Monday 13 June 2016

ಎದುರು ಮನೆಯ ತಾತ ಸತ್ತೋದರು:..


   
ಇಡೀ ಏರಿಯಾಕ್ಕೆ ಅವರೊಂಥರ ಓಲ್ಡ್...ಸದಾ ಮೌನಿ...ಮೊನ್ನೆ ಸತ್ತೋದರು... ಸರಾಗ ಕನ್ನಡ ಬರದಿದ್ದರೂ ಕರ್ನಾಟಕವೇ ನನ್ನ ಮನೆ ಎಂದು ತಿಳಿದ ತಿಳುವಳಿಕ, ಅಂತಿಮವಾಗಿಯೂ ಇಲ್ಲಿಯೇ ಉಸಿರು ಬಿಟ್ಟು ಹೊರಟು ಹೋದ ಈ ಮಣ್ಣಿನ ಅಭಿಮಾನಿ. 
  
        ಸದಾ ಒಂಟಿಯಾಗಿರುತ್ತಿದ್ದ ಅಜ್ಜನನ್ನು ನಾನು ಸುಮಾರು ದಿನದಿಂದ ನೋಡುತ್ತಲೇ ಇದ್ದೆ. ಒಬ್ಬಳು ಹುಡುಗಿ ಅವರನ್ನು ನೋಡಿಕೊಳ್ಳುತ್ತಿದ್ದಳು. ಬಹುಶಃ ಯಾರೂ ಇಲ್ಲವೇನೋ ಅಂದುಕೊಂಡಿದ್ದೆ. ಒಂದಿನ ವಿಷಯ ತಿಳಿಯಿತು!, ತಾತನಿಗೆ ಇಬ್ಬರು ಮಕ್ಕಳು. ಅವರಿಬ್ಬರು ತಾತನ ಜೊತೆ ಇಲ್ಲ. ಬೆಳೆಸಿ, ಓದಿಸಿ ವಿದೇಶಕ್ಕೆ ತಾತನೇ ಕಳುಹಿಸಿದ್ದರಂತೆ. ಮಕ್ಕಳ ವಾಸ ಯಾವಾಗ ಹೊರದೇಶದಲ್ಲೇ ಫಿಕ್ಸ್ ಆಯ್ತೋ!, ಅಂದಿನಿಂದ ಅವರು ಒಂಥರಾ ತಾತನಿಂದ ಹೊರಗಿದ್ದರು.

ನಾನು ದಿನಾ ಬೆಳಿಗ್ಗೆ ಎದ್ದು ಆಫೀಸ್‍ಗೆ ಹೊರಡೋ ಮುಂಚೆ ಮನೆಯ ಹೊರಗಿನ ಅಂಗಳದಲ್ಲಿ ಕುಳಿತಿರುತ್ತಿದ್ದ ತಾತ ದಿನಾಲೂ ಮುಗುಳ್ನಗೆ ಬೀರುತ್ತಿದ್ದರೇ ವಿನಃ, ಎಂದಿಗೂ ನನ್ನ ಅವರ ನಡುವೆ ಫೇಸ್ ಟು ಫೇಸ್ ಮಾತುಗಾರಿಕೆಯೇ ಆಗಿರಲಿಲ್ಲ.
ನನ್ನದು ಒಂಥರಾ ಮೌನ!.. ಅವರದು ಇನ್ನೊಂದು ಬಗೆಯ ಮೌನ!!. ಮಾತನಾಡಬೇಕು ಅಂದುಕೊಂಡಾಗೆಲ್ಲಾ ಆಫೀಸ್ ಲೇಟಾಗುತ್ತೆ!!, ಎನ್ನುವ ಸಮಯದ ಭಯದಿಂದಲೋ!, ಏನಿರುತ್ತೆ ಮಾತನಾಡಲು ಎನ್ನುವ ಕಾತುರತೆ ಇರದೆಯೋ!, ಮತ್ತೆ ಮಾತಾನಾಡೊಣ ಎನ್ನುವ ಭವಿಷ್ಯದ ಬಂಧದಿಂದಲೋ! ಹಾಗೆ ಬೈಕ್ ಸ್ಟಾರ್ಟ್ ಮಾಡಿ ಅವರೆದುರೇ ದಿನಾಲೂ ಪಯಣಿಸುತ್ತಿದ್ದೆ. ಆದರೆ ಉದ್ದನೆಯ ದಾರಿ ಎಡಕ್ಕೆ ತಿರುಗಿ ನನ್ನ ಬಿಂಬ ಮಾಯವಾಗುªವÀರೆಗೂ ದುರುಗುಟ್ಟಿಕೊಂಡು ಬೆನ್ನನ್ನೇ ನೋಡುತ್ತಿದ್ದ ತಾತ ಎಂದೂ ನನ್ನ ಬೈಕ್ ರೈಡ್ ಬಗ್ಗೆಯಾಗಲಿ, ಟೈಮಿಂಗ್‍ಗಾಗಲಿ, ನಡೆದುಕೊಳ್ಳುತ್ತಿದ್ದ ರೀತಿಗಾಗಲಿ ಎಲ್ಲೂ ಯಾವ ಬೇಸರಿಕೆಯನ್ನೂ ಕಂಡಿರಲಿಲ್ಲ. ಯಾಕೆಂದರೆ ಅವರು ಒಂದಿನವೂ ನನ್ನನ್ನು ಬೇರೊಬ್ಬ ಹುಡುಗ ಎನ್ನುವಂತೆ ನೋಡಿರಲಿಲ್ಲ.

