Wednesday 23 December 2015

ಹೆಣ್ಣು-12


ಹೆಣ್ಣಿನ ಮೇಲಿನ ದುರಾಕ್ರಮಣ, ಅತ್ಯಾಚಾರ, ಅನಾಧಿ ಕಾಲದಿಂದಲೂ ನಡೆಯುತ್ತಲೇ ಬಂದಿದೆ. ಈ ಬಗ್ಗೆ ನಮ್ಮ ಪುರಾಣಗಳಲ್ಲೂ ಕೂಡ ಬಹಳಷ್ಟು ಹೃದಯ ವಿದ್ರಾವಕ ವಿಚಾರಗಳು ಉಲ್ಲೇಖವಾಗಿವೆ. ಪುರುಷ ಪ್ರಧಾನ ಸಮಾಜದಲ್ಲಿ ಗಂಡು ಹೆಣ್ಣನ್ನು ತನ್ನ ಭೋಗದ ವಸ್ತುವೆಂದು ತಿಳಿದು ಅವಳ ಮೇಲೆ ನಿರಂತರವಾಗಿ ಆಕ್ರಮಣ ಮಾಡುತ್ತಲೇ ಬಂದಿದ್ದಾನೆ. ಗಂಡಿನ ಈ ನಡೆಯನ್ನು ಸಮಾಜ ಕೂಡ ಸತತವಾಗಿ ಕ್ಷಮಿಸುತ್ತಲೇ ಬಂದಿದೆ. ಕೇವಲ ಭಾರತದ ಪುರಾಣಗಳಷ್ಟೇ ಅಲ್ಲ, ವಿಶ್ವದ ಯಾವುದೇ ಪುರಾಣವನ್ನು  ನೋಡಿದರೂ ಇದೇ ಕಥೆ ಎದ್ದು ಕಾಣುತ್ತದೆ. ಒಬ್ಬ ವ್ಯಕ್ತಿ ಇನ್ನೊಬ್ಬಾಕೆಯನ್ನು ಹೆದರಿಸಿ, ಬೆದರಿಸಿ, ಹಿಂಸಿಸಿ, ಬಲಾತ್ಕಾರವಾಗಿ, ಅವಳ ಇಷ್ಟಕ್ಕೆ ವಿರೋಧವಾಗಿ, ನಡೆಸುವ ಲೈಂಗಿಕ ಆಕ್ರಮಣವನ್ನು ಅತ್ಯಾಚಾರವೆಂದು ಕರೆಯಬಹುದಾದರೂ, ಅದು ಕೇವಲ ಸಂಭೋಗವೇ ಆಗಿರಬೇಕೆಂದೇನೂ ಇಲ್ಲ. ಹೆಣ್ಣಿನ ವಿಚಾರವಾಗಿ ಅಸಭ್ಯವಾಗಿ ವರ್ತಿಸುವುದು, ಕೆಣಕುವುದು, ಪೀಡಿಸುವುದು, ಚುಡಾಯಿಸುವುದು ಅನಾವಶ್ಯಕವಾಗಿ ಅವಳ ಮೇಲೆ ಕೈಯಾಡಿಸುವುದು, ಮುಟ್ಟುವುದು ಕೂಡ ಅತ್ಯಾಚಾರದ ಪರಿಧಿಯೊಳಗೆ ಬರುತ್ತದೆ.
