Wednesday 10 August 2016

ಕವಿ ಕನವರಿಕೆ-ಪ್ರೇಮಾಯಣ #3


ಅವಳು ಅವನ ತೆಕ್ಕೆಗೊರಗಿ ನಿದ್ರಿಸುವವಳಿದ್ದಳು!.. ಆದರೆ ಹಾಗಾಗಲಿಲ್ಲ...
ತೆಕ್ಕೆಯು ರೆಕ್ಕೆಯಂತೆ ಹಾರಿತ್ತು!..
ಅವರದು ಆರು ವರ್ಷದ ಲವ್. ಅವನಿಗೆ ಅವಳ ಮೇಲೆ ಅಘಾದ ಪ್ರೀತಿ. ಅವಳಿಗೂ ಅವನ ಮೇಲೆ ಅನಂತ ಪ್ರೇಮ. ಸಾಗುತಾ ದೂರಾ ದೂರಾ!.. ಎಂಬಂತೆ ಆರು ವರ್ಷಗಳು ಸದಾ ಇಬ್ಬರು
ಒಂದಿಲ್ಲೊಂದರಲ್ಲಿ ಕೈ ಕೈ ಹಿಡಿದು ನಲಿದು ಬಂದವರೇ!..
      ಒಂದು ಭಾಗದಿಂದ ಪ್ರಾರಂಭವಾಗಿ, ಇನ್ನೊಂದು ಭಾಗಕ್ಕೆ ತಾಗಿ, ಇಬ್ಭಾಗ ಒಮ್ಮುಖವಾಗಿ ಸಂಧಿಸಿ, ಪರಸ್ಫರ ಎಲ್ಲವನ್ನು ಹಂಚಿಕೊಂಡು ಮುನ್ನಡೆಗೆ ಅಣಿಯಿಟ್ಟಿದ್ದ ಪ್ರೇಮ ಮಂದಿರದ ತಳಪಾಯ ಇತ್ತೀಚೆಗೆ ಇನ್ನೊಬ್ಬಳು ಮಾಯಾಂಗನೆಯ ಮರ್ಮದಿಂದ ಗುಡಲಿ ಪೆಟ್ಟು ಬಿದ್ದಂತೆ ಕುಸಿಯುತ್ತಿತ್ತು.
     ಮಾಯಾಂಗನೆ ಇವರ ಹಟ್ಟಿಗೆ ಕರೆಯದೇ ಬಂದವಳು. ಮನೆಯೊಳಗೆ ಅನಾಥೆಯೆಂದು ಕರೆ ತಂದ ಮಾವನ ಮಗಳಾಕೆ. ಊರಿಗೆ ಬಂದು!, ನೀರಿಗೂ ಬಂದೂ!, ಬಲೆ ಬೀಸಿ ಹುಡುಗನನ್ನ ಹಿಡಿದ ಚದುರೆಯವಳು.  ಸಲುಗೆ ಸೆಳೆತದಿಂದÀ ಅತ್ತೆ ಮಗನ ಕಾಳಜಿಗೆ ಕರಗಿ ಮನಸು ಮಾರಿಕೊಂಡಿದ್ದಳು. ಇವನ ಇನ್ನೊಂದು ಪ್ರೀತಿಯ ಗುಟ್ಟೇ ಅವಳಿಗರಿವಿರಲಿಲ್ಲ. ಅಂತೂ ಇಂತೂ ಅತ್ತೆಗೂ ತಿಳಿಸಿ ಮದುವೆ ಫಿಕ್ಸ್ ಮಾಡಿಸಿಕೊಂಡೇ ಬಿಟ್ಟಳು.
    ಇತ್ತ ತುಟಿ ಮಿಟುಕಿಸದ ಹುಡುಗ, ತನ್ನ ಒಡಲ ಪ್ರೀತಿಯನ್ನು ಕುಕ್ಕಿ ಕೊಂದಿದ್ದ. ಸಂಸ್ಕøತಿ-ಸಂಸ್ಕಾರಕ್ಕೆ ಜೋತು ಬಿದ್ದು ಪ್ರೀತಿ ತೆಕ್ಕೆಯನ್ನು ದೂರ ಸರಿಸಿದ್ದ. ಅತ್ತ ಇವನನ್ನೇ ನಂಬಿದ್ದ ನೀರೆ ಕಣ್ಣೀರ ಪಾಲು!, ಇತ್ತ ಬೆವತು ಬೆಂಡಾದ ಈತ ಭಯದ ಪಾಲು. ಮನೆಯವರನ್ನು ತೊರೆಯಲಾರದೇ, ಬಯಸಿದ್ದ ಪ್ರೀತಿಯನ್ನು ಹೇಳಲಾರದೆ ಸೋತು ಸುಣ್ಣವಾಗಿದ್ದ. ತ್ಯಾಗಕ್ಕೆ ಪ್ರೀತಿ ದೊಡ್ಡದು, ಪ್ರೀತಿಗೆ ತ್ಯಾಗವೇ ದೊಡ್ಡದು ಎನ್ನುವ ದೊಡ್ಡತನಕ್ಕೆ ಶರಣಾಗಿ ಮೌನವಂತನಾಗಿದ್ದ.
      ಅತ್ತ ಅವಳು ಕಾದು ಸೋತಳು. ಇವಳು ಕರೆದು ಗೆದ್ದಳು. ಇತ್ತ ಪ್ರೀತಿ ಹುಟ್ಟುತ್ತಿದೆ, ಅತ್ತ ಪ್ರೀತಿ ಸಾಯುತ್ತಿದೆ...ನೆತ್ತಿ ನಡುವೆ ಸೂರ್ಯನ ಕಿರಣ ಮೋಡದ ಮರೆಯಲ್ಲಿ ಜಾರಿದೆ. ಗಟ್ಟಿಮೇಳ ಮೊಳಗಿದೆ, ಹುಸಿ ಪ್ರೇಮ ಕಮರಿದೆ...

No comments:

Post a Comment