         
   ಅವರೊಂಥರ ಮೌನಿಯಾಗಿದ್ದರು!!. ಉದ್ದ ಮೀಸೆ, ದಪ್ಪ ದೇಹ, ಕಟ್ಟುಮಸ್ತಾದ ತೋಳು ಎಲ್ಲವೂ ಈಗಲೂ ಹಾಗೆ ಮನದ ಗೋಡೆಯಲ್ಲಿ ವ್ಯಕ್ತಿಚಿತ್ರ ಅಚ್ಚೊತ್ತಿದಂತಿದೆ.  ಆದರೆ ಮೊನ್ನೆ ಮೊನ್ನೆ ಇದ್ದ ಅವರೆದುರಾಗುವಿಕೆಯ ಉಪಸ್ಥಿತಿ ಇಂದು ಆ ಅಂಗಳದಲ್ಲಿಲ್ಲ ಅಷ್ಟೆ...

          ಹೊರದೇಶಗಳಲ್ಲಿ ಮಕ್ಕಳಿದ್ದ ಪಕ್ಷಕ್ಕೋ ಅಥವಾ ತನ್ನ ಒಡನಾಟಕ್ಕೆ ಸಾಥ್ ಕೊಡುತ್ತವೇ ಎನ್ನುವ ಆಸೆಗೋ!, ಏನೋ!... ಎರಡು ನಾಯಿಗಳನ್ನು ಮುದ್ದಿನಿಂದ ಸಾಕಿದ್ದರು. ಇದೀಗ ಅವುಗಳು  ಅನಾಥವಾಗಿವೆ. ಇಂದು ನಾ ಪಾರ್ಕಿಂಗ್‍ಗೆ ಬಂದು ಬೈಕ್ ನಿಲ್ಲಿಸುವಾಗ ಅವುಗಳು ಗೊಳೋ ಎಂದು ಅಳುತ್ತಾ ಕೂಗುತ್ತವೆ. ಸಾಂತ್ವಾನ ಹೇಳೋಣ ಅಂದರೆ ಏನೆಂದು ಹೇಳಲಿ... ಬಹುಶಃ ತಾತ ಸತ್ತಿರುವ ವಿಚಾರ ಅವುಗಳಿಗೂ ತಿಳಿಯಿತೋ ಏನೋ...ಎಂದು ಸುಮ್ಮನಾಗುವೆ...ದಿನಾ ಸಂಜೆ ಬೆಳಿಗ್ಗೆ ನನ್ನ ನಾ ಬೈಕ್ ಹತ್ತಿರ ಹೋದಾಗ ಅವು ಮತ್ತೆ ಮತ್ತೆ ಕೂಗುತ್ತಿವೆ. ಬಿಳಿ ಮೈಯ ಟಾಮಿಯಂತೂ ಅಜ್ಜನ ಉಪಸ್ಥಿತಿ ಕಾಣದೆ ಕಂಗೆಟ್ಟಿದಂತಿದೆ!.. 