ಕೇವಲ ಮನುಷ್ಯ ವರ್ಗದಲ್ಲಿ ಮಾತ್ರವಲ್ಲದೆ ಪ್ರಾಣಿವರ್ಗವೆನ್ನುವ ಎಲ್ಲಾ ಜಾತಿಯಲ್ಲೂ ಈ ಅತ್ಯಾಚಾರವೆನ್ನುವುದು ಸಾಮಾನ್ಯವಾದರೂ, ಮನುಷ್ಯನ ಮಾನಕ್ಕೆ ಜಾಸ್ತಿ ಬೆಲೆ ಎನ್ನುವಂತೆ ಮನುಷ್ಯರಾದ ನಮ್ಮ ಘಟನೆಯನ್ನು ಮಾತ್ರಾ ಪ್ರತಿಬಿಂಬಿಸುತ್ತಾ ಸಾಗುತ್ತೇವೆ. ಸಾಮಾನ್ಯವಾಗಿ ಇಂತಹ ಘಟನೆಗಳು ತೆರೆಯ ಮರೆಯಲ್ಲಿ, ಏಕಾಂತದಲ್ಲಿ, ಕತ್ತಲೆಯಲ್ಲಿ ನಡೆಯುತ್ತಿದ್ದರೂ, ನಡೆದದ್ದನ್ನು ಹೇಳಿಕೊಳ್ಳುವುದು ಅವಮಾನಕರವೆಂದು ಪರಿಗಣಿಸಲಾಗುವುದರಿಂದ ಆಗಿದ್ದೆಲ್ಲವೂ ಬೆಳಕಿಗೆ ಬರುವುದಿಲ್ಲ. ಬೆಳಕಿಗೆ ಬಂದ ಪ್ರಕರಣಗಳನ್ನಷ್ಟೇ ಗಣನೆಗೆ ತೆಗೆದುಕೊಂಡು ನೋಡಿದರೆ ಒಂದು ಕ್ಷಣ ಎಂತಹವರು ದಂಗಾಗಬೇಕು ಹಾಗಾಗುತ್ತದೆ.
ಒಂದು ಮೂಲಗಳ ಪ್ರಕಾರ, ನಮ್ಮ ಕರ್ನಾಟಕದಲ್ಲೇ 2008 ರಿಂದ 2012 ರ ವರೆಗೆ 2,798 ಅತ್ಯಾಚಾರ ಪ್ರಕರಣಗಳು ನಡೆದಿವೆಯಂತೆ. ಇದು ಪೋಲಿಸ್ ಇಲಾಖಾ ವರದಿಯಾದರೆ ಲೆಕ್ಕಕ್ಕೆ ಸಿಗದೆ ಮಣ್ಣು ಕಚ್ಚಿರುವ ರೋಧನಿಕೆ ಎಷ್ಟು ನಡೆದಿವೆಯೋ ದೇವನೇ ಬಲ್ಲ. ಇನ್ನೂ ಈ ಅಂಕಿ ಸಂಖ್ಯೆಯನ್ನು ದೇಶೀಯ ಮಟ್ಟದಲ್ಲಿ ಗಮನಿಸಿದರೆ 2010 ರಲ್ಲಿ 2,13,585 ಮಂದಿ ಸ್ತ್ರೀಯರ ಮೇಲೆ ದೌರ್ಜನ್ಯ ನಡೆದಿದ್ದು, 22,172 ಲೈಂಗಿಕ ಆಕ್ರಮಣ, 40,613 ಅಸಭ್ಯ ವರ್ತನೆಗಳ ಕೇಸ್‍ಗಳು ದಾಖಲೆಯಲ್ಲಿವೆ. 2011ರ ಅಂಕಿ ಅಂಶಗಳ ಪ್ರಕಾರ ಪ್ರತಿ 54 ನಿಮಿಷಗಳಿಗೊಂದು ರೇಪ್, 51 ನಿಮಿಷಗಳಿಗೊಮ್ಮೆ ಲೈಂಗಿಕ ಕಿರುಕುಳ, 26 ನಿಮಿಷಗಳಿಗೊಮ್ಮೆ ಹೆಂಗಸನ್ನು ಚುಡಾಯಿಸುವುದು, 192 ನಿಮಿಷಗಳಿಗೊಂದು ವರದಕ್ಷಿಣೆ ಕೊಲೆ ನಡೆದಿದೆಯಂತೆ. ಇವೆಲ್ಲವನ್ನು ಮೀರಿ ಇಂದು ಒಂದು ಅಂದಾಜಿನ ಪ್ರಕಾರ ಪ್ರತಿ 30 ನಿಮಿಷಗಳಿಗೊಂದು ರೇಪ್ ನಡೆಯುತ್ತಿದೆಯಂತೆ.
ಅತ್ಯಾಚಾರವೊಂದು ಗುರುತರವಾದ, ಅಮಾನವೀಯ ಅಪರಾಧ ಅದಕ್ಕೆ ತಕ್ಕ ಶಿಕ್ಷೆಯಾಗಬೇಕೆಂಬುನ್ನು ಸಮಾಜ ಪದೆ ಪದೇ  ಸಭೆ, ಪ್ರತಿಭಟನೆ, ಭಾಷಣದಲ್ಲಿ ತೋರ್ಪಡಿಸುತ್ತಿದ್ದರೂ ಯಾವ ಬದಲಾವಣೆಯೂ ಆಗುತ್ತಿಲ್ಲ. ದಿನೇ ದಿನೇ ಹೆಣ್ಣು ಮಕ್ಕಳ ಈ ಶೋಷಣೆ ಜಾಸ್ತಿಯಾಗುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ. ಈ ಭವಣೆ ನೀಗಲು ಕಾನೂನು ಕೈ ಇದ್ದರೂ ಸಮರ್ಪಕವಾದ ವಿಚಾರಣೆಯಿಲ್ಲದೆ ಆರೋಪಿಗಳೆಲ್ಲ ಕೈ ತಪ್ಪಿಸಿಕೊಳ್ಳುತ್ತಿದ್ದಾರೆ.
 ಒಂದಂತು ನಿಜ...
‘ದಶ ಶಿರಂ ಪೊತ್ತೊಯ್ಧುದು ಒರ್ಬನ ಸತಿಯನಲ್ತು, ಸತಿತನವನ್  ಉಯ್ದಿಹನ್...’ ಎಂಬ ಸಾಲು ಶ್ರೀರಾಮಾಯಣ ದರ್ಶನಂ ಕಾವ್ಯದಲ್ಲಿ ಹೇಗಿದೆಯೋ ಹಾಗೆ ಇಂದು ಅತ್ಯಾಚಾರ ವೈಯಕ್ತಿಕವಾಗಿ ಯಾವುದೋ ಒಂದು ಹೆಣ್ಣಿನ ಮೇಲೆ ನಡೆಯುತ್ತಿರುವುದಿಲ್ಲ. ಅದು ಇಡೀ ಹೆಣ್ಣು ಕುಲದ ಮೇಲೆ, ಆ ಮನು ಕುಲದ ಮೇಲೆ ನಡೆಯುತ್ತಿರುವ ಅತ್ಯಾಚಾರ. ಅದರ ಹೊಣೆಯನ್ನು ಇಡೀ ಮನುಕುಲವೇ ಹೊರಬೇಕಾಗಿದೆ. ‘ಪುರುಷನಿರಲಾಗದು ಈ ಧರೆಯ ಮೇಲೊರ್ವನುಂ  ಪೊರೆಯದೆ ಅನ್ನೆಗಂ ಆ ಸತೀತ್ವಮಂ...’ ಎಂಬ ರನ್ನನ ಮಾತುಗಳನ್ನು ಸ್ವಲ್ಪ ಬದಲಾಯಿಸಿ ಹೇಳುವುದಾದರೆ, ಈ ಅತ್ಯಾಚಾರದ ಅನಿಷ್ಟವನ್ನು ತಡೆಯಲಾಗದಿದ್ದರೆ ಈ ಭೂಮಿಯ ಮೇಲೆ ವಾಸಿಸುವ ಹಕ್ಕನ್ನು ಮನುಷ್ಯ ಕಳೆದುಕೊಳ್ಳುತ್ತಾನೆ ಎಂದರ್ಥ...

No comments:

Post a Comment