Wednesday 10 August 2016

ನಾನೊಬ್ಬ ಸತ್ತೋದರೆ!?...


      ನಾನೊಬ್ಬ ಸತ್ತೋದರೆ!?... ಹೀಗೊಂದು ಪದ ಕಾಡಲು ಶುರುವಿಟ್ಟಿದ್ದು ಮೊನ್ನೆ ಮೊನ್ನೆಯಿಂದ... ಸರಿಸುಮಾರು ಐದಾರು ವರ್ಷಗಳಿಂದ ನನ್ನದು ಸದಾ ಒಂದಿಲ್ಲೊಂದು ವಿಭಾಗದಲ್ಲಿ ಹೋರಾಟದ ಬದುಕೆಂದರೆ ತಪ್ಪಿಲ್ಲ. ಇಲ್ಲಿ ಪ್ರತಿದಿನದ ಬದುಕನ್ನು ತುಂಬಾ ಪ್ರೀತಿಸುವ, ಹೆಚ್ಚು ಪರಿಪೂರ್ಣವಾಗಿಸಿಕೊಳ್ಳುವ ಹಂಬಲ ನನ್ನದು. ನನ್ನ ಕೆಲಸ ಕಾರ್ಯಗಳಿಗೆ ಹುಂಬತನದಲ್ಲೋ, ಹೊಟ್ಟೆಕಿಚ್ಚಿನಿಂದಲೋ ಅಡ್ಡಗಟ್ಟುವವರ ಸಂಖ್ಯೆ ಹೆಚ್ಚಿದ್ದರೂ, ನನ್ನದು ನಿಲ್ಲದ ಹೋರಾಟ. ಎಂ.ಕಾಂ ಕಲಿಕೆಯಲ್ಲಿ ಉನ್ನತ ದರ್ಜೆ ಪಡೆದಿದ್ದರೂ, ನಾನಾಯ್ಕೆ ಮಾಡಿಕೊಂಡಿದ್ದು ನನ್ನ ನೆಚ್ಚಿನ ಪತ್ರಿಕೋದ್ಯಮವನ್ನೇ. ಇದು ನನ್ನ ಹುಚ್ಚು. ಇದರಿಂದ ಪಡೆದುಕೊಂಡೆನೇ ವಿನಃ, ಏನನ್ನೂ ಕಳೆದುಕೊಂಡಿಲ್ಲ. ಐದಾರು ವರ್ಷದ ಹಿಂದೆ ಬದುಕಿನ ಸಣ್ಣ ಏರುಪೇರಿಂದ ಎಲ್ಲವನ್ನೂ ಕಳೆದುಕೊಂಡಿದ್ದಾಗ!, ವಿಶ್ವಾಸಿಗರೆಂದುಕೊಂಡಿದ್ದ ಎಲ್ಲರಿಂದ ಬಸವಳಿದು ನನ್ನಾತ್ಮ ನಂಬುಗೆ ಕಳೆದುಕೊಂಡಾಗ!, ಕಷ್ಟವೆಂದಿದ್ದಾಗ ಕೈ ಬಿಟ್ಟು ನಡೆದಿದ್ದ ಎಲ್ಲರಿಂದಲೂ ದೂರವಿರೋಣವೆಂದು ದೊಡ್ಡ ನಗರಿಗೆ ಬಂದು ನೆಲೆನಿಂತಾಗ!, ಜೊತೆಯಿದ್ದ ಅಣ್ಣನೊಬ್ಬನನ್ನ ಬಿಟ್ಟರೆ, ಹಿಂದೆ-ಮುಂದೆ, ಆಚೆ-ಈಚೆ ಕಂಡು ಬಂದಿದ್ದೆಲ್ಲಾ ವೈರಿಗಳೇ. ಕಣ್ಮುಚ್ಚಿದರೂ, ಕಣ್ತೆರೆದರೂ ಜಡಿಯುವ ಅವರ ಅಟ್ಟಹಾಸದ ದರ್ಪವೇ ಕಾಣುತ್ತಿತ್ತು. ಆದರೂ ಎಲ್ಲೂ ಭಯ ಮಿಶ್ರಿತಗೊಂಡಿರಲಿಲ್ಲ. ನನ್ನ ಎದೆಗಾರಿಕೆಗೆ ಧೃತಿ ಗೆಡುವ ಮಾತೇ ಇರಲಿಲ್ಲ... ಬಿಕಾಸ್ ನನ್ನ ಗುರಿ ನೇರವಾಗಿತ್ತು. ನಡಿಗೆ ಗುರಿ ಮುಟ್ಟುವುದ್ದಾಗಿತ್ತು. ದಾರಿ ನನಗರಿವಿಲ್ಲದೇ ನಡೆಸುತಿತ್ತು. ಏನಾದರೂ ಸಾಧಿಸಿ ತೋರಿಸಬೇಕೆನ್ನುವ ಛಲ ಸದಾ ಬೆನ್ನಿಗಂಟಿತ್ತು...