        ಪಕ್ಕದ ಮನೆಯ ಅಂಕಲ್ ಹೇಳುತ್ತಿದ್ದಾರೆ, ತಾತ ಮೊದಲು ಐದಾರು  ನಾಯಿ, ಹತ್ತಿಪ್ಪತ್ತು ಕೋಳಿಗಳನ್ನು ಸಾಕಿದ್ದರಂತೆ...ಇದೀಗ ಆರೋಗ್ಯ ಸ್ಥಿತಿಯ ಹದಗೆಡುವಿಕೆಯಿಂದಾಗಿ ಅವುಗಳಂಕಿಯನ್ನು ಕಡಿಮೆಗೊಳಿಸಿದ್ದರಂತೆ...ಡೆಹರಾಡೂನ್ ಮೂಲದಿಂದ ಇಲ್ಲಿಗೆ ವಲಸೆ ಬಂದು, ಕನ್ನಡ ಕಲಿತು, ಇಲ್ಲಿಯೇ ಮನೆ ಕಟ್ಟಿ ವಾಸವಾಗಿದ್ದ ಅವರು ಮೊದಲೆಲ್ಲ ದುಡಿದ ಅರ್ಧದಷ್ಟನ್ನು ಪ್ರಾಣಿ ಪಕ್ಷಿಗಳಿಗೆ ಖರ್ಚುಮಾಡುತ್ತಿದ್ದರಂತೆ. ‘ಅವರು ಯಾಕೆ ಸೈಲೆಂಟ್ ಆಗಿ ಇರುತ್ತಿದ್ದರು’!? ಎನ್ನುವ ನನ್ನ ಪ್ರಶ್ನೆಗೆ, ಮದುವೆಯಾಗಿ ಎರಡು ಮಕ್ಕಳು ಹುಟ್ಟಿ, ಸ್ವಲ್ಪ ಸಮಯದಲ್ಲೇ ಹೆಂಡತಿ ಅನಾರೋಗ್ಯದಿಂದ ಸತ್ತಿದ್ದು ತಾತನ ಸೈಲೆಂಟ್ ನೆಸ್‍ಗೆ ಕಾರಣವಿರಬಹುದೆನೋ! ಎನ್ನುತ್ತಿದ್ದಾರೆ ಏರಿಯಾ ಮಂದಿ.
ಮಕ್ಕಳ ಜೀವನವನ್ನು ಚೆನ್ನಾಗಿರುವಂತೆ ನೋಡಿಕೊಂಡಿದ್ದ ತಾತ ಮನಸ್ಸು ಮಾಡಿದ್ದರೆ ಇನ್ನೊಂದು ಮದುವೆಯಾಗಬಹುದಿತ್ತು ಆದರೆ ಮಕ್ಕಳಿಗಾಗಿ ಮದುವೆಯನ್ನೆ ಮಾಡಿಕೊಳ್ಳಲಿಲ್ಲ ಎಂಬುದು ಅವರ ಒಡನಾಡಿಯೊಬ್ಬರ ಮಾತು.

        ಏನಿದ್ದರೂ ಎಲ್ಲವೂ ಉಸಿರಿರೋವರೆಗೆ ಅನ್ನುವ ಮಾತು ನಿಜ ಅನಿಸುತ್ತದೆ. ಮೊನ್ನೆಯವರೆಗೂ ದಿನಾ ಕಾಣುತ್ತಿದ್ದ ತಾತನ ಖುರ್ಚಿ, ಅಂಗಳ ಇಂದು ಅವರಿಲ್ಲದೇ ಖಾಲಿ ಹೊಡೆಯುತ್ತಿದೆ. ನೆನಪು ಗಿರಕಿಯಂತೆ ಬಡಿ ಬಡಿದು ಮನ ನೋಯಿಸುತ್ತಿದೆ.  ಈ ನೋವಲ್ಲಿ ನನ್ನಜ್ಜನು ನೆನಪಾಗುತ್ತಿದ್ದಾರೆ.  

