡು ಮಾತಿಲ್ಲ. ಆದರೆ ಇದು ಅಷ್ಟು ಸುಲಭವಲ್ಲ. ಭಾವಗಳ ಭಾವೈಕ್ಯ ಒಂದಾಗಬೇಕು. ಗುರು ಶಿಷ್ಯರ ಪರಂಪರೆ, ಸಂಸ್ಕ್ರತಿ ಪ್ರವಹಿಸಲು, ನಿರರ್ಗಳವಾಗಿ ಹರಿಯಲು, ಹೆಸರುವಾಸಿಯಾಗಲು ಗುರು ಶಿಷ್ಯರ ಶ್ರಮವೂ ಅತ್ಯಗತ್ಯ. ತಾನು ಗುರುವಿನಿಂದ ಕಲಿತ ವಿದ್ಯೆಯನ್ನು ತನ್ನ ಸೃಜನಾತ್ಮಕತೆಯಿಂದ ಪರಿಪಕ್ವಗೊಳಿಸಿ ಶಿಷ್ಯನಿಗೆ ಧಾರೆಯೆರೆಯುವವನೇ ಪರಮ ಶ್ರೇಷ್ಠ ಗುರು. ಸಂಪ್ರದಾಯವೆನ್ನುವುದು ನಿಂತ ನೀರಲ್ಲ, ಪ್ರವಹಿಸುವ ಮಹಾಪೂರ. ಗುರು ಶಿಷ್ಯರಿಬ್ಬರೂ ಒಂದರ ಮುಂದೊಂದು ಹಿಡಿದ ಕನ್ನಡಿಗಳಂತೆ. ಒಂದರೊಳಗೊಂದು ಕಾಣುವ ಪ್ರತಿಬಿಂಬದಂತೆ. ಗುರುವಿನಿಂದ ಶಿಷ್ಯ ಹೇಗೆ ಕಲಿಯುತ್ತಾನೋ, ಗುರು ಶಿಷ್ಯನಿಗೆ ಪಾಠ ಹೇಳುತ್ತಾ ಅನೇಕ ವಿಚಾರಗಳನ್ನು ಅರಿತು, ಓರೆಕೋರೆಗಳನ್ನು ತಿದ್ದಿ ತೀಡಿ ಮುಂದುವರಿಯುತ್ತಾನೆ.
ಶಿಷ್ಯ ಪ್ರವರ್ಧಮಾನನಾಗುತ್ತಾ ಗುರುವಿನ ಹೆಗ್ಗಳಿಕೆಯೂ ವೃದ್ಧಿಸುತ್ತಾ ಹೋಗುತ್ತದೆ. ಇದೇ ಗುರು ಶಿಷ್ಯ ಪರಂಪರೆಯ ಧ್ಯೇಯ, ಆದರ್ಶ. ಹಿಂದಿನಿಂದ ಬಂದಿರುವ ಈ ಗುರು ಶಿಷ್ಯ ಪರಂಪರೆ ಇಂದು ಹಲವಾರೂ ಬದಲಾವಣೆಗಳೊಂದಿಗೆ ಮುಂದುವರಿಯುತ್ತಿದೆ. ಆ ಪರಂಪರೆಗೂ ಸಂಪ್ರದಾಯದ ಸಂಸ್ಕಾರಕ್ಕೂ ಆಧುನೀಕತೆ ಅನೇಕ ಬದಲಾವಣೆಯ ಗಾಳಿ ಸೋಕಿಸಿದೆ. ಆದರೆ ಒಂದಂತು ನಿಜ.
“ಗುರು ಎಂದೂ ಶಿಷ್ಯನ ಕಡೆಗೆ ಆಕರ್ಷಿತ,
ಶಿಷ್ಯನೆಂದೂ ಗುರುವಿನ ಕಡೆಗೆ ಆಕರ್ಷಿತ”...

“ನಮ್ಮೆಲ್ಲಾ ಓದುಗರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು”

No comments:

Post a Comment