Wednesday 10 August 2016

ಸಿರಿ ಬುಲೆಟ್...ಜೀವಕ್ಕಿಲ್ಲ ಶ್ರೀರಕ್ಷೆ...ಮಕ್ಕಳಿಗಿಲ್ಲ ಸುರಕ್ಷೆ...ಕುಂದಾಪುರದಲ್ಲಿ ನಡೆದ ಶಾಲಾ ಮಕ್ಕಳ ಅಪಘಾತದ ಸುತ್ತ


ತೂಗುಯ್ಯಾಲೆಯಲ್ಲಿದೆ ವಿದ್ಯಾರ್ಥಿಗಳ ಭವಿಷ್ಯ, ಆಯತಪ್ಪಿದರೆ ಸಾವು ಖಚಿತ...
ಒಂದು ಬಾರಿ ಕೂಗಾಡಿ ಸುಮ್ಮನಿರಲು, ಇದು ಸಣ್ಣ ವಿಷಯವಲ್ಲ...
ಆಟಕ್ಕುಂಟು ಲೆಕ್ಕಕ್ಕಿಲ್ಲ ಶಾಲಾ ಮಕ್ಕಳ ಮಾರ್ಗಸೂಚಿ...
ಸುರಕ್ಷತೆಯ ಪರದಾಟ.., ಮಕ್ಕಳ ಪ್ರಾಣದ ಜೊತೆ ಚೆಲ್ಲಾಟ...
ಜೀವಕ್ಕಿಲ್ಲ ಶ್ರೀರಕ್ಷೆ...ಮಕ್ಕಳಿಗಿಲ್ಲ ಸುರಕ್ಷೆ...

    ಆ ಮಗು ಈಗಷ್ಟೇ ಅರಳುತ್ತಿರುವ ಮೊಗ್ಗು.., ಒಂದಿಷ್ಟು ವರ್ಷದ ಪ್ರೀತಿಯ ಜೋಪಡಿಯಲ್ಲಿ ಬೆಳೆದಿದ್ದ ಪುಟ್ಟಿ ಶಾಲೆಗೂ ಅಪ್ಪ ಅಮ್ಮನ ಪ್ರೀತಿಯಿಂದಲೇ, ದಿನಾ ಚಾಚೂ ತಪ್ಪದೇ ಹೋಗುತ್ತಿದ್ದಳು. ಎಂದಿನಂತೆ ಅಂದೂ ಕೂಡ ಬೇಗನೆ ಎದ್ದು, ತನ್ನೆಲ್ಲಾ ಹೋಮ್ ವರ್ಕ್ ಮಾಡಿಕೊಂಡು, ಟಿಫಿನ್ ಮಾಡುವಷ್ಟೊತ್ತಿಗೆ, ‘ಅಪ್ಪಾ ನಾನು ಮುಂದೆ ಡಾಕ್ಟರ್ ಆಗಬೇಕು, ಚೆನ್ನಾಗಿ ಓದುತ್ತೇನೆ, ನೀನು ಓದಿಸ್ತೀಯಾ ಅಲ್ವಾ!’... ಎನ್ನುತ್ತಾ ನಗುನಗುತ್ತಲೇ ಕೇಳಿದ್ದಳು ಪುಟ್ಟಿ. 
ಅದಾಗಲೇ ಹೊರಗಿಂದ ಶಾಲಾ ವಾಹನವೊಂದರ ಹಾರ್ನ್ ಕೇಳಿ ಬರುತ್ತದೆ. ಗಡಿಬಿಡಿಯಲ್ಲೇ ಬ್ಯಾಗು, ಟಿಫಿನ್ ಬಾಕ್ಸು ಕೈಗೇರಿಸಿಕೊಂಡು ಹೊರನಡೆದ ಪುಟ್ಟಿಗೆ ಅಮ್ಮನ ಕೈ ಬೀಸುವಿಕೆಯ ಟಾಟಾ ಕನಸಿನ ಮೆಟ್ಟಿಲ್ಲನ್ನು ಇನ್ನಷ್ಟು ಪುಷ್ಟಿಸಿತ್ತು. ಆ ವಾಹನದಲ್ಲಿ ಪುಟ್ಟಿಯ ಕನಸಂತೆ ಇನ್ನೂ ಅನೇಕ ಕಂದಮ್ಮಗಳಿಗೆ ಕನಸ ಕಂತೆಯ ಜೋಪಡಿಯಿತ್ತು... 