      ಬಹಳ ಹಿಂದೆಯೇ ನಿನ್ನನ್ನು ಕೊಲ್ಲುತ್ತೇನೆಂದು ಕತ್ತಿ ಹಿಡಿದು ದಾರಿ ಅಡ್ಡಗಟ್ಟಿದ್ದ ತಂಡದಿಂದ ಹೋರಾಡಿ ಉಳಿದಿರುವ ಈ ಜೀವಕ್ಕೆ ಇಂದಿಗೂ ಒಂದೆರಡು ಕೊಲೆ ಬೆದರಿಕೆಗಳಿವೆ!!, ದಿನ ಬೆಳಗಾದರೆ ಹೆದರಿಸುವ ಬೆದರಿಕಾ ಫೋನ್ ಕರೆಗಳಿವೆ!!. ಆದರೂ ನಿಲ್ಲದ ಹೋರಾಟ ದಿನದೂಡುತ್ತಲೇ ಇದೆ. ಎಷ್ಟೇ ಭಯವಿಲ್ಲದಿದ್ದರೂ ಎದೆಗಾರಿಕೆಗೆ ಹೆದರಿಸಲು ಒಮ್ಮೊಮ್ಮೆ ಕಾಡುವ ಪ್ರೀತಿ-ಗೀತಿ ಇತ್ಯಾದಿಗಳ ಹೂರಣವೂ ಇದೆ.
ಸಫೋಸ್ ನಾನೊಬ್ಬ ಸತ್ತೋದರೆ!?... 
ಏನಾಗಬಹುದು!?...
  ನಿನಗೇನು ಹುಚ್ಚಾ ಸಾಯೋ ಮಾತ್ಯಾಕೆ ಈಗ ಎಂದು ನೀವು ಕೇಳಬಹುದು!,  ಆದರೆ ನೆನಪಿರಲಿ ಚಿಂತನೆಯಿಂದ ಯಾರೂ ಅಳಿಯರು. ಹಾಗೆಯೇ ಈ ಜೀವವು ಅಳಿಯದು...
 ಚಿಂತಿಸೋಣ!?...
(ಇದನ್ನು ಓದುವಾಗ ನಿಮ್ಮ ಜೀವವೂ ನಿಮ್ಮ ಕೈಯಲ್ಲಿರಲಿ-ನೀವೊಬ್ಬ ಸÀತ್ತೋದರೆ!? ಅಂದುಕೊಂಡೆ ಓದಿ - ಆಗ ಮಾತ್ರಾ ಪ್ರತಿ ಪದಗಳಿಗೂ ವಿಶಾಲಾರ್ಥ ದೊರಕಬಹುದು, ಲೇಖನದ ಒಳಾರ್ಥ ಮತ್ತು ನಿಮ್ಮ ಜೀವ ಬೆಲೆಯ ಸಂದೇಶವನ್ನು ಅರಿಯಬಹುದು)

ಚಿಂತಿಸಿದರೆ ದ್ವಂಧ್ವ ಪ್ರಶ್ನೆಗಳ ಅಲೆ ಏಳುತ್ತದೆ...

ಏನಾಗಬಹುದು!?...
ಏನಾಗದಿರಬಹುದು!?..,

ನಾಲ್ಕು ಜನ ಅಳಬಹುದು, ಬಾಸ್ ರಜೆ ಘೋಷಿಸಬಹುದು, ಸಹಪಾಠಿಗಳು ಖೇಧಗೊಳ್ಳಬಹುದು, ಅಮ್ಮ ಅಳಬಹುದು, ಅಪ್ಪ ಚಿಂತಿಸಿ ಮರುಗಬಹುದು, ಅಣ್ಣಂದಿರು  ಸಾವಿಗೆ ಕಾರಣವರಸಬಹುದು, ಅವನು ಆತಂಕಗೊಳಗಾಗಬಹುದು, ಅವಳು ಬಿಕ್ಕಿ ಬಿಕ್ಕಿ ಅಳಬಹುದು, ಇನ್ನೊಬ್ಬಳು ಖುಷಿ ಹಂಚಿಕೊಳ್ಳಬಹುದು, ಆಂಟಿ ಊಟ ಬಿಡಬಹುದು, ಅಂಕಲ್ ಫೋಟೋಗೊಂದು ಹಾರ ಹಾಕಬಹುದು, ಗೆಳೆಯರೊಂದಿಷ್ಟು ಮಂದಿ ಒಳ್ಳತನವನ್ನೋ, ಕೆಟ್ಟತನವನ್ನೋ ಆಡಿಕೊಳ್ಳಬಹುದು, ಒಂದಿಷ್ಟು ಮಂದಿ ಆಶ್ಚರ್ಯದಲ್ಲಿ ಗರಬಡಿದವರಂತೆ ನಂಬಲಾರದೇ ಪ್ಲಾಶ್ ನ್ಯೂಸ್‍ನ ಅಪ್ಢೇಟ್ ಏನಾದ್ರೂ ಇದ್ಯಾ ಎಂದು ನೋಡಿ ಆಮೇಲೆ ಸತ್ತಿದ್ದು ನಿಜ! ಎನ್ನುವ ಕನ್‍ಫರ್ಮ್‍ಮೇಷನ್ ಮಾಡಿಕೊಳ್ಳಬಹುದು. ಸೋಶಿಯಲ್ ಮೀಡಿಯಾಗಳಲ್ಲಿ, ಸತ್ತ ‘ಸಂದೀಪನಿಗೆ ಶ್ರದ್ಧಾಂಜಲಿ’ ಎನ್ನುವಂತೆ ಆತ್ಮಕ್ಕೆ ಶಾಂತಿಕೋರುವ ಫೋಟೋಗಳು ಡಿಸೈನ್-ಡಿಸೈನ್ ಆಗಿ ಅಡ್ಡಾಡಬಹುದು. ಹಲವರಿಗೆ ಅದು ಫಾರ್ವಡ್ ಮಾಡಲು ಮಜ ನೀಡಲೂಬಹುದು, ಗ್ರೂಪ್‍ನಿಂದ ಗ್ರೂಪ್‍ಗೆ ನಾನು-ನನ್ನ-ಇತ್ಯಾದಿಗಳ ