Friday 6 May 2016

ಅಲೆದಾಟದ ನಡುವೆ...


   
            ಮೊದಲಿನಿಂದಲೂ ಅಲೆಮಾರಿತನ ನನಗೆ ಇಷ್ಟ ಬೆಟ್ಟ-ಗುಡ್ಡ ಹತ್ತೋದು, ತಿಳಿಯದ ಊರುಗಳಲ್ಲಿ ಸುತ್ತೋದು, ನಿರ್ಜನ ಪ್ರದೇಶ, ಬಾಲ್ಯ ದಿನ ಕಂಡಿದ್ದ-ಕಳೆದ ಅದ್ಭುತ ಪ್ರದೇಶಗಳಲ್ಲಿ ಅಲೆಯೋದು, ಹೊಸ ಮುಖಪರಿಚಯದವರೊಂದಿಗೆ ಮಾತಾಡೋದು, ಹೊಸತನದಲ್ಲಿ ಬದುಕೋದು, ಹೊಸ ಹೊಸ ಜೀವನಶೈಲಿಯಲ್ಲಿ ಬಾಳುವ ಜನರನ್ನು ಒಡನಾಡುವುದು, ನವೀನ ಬಗೆಯಲ್ಲಿ ಬಾಳಿನ ಏರಿಳಿತವನ್ನು ಕಂಡುಕೊಂಡು ಕಷ್ಟವಿರಲಿ-ಸುಖವಿರಲಿ ಅದರಲ್ಲೇ ಖುಷಿಯ ನಲ್ಮೆಯನ್ನು ಪಡೆಯುವುದು.., ಹೀಗೆ ಎಲ್ಲವೂ ಕೂಡ ಕಾಣದ ಪುಳಕತನದಲ್ಲಿ ಕಂಡು, ಮೇಳೈಸಿಕೊಂಡು ಜಾತ್ರೆಯಂತೆ ಬಾಳುವುದು ನನಗೊಂಥರ ಇಷ್ಟ.

ಬಹುಶಃ ಎಲ್ಲರಂತೆ ಬದುಕುವ ಭಿತ್ತಿ, ಅನುಭವಿಸುವ ಚಾಕರಿ ನನ್ನಲ್ಲಿಲ್ಲ. ಸಣ್ಣ ನಡಿಗೆಯಲ್ಲೇ ಯಾರೂ ಕಾಣದ ಸುಖ ನಾ ಕಾಣುವೆ. ಯಾರೂ ಅರಿಯದ ಮೌನ ಮನವನ್ನು ಜೋಕಾಲಿಯಂತೆ ತೂಗಿಸಿಕೊಂಡು ಹೊಸ ವಿಚಾರಗಳನ್ನು ತುಂಬಿಸಿ ತುಳುಕಿಸಿ ಮೈಮರೆಯುವೆ. ನನ್ನೊಳಗೆ ಹರಿಯುವ ಎಲ್ಲಾ ಲಹರಿಗಳು ನನಗೆ ಖುಷಿ ಕೊಡುತ್ತವೆ. ಅವುಗಳು ಇನ್ನೂ ಒಮ್ಮೊಮ್ಮೆ ಗಟ್ಟಿಯಾಗಿ ಜನಜಂಗುಳಿಯ ಮಧ್ಯೆಯೂ ಹರಟಲು ಕಾತರಿಸುತ್ತವೆ. ವಿಧ್ಯಾಭ್ಯಾಸದ ದಿನಗಳಲ್ಲಂತೂ ದಿನಚರಿಯ ಖಾತೆಯಲ್ಲಿ ಬರೋಬ್ಬರಿ ತಿರುಗಾಟ ನಡೆಯುತ್ತಾ, ಬಗಲಿಗೆ ಪುರವಣಿಗಳ ಪುಟದಂತೆ ಪಯಣದ ಮೋಜು ಜೋಡಣೆಯಾಗುತ್ತಲೇ ಇತ್ತು. ಕೆಲಸಕ್ಕೆಂದು ಸೇರಿದ ಮೇಲೆ ಮಾಮೂಲಿ ರಜಾದಿನ ಮಾತ್ರಾ ಪಟ್ಟಿ ಮಾಡುತ್ತಿದ್ದೆ ಆದರೆ ಇತ್ತೀಚಿಗೆ ಅದಕ್ಕೂ ಫುಲ್‍ಸ್ಟಾಪ್ ಇತ್ತು, ಕಛೇರಿ ಕೆಲ¸ದಲ್ಲೇ ಜಾಸ್ತಿ ಮಗ್ನನಾಗಿದ್ದೆ ಎಂದರೆ ತಪ್ಪಿಲ್ಲ... 