ನಮ್ಮ ವ್ಯಕಿತ್ವಗಳೆಲ್ಲ ರೂಪುಗೊಂಡಿದ್ದು ಅಜ್ಜಂದಿರಿಂದಲೇ. ಅವರ ಅನುಭವ, ಅವರ ಕಥೆಗಳು, ಅವರ ಎದೆಗಾರಿಕೆ ಇತ್ಯಾದಿಗಳೆಲ್ಲವೂ ನಮಗಂದು ವೈವಿಧ್ಯಮಯವಾಗೆÉೀ ಜೀವನ ರೂಪಿಸಿದ್ದವೆಂದರೆ ತಪ್ಪಿಲ್ಲ. ಇವತ್ತು ಎಷ್ಟೇ ಉನ್ನತ ವ್ಯಾಸಂಗ ಮುಗಿಸಿ ಬದುಕು ಕಟ್ಟಿಕೊಂಡಿದ್ದರೂ ನನಗೆ ಸಮಾಜದಲ್ಲಿ ಮಾನವೀಯತೆಯನ್ನು ಕಲಿಸಿಕೊಟ್ಟಿದ್ದು ಅಜ್ಜನ ಕತೆಗಳೇ ಹೊರತು ಇಂದು ನಾವು ಓದುತ್ತಿರುವ ಸ್ಟೋರಿಗಳಲ್ಲ.

     ಶಾಲೆಗಳಲ್ಲಿ ಬೇಸಿಗೆ ರಜೆ ಬಂದರೆ ಅಜ್ಜನ ಮನೆಗೆ ಹೋಗುವುದು, ಅಜ್ಜಿಯಿಂದ ಕೈ ತುತ್ತು ತಿನ್ನಲು ಹವಣಿಸುವುದು, ರಾತ್ರಿಯಾದರೆ ಕಥೆ ಹೇಳಿ ಮಲಗಿಸಿ ಎಂದು ದೊಂಬಾಲು ಬೀಳುವುದೆಲ್ಲ ಇಂದು ಕನಸಷ್ಟೆ. ನನ್ನಜ್ಜ ಕತೆ ಹೇಳುತ್ತಿದ್ದಾಗಂತೂ ನಾನು ಈ ಭೂಮಿ ಮೇಲಿರುವುದನ್ನೆ ಮರೆತು ಕಲ್ಪನಾ ಲೋಕದಲ್ಲಿ ವಿರಹಿಸುತ್ತಿದ್ದೆÉ. ಅಜ್ಜ ಕತೆ ಕಟ್ಟಿ ಹೇಳುವ ರೀತಿಯೇ ಹಾಗಿತ್ತು. ಕತೆಯೊಳಗೆ ತಾವೇ ಪ್ರವೇಶಿಸಿಕೊಂಡು ನಮ್ಮನ್ನು ಅಲ್ಲಿಗೆ ಎಳೆದುಕೊಂಡು ಹೋಗುತ್ತಿದ್ದರು. ಅಷ್ಟೇ ಅಲ್ಲದೇ ಬ್ರಿಟೀಷರ ವಿರುದ್ದದ ಹೋರಾಟದಲ್ಲಿ  ತಾತ ಮತ್ತು ಅವರ ಗೆಳೆಯರು ಸಿಡಿದು ನಿಂತಿದ್ದು, ಚಳ್ಳೆಹಣ್ಣು ತಿನ್ನಿಸಿ ಜೈಲಿಗೆ ಹೋಗುವುದನ್ನು ತಪ್ಪಿಸಿಕೊಂಡಿದ್ದು, ಹೀಗೆ ಹೋರಾಟದ ಬದುಕನ್ನು ಹೇಳುತ್ತಿದ್ದಾಗ ನಮ್ಮ ಕಣ್ಣ ಮುಂದೆಯೇ ಅವೆಲ್ಲ ನಡೆದಂತಿರುತ್ತಿತ್ತು.

