Friday 23 October 2015

ಅಭಿಮಾನಿಗಳ ಅಣ್ಣ, ಕನ್ನಡದ ಯಜಮಾನ ಡಾ. ವಿಷ್ಣುವರ್ಧನ್...


         ಸಿನಿಮಾ ಅಂದರೆ ಹಾಗೆ ಅಲ್ಲಿ ಅನೇಕ ಪ್ರತಿಭೆಗಳು ದಿನದಿಂದ ದಿನಕ್ಕೆ ಅನಾವರಣಗೊಳ್ಳುತ್ತಲೇ ಇರುತ್ತಾರೆ. ಆದರೆ ಏಷ್ಟೇ ಹೊಸ ಪ್ರತಿಭೆಗಳು ಬಂದರೂ ಹಿಂದೆ ಇದ್ದ, ಕನ್ನಡ ಸಿನಿ ಜಗತ್ತನ್ನು ವಿಶಾಲಗೊಳಿಸಿ, ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ಸ್ಥಾನಮಾನಗಳನ್ನು ತಂದಿತ್ತ, ಅನೇಕ ಮಹನೀಯರಿಗೆ ಎಂದಿಗೂ ಇಂದಿನ ಪ್ರತಿಭೆಗಳು ಸಾಟಿಯಾಗಲಾರದು. ಅಂದು ನಟನೆಯಲ್ಲಿ ರಂಗಭೂಮಿ ಹಿನ್ನೆಲೆಯ ಅಭಿನಯದ ಸೊಗಡಿತ್ತು, ಅಲ್ಲಿ ಕಷ್ಟದ ಕೆಲಸವಿತ್ತು, ಗಂಜಿ ನೀರಿಗೂ ಛಲದ ಬದುಕಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ತಂತ್ರಜ್ಞಾನದ ಕೊರತೆಯಿತ್ತು. ಇಂದಿರುವ ತಾಂತ್ರಿಕತೆಯ ಬಳಕೆ ಅಂದು ಇರಲಿಲ.್ಲ ಆದರೂ ಇರುವ ಟೆಕ್ನಾಲಜಿಯಲ್ಲೇ ಮನಮುಟ್ಟುವ ಸಿನಿಮಾ ನೀಡುತ್ತಿದ್ದವರು ಆಗಿನ ಮೇರು ಪ್ರತಿಭೆಗಳು.
ಏನೇ ಹೇಳಿ ಅವರಿಗೆ ಅವರೇ ಸಾಟಿ. ವರ್ಷಗಳ ಹಿಂದೆ ಮೂಡಿ ಬಂದ ಅನೇಕ ನಟ, ನಟಿ, ನಿರ್ದೇಶಕ, ಸಹಕಲಾವಿದರನ್ನು  ನೆನೆಸಿಕೊಂಡರೇ ಕಣ್ಮುಂದೆ ಅನೇಕಾನೇಕ ಕಾಣದ, ಕಾಣುವ ಪ್ರತಿಭೆಗಳು ಹೊರಹೊಮ್ಮುತ್ತವೆ. ಮಹಾನ್ ಮೇರು ನಟರ ಸಾಲೇ ಜಿನುಗುತ್ತದೆ. ಅಂತಹ ನಟನಾ ವೀರರ ಪೈಕಿಯಲ್ಲಿ ನಮಗೆ ಕಾಣುವ ವಿಶೇಷ ಪ್ರತಿಭೆ ಅಂದರೆ ಅದು ‘ಸಾಹಸಸಿಂಹ ಡಾ. ವಿಷ್ಣುವರ್ಧನ್’.
       

ಹೌದು.., ಅವರೊಂದು ಸಂಪತ್ತು, ಚಿತ್ರರಸಿಕರ ಪಾಲಿನ ಮುತ್ತು, ನಿರ್ಮಾಪಕರ ಪಾಲಿನ ಕಾಮಧೇನು, ಅಭಿಮಾನಿಗಳ ಪ್ರೀತಿಯ ಅಣ್ಣ. ‘ ನಾನು ಅಭಿಮಾನಿಗಳನ್ನು ಪ್ರೀತಿಸುತ್ತೇನೆ, ಅವರ ಆಶೀರ್ವಾದದಿಂದಲೇ ನಾನಿಲ್ಲಿ ಇದ್ದೇನೆ. ಅವರ ಪ್ರೀತಿಗೆ ನಾನೆಂದು ಋಣಿ’ ಎಂದು ಬದುಕಿನ ತುಂಬಾ ಅಭಿಮಾನಿಗಳನ್ನು ಪ್ರೀತಿಸುತ್ತಲೇ ಇದ್ದ ಚಿರಋಣಿ. ಇಂದಿಗೂ ವಿಷ್ಣು ಎಂದರೆ ಅಭಿಮಾಣಿಗಳಲ್ಲಿ ಎನೋ ಒಂದು ರೀತಿಯ ಪುಳಕ. ಅವರ ನೆನಪು ಅಂದು-ಇಂದು-ಮುಂದು ಎಂದೆಂದೂ ಚಿರಸ್ಥಾಯಿ. ರಕ್ತಧಾನ, ನೇತ್ರಧಾನ, ಹೃದಯ ತಪಾಸಣೆ, ಕಣ್ಣಿನ ಪರೀಕ್ಷೆ, ಅನ್ನದಾನ, ವಿವಿಧ ವಿನೋಧಾವಳಿಯ ಮೂಲಕ ಪ್ರತಿ ದಿನ, ಪ್ರತಿ ನಿಮಿಷ ಅಭಿಮಾನಿಗಳು ಯಜಮಾನನನ್ನು ತಾವು ಮಾಡುವ ಸಮಾಜ ಸೇವೆಯ ಮೂಲಕ ಕಾಣುತ್ತಲೇ ಇರುತ್ತಾರೆ, ಇದ್ದಾರೆ ಕೂಡ.
ವಿಷ್ಣುವರ್ಧನ ಎನ್ನುವುದೊಂದು ಅಪ್ರತಿಮ ಮೇರು ಪ್ರತಿಭೆ. ಬಹುಶಃ ಆ ಸ್ಥಾನಕ್ಕೆ ಕನ್ನಡ ಚಿತ್ರರಂಗ ಮತ್ತೊಂದು ಪ್ರತಿಭೆಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗದೇ ಇರುವಷ್ಟು ದೊಡ್ಡ ನಟಶಿಖರ. ಡಾ. ರಾಜ್ ಕುಮಾರ್ ಜೊತೆ ಗಂಧದ ಗುಡಿ ಚಿತ್ರದಲ್ಲಿ ನಾಯಕನ ಸಮಾನ ಪಾತ್ರವನ್ನು ಹಂಚಿಕೊಂಡ ನಂತರವಂತೂ ಕನ್ನಡ ಚಿತ್ರರಂಗಕ್ಕೆ ಇಬ್ಬರು ದಿಗ್ಗಜರು ಎಂಬ ಖ್ಯಾತಿಯೂ ಬಂದಿದ್ದೂ, ಇಂದಿಗೂ ಆ ಖ್ಯಾತಿ ಅವರಿಬ್ಬರಿಗೆ ಸಲ್ಲವುದು ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ.
1952 ರ ಸಪ್ಟೆಂಬರ್ 18 ರಂದು ಮೈಸೂರಿನಲ್ಲಿ ಜನಿಸಿದ ವಿಷ್ಣುವರ್ಧನ್, ನಾರಾಯಣರಾವ್ ಹಾಗೂ ಕಾಮಾಕ್ಷಮ್ಮನವರ ಪ್ರೀತಿಯ ಮಗನಾಗಿದ್ದರು. ಬಾಲ್ಯದಿಂದಲೂ ಸಂಪತ್‍ಕುಮಾರ್ ಎಂಬ ಹೆಸರಲ್ಲಿದ್ದ ವಿಷ್ಣು, 1955ರಲ್ಲಿ ಮೊದಲಬಾರಿಗೆ ‘ಶಿವಶರಣ ನಂಬೆಯಕ್ಕ’ ಎಂಬ ಸಿನಿಮಾದಲ್ಲಿ ಬಾಲನಟನಾಗಿ ಅವಕಾಶವನ್ನು ಗಿಟ್ಟಿಸಿಕೊಂಡರು. ಮುಂದೊಂದು ದಿನ ಭರವಸೆಯ ನಾಯಕನಾಗುವುದನ್ನು ಆ ಸಿನಿಮಾ ನಟನೆಯಲ್ಲೇ ತೋರ್ಪಡಿಸಿದ್ದರು. ಆಗಿನ ಕಾಲಕ್ಕೆ ಆ ಸಿನಿಮಾ ಹೊಸ ಇತಿಹಾಸ ಬರೆದಿತ್ತು. ಅದಾಗಲೇ ಬರೋಬ್ಬರಿ 28 ದಿನಗಳ ಚಿತ್ರೀಕರಣ ನಡೆಸಿ, ಅಷ್ಟು ದಿನ ಸಿನಿಮಾ ಶೂಟಿಂಗ್ ನಡೆಸಿದ ಕನ್ನಡದ ಮೊದಲ ಚಿತ್ರ ಎಂಬ ಕೀರ್ತಿಗೂ ಪಾತ್ರವಾಗಿತ್ತು. ಇದಾದ ನಂತರ ಎಸ್. ಎಲ್. ಬೈರಪ್ಪನವರ ವಂಶವೃಕ್ಷ ಕಾದಂಬರಿಯಾಧಾರಿತ ‘ಕೋಕಿಲವಾಣಿ’ ಎಂಬ ಚಿತ್ರದಲ್ಲಿ ಅವಕಾಶ ಗಿಟ್ಟಿಸಿಕೊಂಡು ಪುಟ್ಟ ಪಾತ್ರವನ್ನು ನಿರ್ವಹಿಸಿ ನಾಯಕನಾಗುವ ಎಲ್ಲಾ ಅವಕಾಶವನ್ನು ಗಿಟ್ಟಿಸಿಕೊಂಡಿದ್ದರು.  ನಟನಾಗಿ ಅಭಿನಯಿಸಿದ ಪ್ರಥಮ ಚಿತ್ರ ‘ನಾಗರಹಾವು’. ಅವರಿಗೆ ಆ ಚಿತ್ರದ ನಿರ್ದೇಶಕ ಪುಟ್ಟಣ್ಣ ಕಣಗಾಲರವರು ಸಿನಿಮಾದ ಶೂಟಿಂಗ್ ವೇಳೆಯಲ್ಲಿ ‘ವಿಷ್ಣುವರ್ಧನ’ ಎಂದು ಹೊಸ ನಾಮಕರಣ ಮಾಡಿದ್ದರು. ಅಲ್ಲಿಂದ ಸಂಪತ್‍ಕುಮಾರ್‍ನಾಗಿದ್ದವನು ವಿಷ್ಣುವರ್ಧನ ಆದ. ಬಾಲ್ಯದ ವಿಧ್ಯಾಭ್ಯಾಸವನ್ನು ಮೈಸೂರಿನಲ್ಲೇ ಕಳೆದ ವಿಷ್ಣುವರ್ಧನ್, ಮುಂದಿನ ಶಿಕ್ಷಣವನ್ನು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಮುಗಿಸಿ ನಟನೆಯತ್ತ ಹೆಜ್ಜೆಹಾಕಿದ್ದರು. ಇವರ ತಂದೆ ಕಲಾವಿದರಾಗಿದ್ದು, ತಂದೆಯ ಕಲಾ ಭಕ್ತಿ ಮಗನಿಗೂ ಪಸರಿಸಿತ್ತು. ತಂದೆಯವರು ಸಂಗೀತ, ಸಂಭಾಷಣೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಅದುವೇ ಸಂಪತ್‍ಕುಮಾರ್(ವಿಷ್ಣುವರ್ಧನ)ನಿಗೆ ಬಾಲ್ಯದಿಂದಲೂ ನಟನೆಯ ವಿಷಯದಲ್ಲಿ ತೀವ್ರ ಆಸಕ್ತಿಯನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಿತ್ತು..
‘ವಿಷ್ಣುವರ್ಧನ’ ಎಂಬ ಹೆಸರು ಚಿತ್ರದ ಶೀರ್ಷಿಕೆಯ ಮೇಲೆ ಬಂತೆಂದರೆ ಆ ಸಿನಿಮಾ ಫ್ಯಾಮಿಲಿ ಚಿತ್ರರಸಿಕ ಬಳಗವನ್ನು ಚಿತ್ರಮಂದಿರದ ಕಡೆಗೆ ಸೆಳೆಯುವುದು ಖಾತ್ರಿ ಎಂದೇ ಅರ್ಥ. ಅಲ್ಲದೇ ಅವರ ಸಿನಿಮಾಗಳೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಹೆಸರು ಮಾಡುತ್ತಿದ್ದದ್ದೂ ನಿರ್ಮಾಪಕರುಗಳಲ್ಲಿ ನಮ್ಮ ದುಡ್ಡು ಸೇಫ್ ಎನ್ನುವ ಭಾವವನ್ನು ತಂದಿರುತ್ತಿತ್ತು. ಅವರೊಬ್ಬ ಸಾಧು ವ್ಯಕ್ತಿ. ಯಾರನ್ನು ಯಾವುದನ್ನೂ ನೋಯಿಸದ ಹೃದಯವಂತ. ತನ್ನ ನಿಜ ಜೀವನದಲ್ಲಿ ಯಾವತ್ತೂ ಮತ್ತೊಬ್ಬರಿಗೆ ನೋವಾಗುವಂತೆ ಗಟ್ಟಿಯಾಗಿ ಮಾತನಾಡಿದವರಲ್ಲ. ಯಾವ ಕೆಲಸ ಮಾಡುವುದಿದ್ದರೂ ಮತ್ತೊಬ್ಬರಿಗೆ ತಿಳಿಯದಂತೆ ಕಾಯ ಕೈಗೊಳ್ಳುವುದು ಅವರ ಸ್ಫೆಷಾಲಿಟಿಯಲ್ಲೊಂದು. ಅವರದು ಸರಳ ವ್ಯಕ್ತಿತ್ವ. ಸದಾ ಸಾಯಿಬಾಬನ ಭಕ್ತಿಯಲ್ಲಿಯೇ ಕಾಲಕಳೆಯುತ್ತಿದ್ದ ವಿಷ್ಣುವರ್ಧನ ಎಂದೂ ರಾಜಕೀಯದ ವಿಷಯಕ್ಕೆ ಹೋಗದೆ ಸ್ವತಂತ್ರತೆಯಲ್ಲಿಯೇ ತಮ್ಮ ಬಳಿ ಬಂದ ಅಭಿಮಾನಿಗಳನ್ನು ತಮ್ಮಿಂದ ಆದ ರೀತಿಯಲ್ಲಿ ಸಹಾಯ ಮಾಡಿ, ಕಳುಹಿಸುತ್ತಿದ್ದರು.
ತಮ್ಮೊಳಗೆ ಅದೇನು ನೋವಿದ್ದರೂ ಯಾರಲ್ಲಿಯೂ ತೋಡಿಕೊಳ್ಳದ ವಿಷ್ಣು, ನಿಜಕ್ಕೂ ಇನ್ನೊಬ್ಬರಿಗಾಗಿ ಬದುಕಿದ ಧೀಮಂತ ವ್ಯಕ್ತಿ ಎಂದರೆ ತಪ್ಪಿಲ್ಲ. ಅವರ ಸಿನಿಮಾ ಎಂದರೆ ಅಲ್ಲೊಂದು ಹೊಸ ದಾಖಲೆ ಇದ್ದೆ ಇರುತ್ತದೆ ಎಂದು ಜನ ಮಾತನಾಡುತ್ತಿದ್ದ ಕಾಲವೊಂದಿತ್ತಂತೆ. ಅದಕ್ಕೆ ಕಾರಣವೂ ಇತ್ತು. ಅವರ ಮೊದಲ ಸಿನಿಮಾ ‘ನಾಗರಹಾವು’ ಬೆಂಗಳೂರಿನ ಸಾಗರ್ ಚಿತ್ರಮಂದಿರವೊಂದರಲ್ಲೇ ಬರೋಬ್ಬರಿ 25 ವಾರಗಳನ್ನು ಪೂರೈಸಿ, ಆಗಿನ ಕಾಲಕ್ಕೆ 7 ಲಕ್ಷ ರೂಪಾಯಿಗಳ ಗಳಿಕೆ ಕಂಡು ಹೊಸ ದಾಖಲೆ ಬರೆದಿತ್ತು. ಅಲ್ಲದೇ ಬೆಂಗಳೂರಿನ 3 ಚಿತ್ರ ಮಂದಿರಗಳಲ್ಲಿ ನೂರು ದಿನ ಪೂರೈಸಿದ ಸಿನಿಮಾ ಎಂಬ ಹೆಗ್ಗಳಿಕೆಗೂ ಆ ಚಿತ್ರ ಪಾತ್ರವಾಗಿತ್ತು. ರಾಷ್ಟ್ರ ಪ್ರಶಸ್ತಿಯನ್ನು ಬಾಚಿಕೊಂಡಿತ್ತು. ಅದಾದ ನಂತರ ನೂರಕ್ಕೂ ಹೆಚ್ಚು ಹಿಟ್ ಸಿನಿಮಾ ನೀಡಿದ ಖ್ಯಾತಿ ಡಾ. ವಿಷ್ಣುವರ್ಧನ್‍ರದ್ದು. ಅವರ ಸಿನಿಮಾ ಸಾಧನೆಯನ್ನಂತು ಪಟ್ಟಿ ಮಾಡುತ್ತಾ ಹೊರಟರೆ ಲೇಖನ ಮುಗಿಯದಷ್ಟು ಸಿಗುತ್ತವೆ, ಸರಳ ಜೀವನದ ಸಾಮಾಜಿಕ ಬದ್ಧತೆಯನ್ನು ಹೊಂದಿದ್ದ ವಿಷ್ಣುವರ್ಧನ ಕನ್ನಡ ಚಿತ್ರರಂಗಗಳಲ್ಲಿ ಅತೀ ಹೆಚ್ಚು ದ್ವಿಪಾತ್ರ ನಿರ್ವಹಿಸಿದ ನಟ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ. ಅವರ ನಟನೆಗೆ 6 ಬಾರಿ ‘ಶ್ರೇಷ್ಠ ನಟ’ ಪ್ರಶಸ್ತಿಯೂ ದೊರೆತಿದ್ದು, ನಟನೆ ಮಾತ್ರವಲ್ಲದೇ ಕಿಲಾಡಿ ಕಿಟ್ಟು, ನಾಗಕಾಳ ಬೈರವ, ಸಾಹಸಸಿಂಹ, ಖೈದಿ, ಮೋಜುಗಾರ, ಸೊಗಸುಗಾರ, ವಿಷ್ಣುಸೇನಾ ಮೊದಲಾದ ಚಿತ್ರಗಳಲ್ಲಿ ಹಿನ್ನೆಲೆ ಗಾಯನವನ್ನು ಮಾಡಿ ಗಾಯಕರಾಗಿಯೂ ಅಭಿಮಾನಿಗಳ ಹೃದಯ ಕದ್ದಿದ್ದಾರೆ.
ಅದು ಡಾ. ರಾಜ್‍ಕುಮಾರ್ ನಿಧನ ಹೊಂದಿದ್ದ ಸಮಯ. ಆಗ ಹಲವಾರು ಜನ, ವಿಷ್ಣುವರ್ಧನ್ ಬಳಿ ಬಂದು ರಾಜ್‍ಕುಮಾರ್ ಅವರ ಸ್ಥಾನಕ್ಕೆ ನೀವೇ ಬರಬೇಕು ಎಂದು ಹೇಳಿದ್ದರು. ಜನರ ಆ ದಿನದ ಮಾತಿಗೆ ಉತ್ತರ ನೀಡಿದ್ದ ವಿಷ್ಣುವರ್ಧನ್, ‘ರಾಜಕುಮಾರ ಎಂದರೆ ಸೂರ್ಯ ಇದ್ದಂತೆ. ನಾನು ಎಂದಿಗೂ ಸೂರ್ಯನಾಗಲೂ ಸಾಧ್ಯವಿಲ್ಲ. ಸೂರ್ಯ  ಚಂದ್ರನಾಗುವುದಿಲ್ಲ, ಚಂದ್ರ ಸೂರ್ಯನಾಗುವುದಿಲ್ಲ. ಚಂದ್ರ ಚಂದ್ರನೇ, ಸೂರ್ಯ ಸೂರ್ಯನೆ’ ಎಂದು ಬರೀ ಕಲೆಯಷ್ಟೇ ಅಲ್ಲದೇ ಇನ್ನೊಬ್ಬ ಕಲಾವಿದನ ಮೇಲೆ ಇರುವ ಪ್ರೀತಿ, ಗೌರವವನ್ನು ತೋರಿಸಿದ್ದರು. ಈ ಸಾಕ್ಷಿ ಪ್ರಜ್ಞೆಯನ್ನು ಗಮನಿಸಿದರೆ ವಿಷ್ಣು ಎಷ್ಟು ದೊಡ್ಡ ಸಹಬಾಳ್ವೆಯ, ಗೌರವಾಧಾರಿತ ವ್ಯಕ್ತಿ ಎಂಬುದು ಎಲ್ಲರಿಗೂ ಅರಿಯುತ್ತದೆ. ಇಂತಹ ಮೇರು ಪ್ರತಿಭೆ ಕೇವಲ ಪರದೆಯ ಮೇಲಷ್ಟೆ ಮೇರು ಬಿಂಬವಾಗಿ ಮಿಂಚದೇ ನಾವೆಲ್ಲ ಇಂದು ನೆನಸಿಕೊಳ್ಳುವ ನೆನಪುಗಳ ಚಿತ್ರವಾಗಿ ಪ್ರತಿ ಕನ್ನಡಿಗನ ಹೃದಯದಲ್ಲಿ ನಿಂತಿದ್ದಾರೆ. ಅವರಿಂದು ನಮ್ಮ ಜೊತೆ ಇಲ್ಲವೆನ್ನುವ ಕೊರಗೊಂದನ್ನು ಬಿಟ್ಟರೆ, ಅವರ ನೆನಪು, ಆದರ್ಶ, ಎಲ್ಲವೂ ಪ್ರತಿಯೊಬ್ಬ ಕನ್ನಡಿಗನ ಹೃದಯದಲ್ಲಿ ಹೂ ಬಳ್ಳಿಯಂತೆ ಹಬ್ಬಿ ನಿಂತಿದೆ. ಅಭಿಮಾನಿಗಳಿಗೆ ಪ್ರೀತಿಯ ಅಣ್ಣನಾಗಿ, ಕನ್ನಡದ ಸಿಂಹಾದ್ರಿಯಂತೆ ತನು ಮನದಲ್ಲಿ ನಲೆಸಿರುವ ನಮ್ಮ ವಿಷ್ಣುವರ್ಧನ ಯಾವಾಗಲೂ ಕರುನಾಡಿನ ಸಿಂಹನೆ ಎನ್ನುವುದರಲ್ಲಿ ಏರಡು ಮಾತಿಲ್ಲ...


No comments:

Post a Comment