ಮಗುವನ್ನು ಶಾಲೆಗೆ ಕಳಿಸಿರುವೆ ಯಾವ ಭಯವಿಲ್ಲ...ಸಂಜೆ ಬರುವಷ್ಟರ ಹೊತ್ತಿಗೆ ಅವಳಿಗಿಷ್ಟವಾದ ತಿಂಡಿಯನ್ನು ಮಾಡಿಡೋಣ ಎಂದುಕೊಳ್ಳುತ್ತಿದ್ದ ತಾಯಿಗೆ ಅಚಾನಕ್ ಆಗಿ ಬಂದ ಫೋನ್ ಕರೆ ತಲೆತಿರುಗಿ ಬೀಳುವಂತೆ ಮಾಡುತ್ತದೆ... ಅಪ್ಪನನ್ನು ಮುಂದೇನೂ ಎಂದು ತೋಚದ ಭಯಾನಕ ಕೂಪಕ್ಕೆ ಬೀಳಿಸುತ್ತದೆ. ಕಾರಣ ಮಗಳಿದ್ದ ‘ಶಾಲಾ ವಾಹನ ಪಲ್ಟಿ, ಸ್ಥಳದಲ್ಲೇ ಮಕ್ಕಳ ಸಾವು’...
ಚಿಗುರಬೇಕಿದ್ದ ಕನಸುಗಳು ಕರಟೋಯಿತು, ಕಟ್ಟಿದ್ದ ಆಸೆಯ ಮೆಟ್ಟಿಲು ಕುಸಿದೋಯಿತು, ವರ್ಷಾನುವರ್ಷ ಅದೆಷ್ಟೋ ನೋವು, ಕಷ್ಟ, ನಷ್ಟವನ್ನು ಹೊಟ್ಟೆಯಲ್ಲಿ ಕಟ್ಟಿಕೊಂಡು ಬೆಳೆಸಿದ್ದ ಮನೆ ದೀಪ ಬೆಳಗುವ ಮುನ್ನವೇ ಆರೋಯಿತು... ಇದು ಒಂದು ಮನೆಯ ಮಗಳನ್ನು ಕಳೆದುಕೊಂಡ ವಿದ್ರಾವಕ ಕಥೆಯಾದರೆ, ಇದಕ್ಕಿಂತ ಭಿನ್ನವಾದ ಅದೆಷ್ಟು ನೋವಿನ ಮಡಿಲುಗಳು ನಮ್ಮ ನಿಮ್ಮ ಮಧ್ಯೆ ಇದೆಯೋ ಹೇಳತೀರದು... ಅಬ್ಬಾ! ಆ ಆಕ್ರಂಧನ ನೋಡೋದಲ್ಲ, ದೂರಿಂದ ಕೇಳಿದರೇನೆ ಭಯ ಹುಟ್ಟಿಸುತ್ತೆ...
ವರ್ಷಗಳ ಹಿಂದೆ ಕಾಲ್ನಡಿಗೆಯಲ್ಲಿ ಶಾಲೆಗಳಿಗೆ ಹೋಗುತ್ತಿದ್ದ ಮಕ್ಕಳು ಸುರಕ್ಷರಾಗಿದ್ದರು. ಆದರೆ ಇಂದು ಯಾವುದನ್ನು ಸುರಕ್ಷವೆಂದು ವಾಹನ ಹತ್ತಿಸಿ ಕಳಿಸುತ್ತೇವೋ ಅದೇ ಅಸುರಕ್ಷಿತವಾಗಿದೆ.
ನಿಮಗೆಲ್ಲಾ ಗೊತ್ತಿರಬಹುದು ಇತ್ತೀಚೆಗೆ  ಕುಂದಾಪುರ ತಾಲೋಕಿನ ತ್ರಾಸಿ ಎಂಬಲ್ಲಿ ನಡೆದ ಶಾಲಾ ಓಮಿನಿ ಹಾಗೂ ಖಾಸಗಿ ಬಸ್ ಒಂದರ ಡಿಕ್ಕಿ 8 ಮಕ್ಕಳನ್ನು ದಾರುಣವಾಗಿ ಬಲಿ ಪಡೆದದ್ದು  ಎಲ್ಲರ ಹೃದಯ ಕರಗಿಸಿತ್ತು. ಮುದ್ದು ಕಂದಮ್ಮಗಳ ಸಾವು ಇಡೀ ರಾಜ್ಯವನ್ನೇ ಶೋಕತೆಯಲ್ಲಿ ಮುಳುಗಿಸಿತ್ತು. ಇದೊಂದೆ ದುರ್ಘಟನೆ ಅಲ್ಲ. ಅದಾದ ಮೇಲೆ, ಬೆಂಗಳೂರಿನಲ್ಲೊಂದು, ಹೊಳೆ ಹೊನ್ನೂರು ಪಟ್ಟಣದ ಹನುಮಂತಪುರದಲ್ಲೊಂದು ಹೀಗೆ ಒಂದು ಮಾಸುವ ಮುನ್ನವೇ ಮತ್ತೊಂದು ಅನಾಹುತಗಳು ಸಂಭವಿಸುತ್ತಲೇ ಇದೆ. ಇವೆಲ್ಲ ಅನಾಹುತಗಳನ್ನು ನೋಡುತ್ತಿರುವ  ಮನೆಯವರಿಗೆ ಇದೀಗ ಮಕ್ಕಳನ್ನು ಶಾಲೆಗೆ ಕಳಿಸುವುದೆಂದರೆ, ಜೀವ ಕೈಯಲ್ಲಿ ಹಿಡಿದು ದಿನದೂಡಿದಂತೆ ಎನ್ನುವ ಪರಿಸ್ಥಿತಿ ಬಂದಿದೆ.