          ಬೇಸಿಗೆ ರಜೆಯ ದಿನಗಳಲ್ಲಿ ಅಜ್ಜನ ಬೆನ್ನ ಹಿಂದೆ ತಿರುಗಿ ಕಾಲ ಕಳೆಯುತ್ತಿದ್ದ ನನಗೆ, ಈಗಲೂ ಅವರು ಬಾಳಿ ಬದುಕಿದ್ದ ಮನೆಗೆ ಹೋದೆನೆಂದರೆ ಹಳೆಯ ನೆನಪುಗಳೆಲ್ಲ ಕಾಡದೆ ಇರದು. ಕೆರೆ, ಗದ್ದೆ, ಬೀದಿಯಲ್ಲಿರುವ ದೇವರ ಕಲ್ಲು, ಕಾಡಿಗೆ ಹೋಗುತ್ತಿದ್ದಾಗ ವಿರಾಮ ಪಡೆಯಲು ನಿಲ್ಲುತ್ತಿದ್ದ ಗುತ್ತುಗಳು, ರಾತ್ರ್ರಿ ಬೇಟೆಗೆ ಸಜ್ಜಾಗುತ್ತಿದ್ದಾಗ, ‘ನೀನಿನ್ನು ಚಿಕ್ಕವನು ಇಲ್ಲೇ ಇರು ಬರುವುದು ಬೇಡ ನಾನು ಶಿಕಾರಿ ಮಾಡಿಕೊಂಡು ಬರುವೆ.. ಕಾಯುತ್ತಿರು’... ಎಂದು ಅಜ್ಜಿಯ ತೋಳ ತೆಕ್ಕೆಯಲ್ಲಿ ನನ್ನ ಮಲಗಿಸಿ, ರಾತ್ರಿಯಿಡಿ ಕಾಡಿನಲ್ಲಿ ಪ್ರಾಣಿಗಳಿಗಾಗಿ ಬಲೆ ಬೀಸಿ ಮೊಮ್ಮಗನಿಗೆ ಮಾಂಸದೂಟ ಹಾಕಲು ಓಡಾಡುತ್ತಿದ್ದ ನನ್ನಜ್ಜ ಇಂದಿಗೂ ನನಗೆ ಇತಿಹಾಸ.

     ಪ್ರತಿದಿನ ಸಂಜೆ ‘ವಂದಿಪೆ ನಿನಗೆ ಗಣನಾಥ’ ಎಂದು ಪ್ರಾರಂಭವಾಗುವ ಭಜನೆಯ ಪರಿಪಾಠವನ್ನು ಹೇಳಿಕೊಟ್ಟಿದ್ದ ತಾತ, ಹಳ್ಳಿಯಲ್ಲಿ ಸುದೀರ್ಘ ರಾತ್ರಿಯಿಂದ ಬೆಳಗಿನವರೆಗೆ ನಡೆಯುತ್ತಿದ್ದ ಯಕ್ಷಗಾನ ಬಯಲಾಟಕ್ಕೆ ಕರೆದುಕೊಂಡು ಹೋಗಿದ್ದ ನೆನಪು ಇದೆ ನನಗೆ. ಆಗೆಲ್ಲ ಚಳಿಯಾಗುತ್ತೆ! ಎಂದು ಅವನ ಹೆಗಲ ಮೇಲಿದ್ದ ಟವೆಲ್‍ನ್ನು ನನ್ನ ತಲೆ ಮೇಲೆ ಹೊದೆಸುತ್ತಿದ್ದ ತಾತನ ಬಗ್ಗೆ ಬರೆಯಹೊರಟರೇ ಬರವಣಿಗೆ ಮುಗಿಯೋದಿಲ್ಲ.

         
     ನಮ್ಮ ಸುತ್ತಮುತ್ತಲಿನ ಇತಿಹಾಸ, ಪೌರಾಣಿಕ ಮಹತ್ವವನ್ನು ಯಾವುದೇ ಪಠ್ಯಕ್ರಮಗಳ ಓದಿಲ್ಲದೇ ಅಜ್ಜ ಕತೆಗಳ ಮೂಲಕ ತಿಳಿಯುತ್ತಿದ್ದ ನನಗೆ ಇಂದಿನ ಮಕ್ಕಳಿಗೂ ಅಜ್ಜಂದಿರ ಅಪ್ಪುಗೆ ಬೇಕು ಎನಿಸುತ್ತಿದೆ.

       ಇಂದಿನ ದಿನಗಳಲ್ಲಿ ಅಜ್ಜ ಮೊಮ್ಮಕ್ಕಳ ಗಾಢ ಸಂಬಂಧ ಮೊದಲಿನ ಹಾಗೇ ಕಂಡು ಬರುವುದಿಲ್ಲ. ಇವತ್ತಿನ ಮಕ್ಕಳು ಅಜ್ಜ-ಅಜ್ಜಿಯರ ಜೊತೆ ಬೆರೆಯಲು ತಂದೆ ತಾಯಂದಿರು ಬಿಡುತ್ತಿಲ್ಲ. ಯಂತ್ರದ ರೀತಿ ಬೆಳೆಸುತ್ತಿದ್ದಾರೆ. ಮೊದಲೆಲ್ಲ ಹಿರಿಯರ ಪ್ರಭಾವ ಮಕ್ಕಳ ಬೆಳವಣಿಗೆಗೆ ಪೂರಕವಾಗಿತ್ತು. ಇಂದು ಬೇಸಿಗೆಯ ಶಿಬಿರಗಳಿಗೆ ಮಕ್ಕಳನ್ನು ದೂಡುವ ಪಾಲಕರು ಮಕ್ಕಳನ್ನು ಮನೆಯಲ್ಲೇ ಕ್ರೀಯಾಶೀಲರನ್ನಾಗಿಸುವ ಪ್ರಯತ್ನದಲ್ಲಿ ಸಂಬಂಧಗಳ ಪ್ರೀತಿ ತೋರದೆ ಕೂಡಿ ಹಾಕುತ್ತಿದ್ದಾರೆ. ಮಕ್ಕಳು ಮತ್ತು  ಹಿರಿಯರ ನಡುವೆ ಪಾಲಕರು ತಡೆಗೋಡೆಯಾಗಿರದೆ ಬೆಸೆಯುವ ಕೊಂಡಿಯಾಗಬೇಕು. ಇಂದು ಶಾಲೆ ಮುಗಿಸಿ ಮನೆಗೆ ಬರುವ ಮಕ್ಕಳು ಟ್ಯೂಶನ್, ಟಿ.ವಿ ಇತ್ಯಾದಿಗಳಲ್ಲೇ ಸಮಯ ಹಾಳುಮಾಡುವುದನ್ನು ನಿಲ್ಲಿಸಿ ಹಿರಿಯರ ಜೊತೆ ಬೆರೆತು ಭಾಂಧವ್ಯ ಸವಿಯಬೇಕು ಆಗಲೇ ಮಕ್ಕಳ ವ್ಯಕ್ತಿತ್ವ, ಕಲ್ಫನಾ ಶಕ್ತಿ, ಕ್ರೀಯಾಶೀಲತೆ ಚಿಗುರಲು ಸಾಧ್ಯ.
ಏನೇ ಇರಲಿ...ನನ್ನ ತಾತನು ಇಂದು ನನ್ನ ಬಳಿ ಇಲ್ಲ. ಊರಿಂದ ಉದ್ಯೋಗವರಸಿ ಬೆಂಗಳೂರಿಗೆ ಬಂದ ನಂತರ ಎದುರು ಮನೆಯ ತಾತನೇ ನನ್ನವರಾಗಿ ಮನಸೆಳೆಯುತ್ತಿದ್ದರು. ಆದರೆ ಅವರ ಉಪಸ್ಥಿತಿ ಇಂದಿಲ್ಲ. ದಿನಾ ಬೆಳಿಗ್ಗೆ ಸಿಗುತ್ತಿದ್ದ ಸ್ಮೈಲ್ ಫೇಸ್ ಎದುರಿಲ್ಲ...

        ಇಂದು ಎಲ್ಲವೂ ಖಾಲಿ ಖಾಲಿಯಾಗಿ, ನೆನಪುಗಳು ಮಾತ್ರಾ ಉಳಿದಿದೆ ಜೋಲಿಯಾಗಿ...ಎದುರು ಮನೆಯ ತಾತನನ್ನ ಇಂದು ಮಾತನಾಡಿಸಬೇಕು ಅನ್ನಿಸುತ್ತಿದೆ!.  ಆದರೆ ಅವರೇ ಇಲ್ಲ. ಅವರಿಲ್ಲದ ಆ ಜಾಗ ಮತ್ತೆ ಮತ್ತೆ ಕಣ್ಣನ್ನು ಆಕರ್ಷಿಸಿ, ಹೃದಯ ಕರಗಿಸುತ್ತಿದೆ. ಕರಗುವ ಭಾವ ಕಣ್ಣಂಚಲಿ ನೀರು ತರಿಸುತ್ತಿದೆ...ಮಕ್ಕಳು ತಾತನ ಅಂತ್ಯಕ್ರಿಯೆಯ ನಂತರ ಪರಲೋಕಕ್ಕೆ ವಾಪಾಸಾಗಿದ್ದಾರೆ. ತಾತನನ್ನ ನೋಡಿಕೊಳ್ಳುತ್ತಿದ್ದ ಹುಡುಗಿ ಕೆಲಸವಿಲ್ಲದೆ ನಿರುದ್ಯೋಗಿಯಾಗಿದ್ದಾಳೆ. ಅಂಗಳ ಬೀಕೋ ಎನ್ನುತ್ತಿದೆ...

No comments:

Post a Comment