     ಆದರೂ ನಡುನಡುವೆ ಕಛೇರಿಯಿಂದ ಮನೆಗೆ ಬರುವ ಸಮಯದಲ್ಲಿ ಸುಮ್ ಸುಮ್ಮನೆ ದಾರಿ ತಪ್ಪಿಸಿಕೊಂಡು ‘ನೋಡೋಣ ಇಂದು ಈ ರೂಟ್‍ನಲ್ಲ್ಲಿ ಹೋದರೆ ಏನಾದರೂ ಹೊಸತನ್ನು ಕಾಣಬಹುದೇನೋ’ ಎನ್ನುವ ಹಂಬಲದೊಂದಿಗೆ ಹಾದಿ ಬದಲಿಸಿ, ವಿಳಾಸ ವಿಚಾರಿಸಿ, ವಿಶ್ರಾಂತದೊಂದಿಗೆ ಪಯಣಿಸಿ ಮನೆಯೆಂಬ ಗೂಡು ಸೇರುತ್ತಿದ್ದೆ. ಇವೆಲ್ಲ ನನ್ನ ಸಣ್ಣ ಐತಿಹ್ಯ. ಇವುಗಳನ್ನೆಲ್ಲಾ ಮೊನ್ನೆ ಮೊನ್ನೆ ಮೆಲುಕು ಹಾಕಿಕೊಳ್ಳುತ್ತಿರುವ ಸಂಧರ್ಭದಲ್ಲೇ ಹೊಸತೊಂದು ಪ್ರವಾಸಕ್ಕೆ  ಅವಕಾಶ ಬಂದಿದ್ದು ಮನಕ್ಕೆ ಒಂಥರಾ ಹಳೆ ನೆನಪಿನ ಮೆಲುಕಲ್ಲಿ ಹೊಸ ಅನುಭವ ಪಡೆಯುವ ಕಾತರಿಕೆ,  ಹೋಗೋಣ ಎನ್ನುವ ನಿರ್ಧಾರ ನೀಡಿತ್ತು.

 ಪ್ರಯಾಣ ನಿರ್ಧಾರವಾಗಿದ್ದು ದೂರದ ಮಂಡ್ಯಕ್ಕೆ. ಎರಡು ವರ್ಷಕ್ಕೊಮ್ಮೆ ಮಂಡ್ಯದ ಹಾಡ್ಲಿ ಗ್ರಾಮದಲ್ಲಿ ನಡೆಯುವ ದೇವಸ್ಥಾನವೊಂದರ ಹಬ್ಬಕ್ಕೆ ಎಂ.ಡಿ ಸಾಹೇಬರು ಬನ್ನಿ ಎನ್ನುವ ಕರೆ ಕಳುಹಿಸಿದ್ದು, ನನ್ನೊಳಗೊಂಥರ ಸಡಗರವನ್ನೇ ಸೃಷ್ಟಿಸಿತ್ತು. ಅದು ಅವರ ಹುಟ್ಟೂರು. ನಮಗಿಂತ ಒಂದಿನ ಮುಂಚೆಯೇ ಅವರು ಅವರೂರಿಗೆ ಹೋಗಿ ಅಲ್ಲಿನ ಸಂಭ್ರಮ ಸಡಗರ ನೋಡಿ, ಅದನ್ನು ನಾವೂ ಸವಿಯಲಿ ಎಂದು ಕರೆ ನೀಡಿದ್ದರು.

       ತಡಮಾಡದೇ ಮರುದಿನ ಬೆಳಿಗ್ಗೆಯೇ ಒಟ್ಟಿಗೆ 8/9 ಜನ ಮಾಮೂಲಿ ಓಮಿನಿಯಲ್ಲೇ ಪ್ರಯಾಣ ಪ್ರಾರಂಭಿಸಿಯೇ ಬಿಟ್ಟೆವು. ಒಂಥರ ಮಜವಾಗಿತ್ತು. ಹಾಡುತ್ತಾ, ಹರಟುತ್ತಾ, ಮಾತಲ್ಲಿ ಒಬ್ಬ-ಇನ್ನೊಬ್ಬನ ಕಾಲೆಳೆಯುತ್ತಾ ನಡು ನಡುವೇ ಗಾಡಿಗೆ ವಿಶ್ರಾಂತಿವೀಯುತ್ತಾ, ಬಿಸಿಲ ಬೇಗೆಗೆ ಮಜ್ಜಿಗೆ ಸವಿಯುತ್ತಾ ಮಂಡ್ಯ ರೀಚಾಗೆ ಬಿಟ್ಟೆವು.

ಒಂಥರಾ ಕಿರುವಣಿಯಂತೆ ಹಾದಿ ಸಾಗುತ್ತಿತ್ತು. ಓಣಿಯ ಎರಡು ಬದಿಗಳಲ್ಲಿ ಮನೆಗಳ ಕಿಕ್ಕಿರಿದ ಸಾಲುಗಳು. ಎಲ್ಲಿ ನೋಡಿದರೂ ಹಬ್ಬದ ಪ್ರಯುಕ್ತ ಬಣ್ಣ ಪಡೆದ ಮನೆಗಳು ರಂಜಿಸುತ್ತಾ ನಮ್ಮನ್ನು ಸ್ವಾಗತಿಸುತಿದ್ದವು. ಅಂತೂ ನಮ್ಮ ಸರ್.., ಮನೆ ಸಿಕ್ಕಿತು. 

    ತಲುಪುವಿಕೆ ಮಧ್ಯಾಹ್ನವಾದ್ದರಿಂದ ಬಿಸಿಲಿನ ಬೇಗೆ ಅಲ್ಲಿ ಬೆಂಗಳೂರಿಗಿಂತ ಸ್ವಲ್ಪ ಜಾಸ್ತಿಯೇ ಧಗೆಗುಟ್ಟುತ್ತಿದ್ದು, ನೀರನ್ನು ಕುಡಿದು ಇನ್ನೇನೂ ಊಟಕ್ಕೆ ಕೂರುವ ಮುನ್ನ ವರಾಂಡವೆಲ್ಲವನ್ನು ಒಂದಕ್ಕಿ ರೌಂಡ್‍ನಲ್ಲಿ ಪೂರೈಸಿ ಮಟನ್ ಚಿಕನ್ ಸೇರಿದಂತೆ ಭರ್ಜರಿ ಊಟದಲ್ಲಿ ಸಿಕ್ಕ ಎಲ್ಲವನ್ನು ಹೀರಿಕೊಂಡು, ಊಟವನ್ನು ಮುಗಿಸಿ ಕೈ ತೊಳೆಯುತ್ತಿದ್ದಂತೆ ಬಾಸ್ ಮಗ ಮೋನಿಷ್ ಮಾವಿನ ಕಾಯಿ ಕುಯ್ದುಕೊಂಡು ಬರುವ ಪ್ಲಾನ್‍ಗೆ ನನ್ನ ಕರೆದದ್ದು ಪ್ರಯಾಣದ ಸವಿ ಅನುಭವಿಸಲು ಹೊಸ ತಿರುವು ನೀಡಿತು.  

‘ಆಯ್ತು’ ಎನ್ನುವ ನಿರ್ಧಾರದೊಂದಿಗೆ, ಬಲಅಂಕಿ - ಎಡಅಂಕಿ ಎಂಬಂತೆ  ಸಹಪಾಠಿಗಳಾದ ಚಂದ್ರು, ಕುಮಾರ್, ಸೇರಿದಂತೆ ಐದಾರು ಜನರನ್ನು ಕರೆದುಕೊಂಡು ಮಾವಿನ ಮರಕ್ಕೆ ದಾರಿ ತೋರಿಸುವ ನಾವಿಕರೆಂಬಂತೆ ಅಲ್ಲಿಯೇ ಹುಟ್ಟಿ ಬೆಳೆದ, ಮನೋಜ್ ಹಾಗೂ ಮೂರ್ತಿ ಚಿಕ್ಕದಾದರೂ ‘ನಾನೆಲ್ಲ ಬಲ್ಲೆ ನನ್ನ ಕೀರ್ತಿ ದೊಡ್ಡದು’ ಎನ್ನುತ್ತಿದ್ದ ಭುವನ್ ಅಲಿಯಾಸ್ ‘ಗೂಳಿ’  ಎನ್ನುವ ಇಬ್ಬರು ಪೋರರನ್ನು ಕರೆದುಕೊಂಡು ಮುಂದೆ ನಡೆಯಿರಿ ಎನ್ನುತ್ತಾ, ಅವರಿಬ್ಬರÀ ಹಿಂದೆ ಹಿಂಬಾಲಕರಂತೆ ನಮ್ಮ ನಡಿಗೆ ಸಾಗಿತು.

‘ಗೂಳಿ’ ಎಂಬ ನಾಮಾಂಕಿತದೊಂದಿಗಿದ್ದ ಭುವನ್ ಗೂಳಿಯಂತೆ ಖಂಡಿತ ಇರಲಿಲ್ಲ. ಅಂಗನವಾಡಿ ಓದುವ ವಯಸ್ಸು ಅನಿಸುತ್ತದೆ. ಇನ್ನೂ ಎಳೆ ಪ್ರಾಯ. ಬಹುಶಃ ನಾಲ್ಕೈದು ವರ್ಷ ವಯಸ್ಸಿರಬಹುದೇನೋ!?, ಆ ಸಣ್ಣ ಪ್ರಾಯದಲ್ಲೇ ತನ್ನ ಮನೆಯ ಇಡೀ ಹೊಲ ಗದ್ದೆಯೂ ಅವನಿಗೆ ಪರಿಚಿತವಾಗಿತ್ತು. ‘ಬನ್ನಿ ನಮ್ಮ ಹೊಲದಲ್ಲಿ ತುಂಬಾ ಮಾವಿನ ಕಾಯಿಗಳಿವೆ ಕೀಳೋಣ’ ಎನ್ನುತ್ತಾ ಯಾವ ಅಂಜಿಕೆಯೂ ಇಲ್ಲದೇ ಮುಗ್ಧತೆಯಲ್ಲೇ ‘ಇಲ್ಲೇ ಇದೆ ಬನ್ನಿ ಅಣ್ಣ’...! ಎನ್ನುತ್ತಾ ‘ಇಲ್ಲೇ ಇಲ್ಲೇ’... ಎನ್ನುವ ಕೈ ಸನ್ನೆಯೊಂದಿಗೆ ಅರ್ಧ ಕಿ.ಮೀ. ನಡೆಸಿಯೇ ಬಿಟ್ಟ. ಒಂದು ಕಡೆ ಉರಿ ಬಿಸಿಲು, ಇನ್ನೊಂದು ಕಡೆ ಹೊಟ್ಟೆ ಪೂರ್ತಿ ಬಿರಿಯುವಂತಿದ್ದ ಊಟ... ಅವೆರಡು ಮನದಲ್ಲಿ ಸಾಕಪ್ಪ ಸಾಕು ವಾಪಾಸ್ಸು ಹೋಗೋಣ ಎನಿಸುವ ಸುಸ್ತು ಬಡಿಸುತ್ತಿದ್ದರೂ, ಹೊಸ ಉಮೇದಿನಲ್ಲಿ ನೋಡೋಣ ಇಲ್ಲಿನ ಹೊಲ ಗದ್ದೆ ಹೇಗಿರುತ್ತೆ ಎನ್ನುವ  ಕೌತುಕತೆಯಲ್ಲಿ ನಡಿಗೆ  ಮತ್ತೆ ಮುಂದುವರಿಸಿದ್ದೆವು.

ಗೂಳಿ ದಾರಿ ತೋರಿಸುವುದರೊಂದಿಗೆ ಹೊಸ ಹೊಸ ಸಂಧರ್ಭ, ಜಾಗಗಳ ಐತಿಹ್ಯ ಹೇಳುತ್ತಲೇ ಮುಂದೆ ಮುಂದೆ ಸಾಗುತ್ತಿದ್ದ. ಆದರೆ ಮಾವಿನ ಮರ ಮಾತ್ರಾ ನಮಗೆ ಕಾಣುತ್ತಿರಲಿಲ್ಲ..!, ದಾರಿಯೂ ಮುಗಿಯುತ್ತಿರಲಿಲ್ಲ...

  ಮೊದಲೊಂದು ಗದ್ದೆ, ಆಮೇಲೊಂದು ಕೆರೆ...ಹೀಗೆ ಒಂದರಂತೆ ಒಂದು ತೋಟಗಳ ಸರಮಾಲೆಯೇ ನಡಿಗೆ ಮಧ್ಯೆ ಸಿಕ್ಕಿತ್ತು. ಅಲ್ಲಿನ ಕಲ್ಲು ಬಳಕೆಯಲ್ಲಿ ಅರಮನೆ ಗೋಡೆಯಂತೆ ಸಿಂಗಾರಿಸಿಕೊಂಡಿದ್ದ ಕೆರೆಯ ಪಕ್ಕ ಚಲಿಸುವಾಗಂತೂ, ಗೂಳಿ, ‘ಈ ಕೆರೆಗೆ ನಮ್ಮ ತಾತ ಬಿದ್ದು ಸತ್ತಿದ್ದು!’ ಎಂದು ಹೆದರಿಸಿಯೇ ಬಿಟ್ಟಿದ್ದ. ಜೊತೆಗಿರುವರೆಲ್ಲರೂ ಮುಖ ಮುಖ ನೋಡುತ್ತ ಒಂದು ಕ್ಷಣ ಆ ಕೆರಯನ್ನು ಭಯದಿಂದ ವೀಕ್ಷಿಸುತ್ತಾ, ತಾತನಂತೆ ನಾವು ಕೆರೆಯಪಾಲಾಗಬಾರದು!.. ಎಂಬಂತೆ ಜಾಗರೂಕತೆಯಲ್ಲಿ ಕೆರೆದಾಟಿ ಮುಂದೆ ಹೆಜ್ಜೆ ಇಟ್ಟರು. ನನಗೆ ನನ್ನ ತಾತನ ನೆನಪು ಅರೆಕ್ಷಣ ಬಿಡದೇ ಕಾಡಲು ಶುರುವಿಟ್ಟಿತು.

        ‘ತಾತ’ ಎನ್ನುವ ಪದವೇ ಒಂದು ಜಾತ್ರೆ ನನಗೆ. ಅದೊಂದು ಕಥೆಯ ಕಂತೆ ಎಂದರೆ ತಪ್ಪಿಲ್ಲ. ನಾನು ನನ್ನ ತಾತನನ್ನು ಚಿಕ್ಕಂದಿನಲ್ಲೇ ಕಳೆದುಕೊಂಡಿದ್ದೆ!. ನನ್ನ ತಾತ ಸತ್ತಿದ್ದು ಹುಲಿಯೊಂದಿಗೆ ಹೊಡೆದಾಡಿ!.. ಅಂದಿಗೆಲ್ಲಾ ಇಡೀ ಊರಿಗೆ ದಣಿಯಾಗಿದ್ದ ನಮ್ಮ ತಾತ ಒಮ್ಮೆ ಬಾವಿಯೊಳಗೆ ಬಿದ್ದಿರುವ ಹುಲಿಯನ್ನು ಬದುಕಿಸುವ ನಿಟ್ಟಿನಲ್ಲಿ, ಹಗ್ಗ ಹಾಕಿ ಮೇಲಕ್ಕೆತ್ತುವ ಭರದಲ್ಲಿ, ಧೈರ್ಯದ ಸಾಹಸಕ್ಕೆ ಕೈ ಹಾಕೇ ಬಿಟ್ಟಿದ್ದರು... ರಕ್ಷಣಾ ಹಂತ ಮುಗಿದು ಅದು ಇನ್ನೇನೂ ಮೇಲಕ್ಕೆ ಬಂತು ಎನ್ನುವಾಗ ನೋವು ಹಾಗೂ ಕುಪಿತದಿಂದ ನೊಂದಿದ್ದ ಹುಲಿ ಅವರ ಮೇಲೆ ಎಗರಿಯೇ ಬಿಟ್ಟಿತ್ತು. ಕ್ಷಣ ಕಾಲ ಕಾದಾಡಿದ ನಂತರ ಬಂದ ದಾರಿಗೆ ಸುಂಕವಿಲ್ಲಬೆಂಬಂತೆ  ಕಾಡಿನ ಕಡೆ ಓಡಿತ್ತು. ಹೋಗುವ ಮುನ್ನ ತಾತನ ಇಡೀ ಮೈಯನ್ನು ಪರಚಿ ಬದುಕದೇ ಇರುವ ಸ್ಥಿತಿಗೆ ತಂದಿತ್ತು. ಅದೇ ನೋವು, ಅದೇ ನಂಜಿನ ಸೆಳೆತದಿಂದ ನೊಂದು-ಬೆಂದ ತಾತ ಒಂದೆರಡು ವಾರದಲ್ಲೇ ನಮ್ಮೆನ್ನೆಲ್ಲಾ ಅಗಲಿ ದೂರ ಸಾಗಿದ್ದರು. ಇಲ್ಲಿ ಗೂಳಿ, ಅವನ ತಾತನ ಬಗ್ಗೆ ಹೇಳಿದಾಗ ನನ್ನ ತಾತನು ಒಂದರೆಘಳಿಗೆ ಹತ್ತಿರ ಬಂದು ಕಾಡಿದಂತಾಯ್ತು. ಚಿಂಕಂದಿನಲ್ಲಿ ನನಗೆ ಹೇಳುತ್ತಿದ್ದ ಹಸಿಬಿಸಿ ಕತೆಗಳು ನೆನಪಿಗೆ ಬಂದು ಕಣ್ಣಲ್ಲಿ ಕಳೆದುಕೊಂಡ ತಾತನ ಬಗ್ಗೆ ಭಾಷ್ಫ ಉಕ್ಕಿ ಬಂದವು.

     
 ನೋವಿನಲ್ಲಿ, ಸಂಕಷ್ಟದಲ್ಲಿ, ‘ತುಂಬಾ ಸುಸ್ತಾಯಿತು, ನಿನ್ನದು ಅತಿಯಾಯಿತು ಕಂದಾ!, ಇನ್ನಾಗದು ನಡೆಯಲು!.. ಇನ್ನೆಷ್ಟು ದೂರ ಚಲಿಸಬೇಕು ನಾವು!., ಇಲ್ಲೇ ಇಲ್ಲೇ ಎಂದರೆ ನಿನ್ನ ಪ್ರಕಾರ ಎಷ್ಟು ಕಿಲೋ ಮೀಟರ್!?’ ಎನ್ನುತ್ತಾ ರೇಗಾಡಿದೆ. ನನ್ನ ಯಾವ ರೇಗಾಟಕ್ಕೂ ಆ ಬಾಲಕ ತಲೆ ಕೆಡಿಸಿಕೊಳ್ಳದೆ ‘ಇಲ್ಲೇ ಅಣ್ಣ’ ಎನ್ನುತ್ತಾ ಕಾಣದ ಮರಕ್ಕೆ, ಸಾಗುತ್ತಿದ್ದ ನೇರದ ಅಗೋಚರ ತುದಿಗೆ ಕೈ ತೋರಿಸುತ್ತಿದ್ದ...

‘ಆಯ್ತು ನಡಿ... ಬಂದ ತಪ್ಪಿಗೆ ಅನ್ಯ ದಾರಿಯಿಲ್ಲ!’ ಎಂಬಂತೆ ನಡೆದು ನಡೆದು ಬರೋಬ್ಬರಿ 2 ಕಿ.ಮೀ.ಗೂ ಅಧಿಕ ದೂರ ಚಲಿಸಿದಾಗ ಮಾವಿನ ಮರವೊಂದು ಕಾಯಿ ಬಿಟ್ಟಿದ್ದು ಕಣ್ಣಿಗೆ ಗೋಚರಿಸಿತು. ‘ಇದೇ ನಮ್ಮ ಹೊಲದ ಮರ. ಬೇಕಾದಷ್ಟು ಕಿತ್ತುಕೊಳ್ಳಿ’ ಎನ್ನುವಂತೆ ಗೂಳಿ ತಮ್ಮನೆಯ ಮರವನ್ನು ನಮಗರ್ಪಿಸಿ ಸೈಡಲ್ಲಿ ಮುಗ್ಧ ಮಂಪರಲ್ಲಿ ನಿಂತ. ನಮ್ಮ ಜೊತೆ ಬಂದಿದ್ದ ಮನೋಜನೆಂಬ ಹುಡುಗ ಅದೆಷ್ಟು ಕಾಯಿ ತಾಳಿಸಿ ನೆಲಕ್ಕುರುಳಿಸಿದನೋ ನಾನಂತು ಅರಿಯೇ!!. ತಕ್ಷಣ ಬೈದೆ!. ಯಾಕಷ್ಟು ಹಾಳು ಮಾಡುತ್ತೀಯಾ?, ಒಬ್ಬೊಬ್ಬರು ತಿನ್ನೊವಷ್ಟು ಮಾತ್ರಾ ಕಿತ್ತುಕೊಳ್ಳಿ ಹಾಲುಗೆಡವದಿರಿ!, ಎನ್ನುವಂತೆ ಎಲ್ಲರಲ್ಲೂ ಗಿಡದ ವ್ಯಥೆ, ಮಾವಿನ ಕಾಯಿಯ ಉಪಯೋಗ ಇತ್ಯಾದಿಗಳನ್ನೆಲ್ಲಾ ತಿಳಿಸುತ್ತಾ ‘ಹೋಗೋಣ ಬನ್ನಿ’ ಎಂದು ಅಲ್ಲಿಂದ ಎಲ್ಲರೂ ನಡೆಯಲು ಅನುವಾಗಿಸಿದೆ.

ಮರಳಿ ದಾರಿಯಲಿ ಬರುವಾಗ ಅನೇಕ ಯೋಚನಾ ಲಹರಿಗಳು ಮನಸ್ಫಟಲದಲ್ಲಿ ತೆರೆಯಂತೆ ಅಪ್ಪಳಿಸುತ್ತಾ ಗೂಳಿಯ ಮುಗ್ಧತೆ!, ಏನೂ ಅರಿಯದ ಅವನ ಮನದ ಸವಿಭಾವ!, ಎಲ್ಲಾ ಅರಿತ ನಮ್ಮಂತವರ ನಾನು ನನ್ನದು ಎನ್ನುವ ಅಮೌಡ್ಯ ವಿಚಾರ!!, ಇತ್ಯಾದಿಗಳ ಬಗ್ಗೆ ಯೋಚಿಸಿ ಅವನು ಮೂರ್ತಿ ಚಿಕ್ಕದಾದರೂ ಕೀರ್ತಿಯಲ್ಲಿ ನಮ್ಮೆಲ್ಲರಿಗಿಂತ ನಿಜವಾಗಲೂ ದೊಡ್ಡವ ಎಂದುಕೊಂಡು, ಶಭಾಷ್ ಪುಟ್ಟ!!! ಎಂದು ಬೆನ್ನು ತಟ್ಟಿ ಅನೇಕಾನೇಕ ವಿಚಾರಗಳ ಬಗ್ಗೆ ಹೇಳುತ್ತಾ ಕೇಳುತ್ತಾ ದಾರಿ ಸವೆಸಿದೆ.

‘ಸಂತಸದ ಸೊಗಸು ಸದಾ ಮುಗ್ಧ ಮನಸು’ ಎಂಬಂತೆ ಪುಟ್ಟ ಮಕ್ಕಳು ದೇವರಿಗೆ ಸಮಾನ ಅವರ ಮುಗ್ಧತೆಯೇ ಅರಿಯದ ಸೊಗಸಾಗಿರುತ್ತದೆ. ಮಕ್ಕಳಲ್ಲಿ ಬೇಧ-ಬಾವ ಇರುವುದಿಲ್ಲ, ಹುಳುಕು ಕೊಳಕು ಕಾಣುವುದಿಲ್ಲ. ಎಲ್ಲರನ್ನು ಪ್ರೀತಿಸುತ್ತಾ, ಎಲ್ಲವನ್ನು ನಂಬುತ್ತಾ ಕಳೆಯುವ ಗುಣ ಅವರಲ್ಲಿರುತ್ತವೆ. ಕಣ್ಮುಂದೆ ಹಲವಾರು ಅನೇಕಾನೇಕ ವಿಚಾರಗಳು  ದೈನಂದಿನಂತೆ ಗೋಚರಿಸುತ್ತಲೇ ಇದ್ದರೂ, ಆಪ್ತ ಲಹರಿಯ ರೀತಿಯಲ್ಲಿ ಅಂತಃಕರಣಕ್ಕೆ ತೆಗೆದುಕೊಳ್ಕದೆ ಸ್ವಚ್ಚ ಮನದಲ್ಲೇ ಎಲ್ಲವನ್ನು ನಿರಾಕರಿಸುತ್ತಾ,  ಶೂನ್ಯ ಭಾವದಲ್ಲಿ ಸಾಗುತ್ತಾರಲ್ಲ ಅದು ಇಂದು ಎಲ್ಲಾ ಮಾನವನಿಗೂ ಇರಬೇಕಾದ ಬರಬೇಕಾದ ಅಂಶ ಎಂದರೆ ತಪ್ಪಿಲ್ಲ... ಮುಗ್ಧತೆ ದೊಡ್ಡವರಲ್ಲಿದ್ದರೆ ಮಕ್ಕಳನ್ನು ಮಕ್ಕಳಂತೆ ನೋಡಲು ಸಾಧ್ಯ. ಇಂದು ನಾವು ಅನೇಕಾನೇಕ ವಿಚಾರಕ್ಕೆ ದೂರವಾಗುತ್ತೇವೆ, ಸಂಬಂಧ ಕಡಿದುಕೊಳ್ಳುತ್ತೇವೆ, ಹೊಡೆದಾಡುತ್ತೇವೆ, ಬಡಿದಾಡುತ್ತೇವೆ ಆದರೆ ಅಂತಿಮವಾಗಿ ಅರಿಯುವುದಿಷ್ಟೆ!, ‘ಎಲ್ಲವೂ ನಾನು, ನನ್ನದು ಎನ್ನುವ ದುರ್ಬುದ್ಧಿ’ಯಾಗಿರುತ್ತದೆಯೇ ವಿನಃ ಉನ್ನತಿಯ ಹಾದಿಗೆ ಪುಷ್ಠಿದಾಯಕವಾಗಿರುವುದಿಲ್ಲ.

      ಪ್ರವಾಸ, ಊಟ ಹಾಗೂ ಹಬ್ಬದ ಸುತ್ತ ಇದ್ದರೂ, ಅರಿತಿರುವ ವಿಚಾರ, ವಿನಿಮಯ ಬಾಳಿಗೆ ಪ್ರಸಾದಾಯಕವೇ ಆಗಿದೆ ಅನಿಸಿತು. ಟೈಮಾಯಿತು ಹೊರಡೋಣ ಎನ್ನುವ ರಾಗ ಗುಂಪಿಂದ ತೇಲಿ ಬಂತು. ಎಲ್ಲರೂ ಬೆಂಗಳೂರಿಗೆ ಪಯಣಿಸಲು ಕಾರ್ ಹತ್ತಿ ಕುಳಿತರು. ಮನೆಯವರು ಇನ್ನೊಮ್ಮೆ ಬನ್ನಿ, ಆತಿಥ್ಯದಲ್ಲಿ ವ್ಯತ್ಯಾಸವಾದರೆ ಕ್ಷಮೆ ಇರಲಿ ಎಂಬಂತೆ ಧನ್ಯತೆಯಲ್ಲ್ಲಿ ಕೈ ಬಿಸುತ್ತಿದ್ದರು. ಅನ್ನ ಋಣದ ಭಾವದೊಂದಿಗೆ ನನ್ನ ಮನದ ಕಣ್ಣುಗಳು ಹಳ್ಳಿ ಸೊಗಡಿನ ಜೀವನಕ್ಕೆ ಮತ್ತೆ ಕದವ ತೆರೆದು ಕೃತಘ್ನ ನಾ ನಿಮಗೆ ಎನ್ನುತ್ತಿತ್ತು.., ಗೂಳಿ ನಾಮದ ಹುಡುಗನಿಗೆ ಮನದಲ್ಲೇ ವಂದನೆ ಅರ್ಪಿಸಿತ್ತು...

No comments:

Post a Comment