ಒಂದಿಷ್ಟು ದಿನ ಎಲ್ಲಾ ಪತ್ರಿಕೆಗಳು, ವಾಹಿನಿಗಳು, ಸೋಷಿಯಲ್ ಮೀಡಿಯಾಗಳು ಅವೆರ್‍ನೆಸ್,.. ಎಂಬಂತೆ ವರದಿಗಳನ್ನು, ಡಿಬೆಟ್‍ಗಳನ್ನು, ಮೆಸೇಜ್‍ಗಳನ್ನು,  ಅನಿಯಮಿತವಾಗಿ ಪ್ರಸರಿಸಿದವು... ಆದರೆ ಯಾವುದು ಬದಲಾಗಿಲ್ಲ... ವಾಹನಗಳಿಗೆ ಮಕ್ಕಳ ತುಂಬುವಿಕೆ ಇಳಿದಿಲ್ಲ.
 ಕುಂದಾಪುರದಲ್ಲಿ ನಡೆದ ಅಪಘಾತದಲ್ಲಿ ಓಮಿನಿಯೊಳಗೆ 18 ಮಕ್ಕಳಿದ್ದರಂತೆ!. ಇದು ಸುರಕ್ಷವಲ್ಲ ಎಂದು ಎಲ್ಲರಿಗೂ ಅರವಿದ್ದರೂ ಮತ್ತೆ ಮತ್ತೆ ಅದೇ ತಪ್ಪನ್ನು ದಿನನಿತ್ಯ ಮಾಡುತ್ತಲೇ ಇದ್ದೇವೆ. ಅಂತಹ ಭಯಾನಕ ಸನ್ನಿವೇಶ ನಡೆದ ಮೇಲೂ ನಮ್ಮ ಕಣ್ಣೆದುರೇ ಇಂದಿಗೂ ಅದೆಷ್ಟೋ ಶಾಲಾ ವಾಹನಗಳು ಮಕ್ಕಳನ್ನು ತುಂಬಿಕೊಂಡು ಹೋಗುತ್ತಿದ್ದರೂ ಯಾರೂ ಮಾತನಾಡುತ್ತಿಲ್ಲ. ಇದು ಯಾರ ದುರ್ದೈವವೋ ಯಾರಿಗೂ ತಿಳಿದಿಲ್ಲ... 
ಕಾಯ್ದೆ ಕಾನೂನುಗಳ ತಡಕಾಡಿದಾಗ!!;
ಶಾಲಾ ಮಕ್ಕಳ ಸುರಕ್ಷತೆ ಕುರಿತು ರಾಜ್ಯ ಸರಕಾರ ಸಾಕಷ್ಟು ಹಿಂದೆಯೇ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದ್ದರೂ, ಅವುಗಳನ್ನು ಪಾಲಿಸುವಲ್ಲಿ ಶಾಲೆಗಳು ಮತ್ತು ವಾಹನಗಳ ಚಾಲಕರು ತೀವ್ರ ನಿರ್ಲಕ್ಷ್ಯ ವಹಿಸಿದ್ದಾರೆ.
ಕಾನ್ವೆಂಟ್ ಸಂಸ್ಕøತಿಯಿಂದಾಗಿ ಹೊಸ ಟ್ರೆಂಡ್ ಎಂಬಂತೆ ಯಾವೊಂದು ಮಕ್ಕಳನ್ನು ಇಂದು ನಡೆದುಕೊಂಡು ಹೋಗಲು ಬಿಡದೆ ಅಟೋದಲ್ಲಿ ಓಮ್ನಿಯಲ್ಲಿ, ಮಿನಿವ್ಯಾನ್‍ಗಳಲ್ಲೇ ಹೆತ್ತವರು ತಿಂಗಳ ಬಾಡಿಗೆ ಕೊಟ್ಟು ಕಳಿಸುತ್ತಿದ್ದಾರೆ. ಬಹುತೇಕ ಭಾಗಗಳಲ್ಲಿ ಮಕ್ಕಳನ್ನು ಯರ್ರಾ ಬಿರ್ರಿ ತುಂಬುವುದು ಮಾಮೂಲಾಗಿದೆ. ಇದು ಅನಿಯಮವಾದರೂ ಹೆಚ್ಚು ಲಾಭಾಂಶ ಪಡೆಯುವ ದೃಷ್ಟಿಯಿಂದ ಖಾಸಗಿ ವಾಹನ ಮಾಲೀಕರು ವಾಹನದ ಗುಣಮಟ್ಟ ಹಾಗೂ ಆಸನಗಳ ಸಾಮಥ್ರ್ಯ ಗಮನಿಸಿದೆ ದುಡ್ಡು ಮಾಡುತ್ತಿದ್ದಾರೆ ಎಂಬುದು ಒಂದೇ ನೋಟಕ್ಕೆ ಅರಿಯುವ ವಿಷಯವಾಗಿದೆ. ನಾ ಕಂಡಂತೆ ಬಹುತೇಕ ಭಾಗಗಳಲ್ಲಿ ಬ್ಯಾಗಗಳನ್ನು ಹೊರಕ್ಕೆ ನೇತಾಕಿ ಮಕ್ಕಳನ್ನು ಕುರಿಗಳಂತೆ ಒಳಗೆ ತುಂಬಿ, ಮಿತಿಮೀರಿದ ವೇಗದಲ್ಲಿ ಚಲಿಸುತ್ತಿರುವ ಶಾಲಾ ವಾಹನವಗಿ ಮಾರ್ಪಾಟಾಗಿರುವ ಆಟೋರಿಕ್ಷಾ, ಓಮಿನಿ, ಇತ್ಯಾದಿಗಳನ್ನು ನೋಡಿದರೆ ಎದೆ ಝಲ್ ಎನ್ನುತ್ತದೆ.
ನಿಯಮಗಳ ಪ್ರಕಾರ, ಶಾಲಾಮಕ್ಕಳನ್ನು ಕೊಂಡೊಯ್ಯುವ ವಾಹನದ ಆಸನಗಳ ಸಾಮಥ್ರ್ಯ 12 ಪ್ಲಸ್ 1 ಮೀರದಂತೆ ಇರಬೇಕು. ಇಷ್ಟಲ್ಲದೇ ನಿಗದಿತ ಆಸನ ಸಾಮಥ್ರ್ಯ ಹೆಚ್ಚಿಸುವಂತೆಯೂ ಇಲ್ಲ. ಆದರೆ, ಸಾರಿಗೆ ನಿಯಮಗಳನ್ನು ಗಾಳಿಗೆ ತೂರುತ್ತಿರುವ  ಖಾಸಗಿ ವಾಹನಗಳು ಮನಸೋ ಇಚ್ಚೆ ಮಕ್ಕಳನ್ನು ತುಂಬುವುದು ಸಾಮಾನ್ಯವಾಗಿದೆ. ಮೋಟಾರು ವಾಹನ 1988ರ ಕಲಂ 74ರ ಪ್ರಕಾರ, ‘ಒಪ್ಪಂದ ವಾಹನ ಕಡ್ಡಾಯವಾಗಿ ರಹದಾರಿ ಹೊಂದಿರಬೇಕು. ಅಲ್ಲದೇ, ಅನುಮೋದಿತ ಸ್ಫೀಡ್ ಗೌರ್ನರ್ ಅಳವಡಿಸಿಕೊಳ್ಳುವ ಮೂಲಕ ವೇಗಮಿತಿ ಗಂಟೆಗೆ 40 ಕಿ.ಮೀ ಮೀರಬಾರದು. ವಾಹನಗಳ ನೊಂದಣಿ 15 ವರ್ಷ ಹಳೆಯದಾಗಿರಬಾರದು. ವಾಹನಗಳಲ್ಲಿ ಕರೆದೊಯ್ಯುವ ಮಕ್ಕಳ ಹೆಸರು, ತರಗತಿ, ಮನೆವಿಳಾಸ, ದೂರವಾಣಿ ಸಂಖ್ಯೆ, ರಕ್ತದ ಗುಂಪು, ಮಾರ್ಗದ ವಿವರ ಪಟ್ಟಿಯನ್ನು ವಾಹನದಲ್ಲಿ ಅಳವಡಿಸಬೇಕು’ ದುರದೃಷ್ಟವೆಂದರೆ, ಬಹುತೇಕ ವಾಹನಗಳಲ್ಲಿ ಈ ನಿಯಮಗಳನ್ನು ಇಂದಿಗೂ ಪಾಲಿಸುತ್ತಿಲ್ಲ.
    ಇಂತಹ ದುರಂತಗಳು ನಡೆದಾಗಲೆಲ್ಲ ವ್ಯವಸ್ಥೆಯ ಲೋಪಗಳು ಕಣ್ಣಿಗೆ ರಾಚುತ್ತವೆ, ಅದನ್ನು ಸರಿಪಡಿಸುವ ಕೂಗು ಮೊಳಗುತ್ತದೆ, ಆರ್.ಟಿ.ಓ ಮಾರ್ಗ ಸೂಚಿಗಳನ್ನು ಪ್ರಕಟಿಸುತ್ತದೆ, ಸಂಚಾರಿ ಪೊಲೀಸರು ಚುರುಕಾಗುತ್ತಾರೆ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವ ದೊಡ್ಡ ಗಂಟಲಿನ ಭರವಸೆ ಸಿಗುತ್ತದೆ. ಆದರೆ ಇವೆಲ್ಲವೂ ಒಂದೆರಡು ವಾರಗಳು ಅಷ್ಟೆ!!. ಆನಂತರ ನೀತಿ ನಿಯಮಗಳನ್ನು ಗಾಳಿಗೆ ತೂರುವ ಅರಾಜಕ ಸ್ಥಿತಿ ರಾಜ್ಯಭಾರ ಮಾಡತೊಡಗುತ್ತದೆ. ಕಾನೂನುಗಳು ಇರುವುದೇ ಮುರಿಯುವುದಕ್ಕೆ ಎನ್ನುವ ಮನೋಭಾವ ಬಹುತೇಕರಲ್ಲಿ ರಕ್ತಗತವಾಗಿ ಬಿಟ್ಟಿದೆ. ಇಂಥ ದುರಂತಗಳು ನಡೆದಾಗ ಮಾತ್ರಾ ಅಯ್ಯೋ ಎನ್ನುವ ಉದ್ಗಾರ ಮತ್ತು ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎನ್ನುವ ಪ್ರಜ್ಞೆ ಮೂಡುತ್ತದೆ. ಆದರೆ ಇವ್ಯಾವುದು ಅಚಲವಾಗಿ ಬೇರೂರುವುದಿಲ್ಲ.
ಸಂಚಾರ ಪೊಲೀಸರು ಹಾಗೂ ಆರ್.ಟಿ.ಒ ಅಧಿಕಾರಿಗಳು ಕೊಂಚ ಎಚ್ಚರ ವಹಿಸಿದರೆ ಇಂತಹ ದುರಂತಗಳನ್ನು ಸುಲಭವಾಗಿ ನಿವಾರಿಸಬಹುದು. ಕಾಯಿದೆ ಕಾನೂನಿನ ಪಾಲನೆಗಾಗಿ ಮಾಡುವ ಪ್ರತಿನಿತ್ಯದ ಕರ್ತವ್ಯ ನೂರಾರು ಜನರನ್ನು ಬದುಕಿಸುತ್ತದೆ ಎನ್ನುವ ಅರಿವೇ ಈ ಮಂದಿಗಿಲ್ಲ. ಜಾಗರೂಕತೆಯಿಂದ ವಾಹನಗಳನ್ನು ಚಲಾಯಿಸುವುದರಿಂದ ವೈಯಕ್ತಿಕ ಸುರಕ್ಷತೆಯ ಖಾತ್ರಿ ಜೊತೆಗೆ  ಇನ್ನೊಬ್ಬರ ಜೀವವನ್ನು ಉಳಿಸುತ್ತೇವೆ ಎನ್ನುವ ಭಾವನೆ ಚಾಲಕರಿಗೂ ಇಲ್ಲ.
ಶಾಲಾ ವಾಹನಗಳ ಸುರಕ್ಷತೆ ಕುರಿತು ಎರಡು ವರ್ಷಗಳ ಹಿಂದೆ ಸುಪ್ರಿಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿತ್ತು. ‘ಮುಗ್ಧ ಮಕ್ಕಳನ್ನು ದನ-ಕರುಗಳಂತೆ ತುಂಬಿಸಿ ಸಾಗಿಸುವುದು ಅಮಾನವೀಯ. ಗ್ಯಾಸ್ ಸಿಲಿಂಡರ್‍ಗಳ ಮೇಲೆ ಮಕ್ಕಳನ್ನು ಕೂರಿಸುವುದು ಬಾಂಬ್‍ಗಳ ಮೇಲೆ ಕೂರಿಸಿದಂತೆ’ ಎಂದು ತರಾಟೆಗೆ ತೆಗೆದುಕೊಂಡಿತ್ತು. ಕೆಲವೊಂದು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಎಲ್ಲಾ ರಾಜ್ಯಗಳಿಗೂ ಅದೇಶಿಸಿತ್ತು. ಕರ್ನಾಟಕ ಹೈಕೋರ್ಟ್ ಕೂಡ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪೋಲೀಸ್ ಇಲಾಖೆಗೆ ನೊಟೀಸ್ ಜಾರಿ ಮಾಡಿತ್ತು. ಇದರ ಪರಿಣಾಮವಾಗಿ ಶಾಲಾ ವಾಹನಗಳ  ಸುರಕ್ಷತಾ ಮಾರ್ಗ ಸೂಚಿಯನ್ನು ಜಾರಿಗೊಳಿಸಲಾಯಿತು. ಆದರೆ ಅಧಿಕಾರದ ಕೇಂದ್ರ ಬೆಂಗಳೂರಲ್ಲಿ ಇರುವ ಕಾರಣ ಇದರ ಬಗ್ಗೆ ಬೆಂಗಳೂರು ಪೊಲೀಸರು ಒಂದಿಷ್ಟು ಜಾಗರೂಕರಾಗಿರುವುದನ್ನು ಹೊರತು ಪಡಿಸಿದರೆ ರಾಜಧಾನಿಯಿಂದಾಚೆಗೆ ಮಾರ್ಗ ಸೂಚಿಗಳು ಯಾವಾಗಲೂ ದಿಕ್ಕು ತಪ್ಪಿದ ಸ್ಥಿತಿಯಲ್ಲೇ ಇವೆ.

ಏನ್ಮಾಡಬಹುದು!?:
ಕಾಯ್ದೆಗಳು ಏನನ್ನೇ ಸಾರಲಿ. ಮಕ್ಕಳ ಸುರಕ್ಷತೆ ಎನ್ನುವುದು ಶಾಲೆ ಮತ್ತು ಮಕ್ಕಳ ಪೋಷಕರ ಜವಾಬ್ಧಾರಿಯಾಗಿರುತ್ತದೆ. ಕೆಲ ಪೋಷಕರು ವಾಹನಗಳನ್ನು ಪರೀಕ್ಷೆ ಮಾಡದೆಯೇ ಮಕ್ಕಳನ್ನು ಕಳಿಸುತ್ತಾರೆ. ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಆಟೋ, ಓಮಿನಿಗಳಂತಹ ವಾಹನಗಳನ್ನು ಪೋಷಕರು ವಿರೋಧಿಸಬೇಕು. ಪೋಷಕರು ವಿರೋಧಿಸಿದರೆ ಇಂತಹ ವಾಹನಗಳನ್ನು ಶಾಲೆಗಳು ನಿಯೋಜಿಸುವುದಿಲ್ಲ.
ಮಕ್ಕಳ ಸುರಕ್ಷತೆಗೆ ಒತ್ತು ನೀಡುವುದು  ಆಡಳಿತ ಮಂಡಳಿಗಳ ನೈತಿಕ ಹೊಣೆ. ಆದರೆ, ಇದರಿಂದ ನುಣುಚಿಕೊಳ್ಳುವ ಶಾಲೆಗಳು, ಮಕ್ಕಳನ್ನು ಶಾಲೆಗೆ ಕರೆತಂದು, ಮನೆಗೆ ಬಿಡುವ ಕೆಲಸವನ್ನು ಖಾಸಗಿ ವಾಹನಗಳಿಗೆ ವಹಿಸಿವೆ. ಇದರಿಂದ ಮಕ್ಕಳ ಸುರಕ್ಷತೆಯ ಪ್ರಶ್ನೆಗೆ ಉತ್ತರವೇ ದೊರಕುತ್ತಿಲ್ಲ. ಇದನ್ನು ಮೊದಲು ನಿಲ್ಲಿಸಬೇಕು.
ಈ ಬಗ್ಗೆ ಕಳೆದ ಒಂದು ವರ್ಷದಲ್ಲಿ ಅಧಿಕಾರಿಗಳು ಜಪ್ತಿಗಿಳಿದಾಗ 61 ವಾಹನಗಳು ದೊರಕಿದರೂ ವ್ಯವಸ್ಥೆ ಸುಧಾರಿಸಿಲ್ಲ. ಹೆಚ್ಚಾಗಿ ನಗರವ್ಯಾಪ್ತಿಯೊಳಗೆ ಮಾತ್ರಾ ನಡೆಯುತ್ತಿರುವ ಈ ಕಾರ್ಯಾಚರಣೆ ರಾಜ್ಯದ ಮೂಲೆ ಮೂಲೆಯಲ್ಲೂ ನಡೆಯಬೇಕಾದ ಅವಶ್ಯಕತೆ ಇದೆ.
ಇನ್ನಾದರೂ ಎಚ್ಚೆತ್ತುಕೊಳ್ಳಿ;
ಲಾಭದಾಸೆಯಿಂದ ಸ್ಕೂಲು ಕಾಲೇಜುಗಳು  ಸುರಕ್ಷತೆಯ ಬಗ್ಗೆ ಗಮನ ಹರಿಸುತ್ತಿಲ್ಲ. ಎಲ್ಲವನ್ನು ಗಾಳಿಗೆ ತೂರಿ ಮುಗ್ಧ ಮಕ್ಕಳ  ಜೀವದ ಜೊತೆ ಚೆಲ್ಲಾಟವಾಡುವ ಈ ಕ್ರೂರ ವ್ಯವಸ್ಥೆಯನ್ನು ಸುಧಾರಿಸುವುದಕ್ಕೆ ಎಲ್ಲರೂ ಕೈ ಜೋಡಿಸಬೇಕು. ಕಷ್ಟವಾದರೂ ಸರಿ ರಸ್ತೆ ಸುರಕ್ಷತಾ ನಿಯಮಗಳನ್ನು ಎಲ್ಲರೂ ಕಟ್ಟು ನಿಟ್ಟಾಗಿ ಸದಾ ಪಾಲಿಸಬೇಕು. ಸತ್ತ ಮಕ್ಕಳ ನೋಟ, ಅವರ ಪಾಲಕರ ಕಣ್ಣೀರು ಅಧಿಕಾರಿಗಳು ಮತ್ತು ಸಾರ್ವಜನಿಕರ ಆತ್ಮಸಾಕ್ಷಿಗೆ ಮಾರ್ಗದರ್ಶನವಾಗಬೇಕು.
ಒಮ್ಮೆ ಅಲೆ ಅಪ್ಪಳಿಸಿದಂತೆ ಕೂಗಾಡಿ-ರೇಗಾಡಿ ಸುಮ್ಮನಾಗಬಾರದು. ಅಲೆ ಪದೇ ಪದೇ ನಿಧಾನವಾದರೂ ದಡಮುಟ್ಟುವ ಕಾಯಕ ಮಾಡುತ್ತಲೇ ಇರುತ್ತದೆ ಅದರಂತೆ ನಾವುಗಳು ಈ ಅವ್ಯವಸ್ಥೆ ಸರಿಯಾಗುವವರೆಗೂ ಹೋರಾಟವನ್ನು ನಡೆಸುತ್ತಲೇ ಇರಬೇಕು.

ಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ವಹಿಸಬೇಕಾದ ಎಚ್ಚರಿಕಾ ಕ್ರಮಗಳ ಬಗ್ಗೆ ಇಲಾಖಾ ವತಿಯಿಂದ ಪದೇ ಪದೆ ಸೂಚಿಸಲಾಗುತ್ತಿದೆ. ಈ  ನಿಯಮಗಳನ್ನು ಶಾಲಾ ಆಡಳಿತ ಮಂಡಳಿಗಳು ಮತ್ತು ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ವಾಹನ ಮಾಲೀಕರು ಕಟ್ಟು ನಿಟ್ಟಾಗಿ ಪಾಲಿಸಬೇಕು. ನಿಯಮ ಮೀರಿದರೆ ಕಾನೂನು ಕ್ರಮ ಅನಿವಾರ್ಯ.


- ಎನ್.ಎಸ್. ಮೇಘರಿಖ್
ನಗರ ಪೋಲೀಸ್ ಕಮಿಷನರ್






ಸುಪ್ರೀಂ ಕೋರ್ಟ್ ಮತ್ತು ಶಿಕ್ಷಣ ಇಲಾಖೆ ಹೊರಡಿಸಿದ ಸುರಕ್ಷತಾ ಕ್ರಮಗಳೇನು ಗೊತ್ತಾ!?
ಶಾಲಾ ವಾಹನಗಳ ಮೇಲೆ ಶಾಲೆಯ ಹೆಸರು ಮತ್ತು ದೂರವಾಣಿ ಸಂಖ್ಯೆ ಬರೆದಿರಬೇಕು.
ಶಾಲಾ ವಾಹನಗಳ ಕಿಟಕಿಗಳಿಗೆ ಗ್ರಿಲ್‍ಗಳನ್ನು ಅಳವಡಿಸಿರಬೇಕು.
ವಾಹನಗಳಲ್ಲಿ ಪ್ರಾಥಮಿಕ ಚಿಕಿತ್ಸೆಯ ಕಿಟ್‍ಬ್ಯಾಗ್ ಇಟ್ಟಿರಬೇಕು.
ಅಗ್ನಿ ಅವಘಡ ತಪ್ಪಿಸುವ ಸಲಕರಣೆ ಶಾಲಾ ವಾಹನಗಳಲ್ಲಿ ಇರಬೇಕು.
ಸಿಲಿಂಡರ್‍ಗಳನ್ನು ಶಾಲಾ ವಾಹನಗಳಿಗೆ ಅಳವಡಿಸಿದ್ದರೆ ಸಂಬಂಧಪಟ್ಟ ಅಗ್ನಿ ಶಾಮಕ ಇಲಾಖೆಯಿಂದ ಪರವಾನಗಿ ಪಡೆದಿರಬೇಕು.
ಎಲ್‍ಪಿಜಿ ಅಳವಡಿಸಿರುವ ಜಾಗದಲ್ಲಿ ಸೀಟುಗಳನ್ನು ಅಳವಡಿಸಿರಬಾರದು.
ವೇಗ ನಿಯಂತ್ರಕಗಳನ್ನು ಅಳವಡಿಸಿರಬೇಕು, 40 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ಓಡಿಸಬಾರದು.
ಪ್ರತಿ ಶಾಲಾ ವಾಹನಗಳಲ್ಲೂ ಮಹಿಳಾ ಅಟೆಂಡರ್, ವಾಹನಗಳಲ್ಲಿ ಸಿಸಿಟಿವಿ ಮತ್ತು ಜಿಪಿಎಸ್ ನಿರ್ವಹಣೆ ಇರಬೇಕು.
12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕರೆದೊಯ್ಯುವ ವಾಹನಗಳಲ್ಲಿ ಒಟ್ಟು ಸೀಟು ಸಾಮಥ್ರ್ಯಕ್ಕಿಂತ ಶೇ.50ರಷ್ಟು ಮಕ್ಕಳನ್ನು ಮಾತ್ರಾ ಹೆಚ್ಚಿಗೆ ಕೂರಿಸಬಹುದು.
ಬ್ಯಾಗ್‍ಗಳನ್ನು ಶಾಲಾ ವಾಹನದ ಹೊರಗೆ ನೇತು ಹಾಕದೆ ವಾಹನದಲ್ಲೇ ಪ್ರತ್ಯೇಕ ವ್ಯವಸ್ಥೆ ಕಲ್ಪಸಿರಬೇಕು.
ಶಾಲಾ ವಾಹನ ಚಾಲಕರ ಪೂರ್ವಾಪರ ಇತಿಹಾಸವನ್ನು ಪೊಲೀಸ್ ಇಲಾಖೆ ಮೂಲಕ ಪರಿಶೀಲಿಸಬೇಕು.
ಚಾಲನಾ ಪರವಾನಗಿ ಪಡೆದು ಕನಿಷ್ಠ 5 ವರ್ಷ ಚಾಲನಾ ಅನುಭವ ಹೊಂದಿದವರಾಗಿರಬೇಕು.
ವಾಹನ ಚಾಲಕರು ಶಾಲಾ ಆವರಣಕ್ಕೆ ಅನಗತ್ಯವಾಗಿ ಪ್ರವೇಶಿಸುವುದು, ಮಕ್ಕಳ ಜತೆ ಸಲುಗೆ ಬೆಳೆಸಿಕೊಳ್ಳುವುದನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು.
ಬಸ್ಸಿನ ಮೆಟ್ಟಿಲುಗಳ ಎತ್ತರ ಮಕ್ಕಳಿಗೆ ಎಟುಕುವಂತಿರಬೇಕು.
ಗುರುತಿನ ಚೀಟಿ ತರುವ ಪೋಷಕರ ಕೈಗೆ ಮಾತ್ರ ಮಕ್ಕಳನ್ನು ವಹಿಸಬೇಕು.



No comments:

Post a Comment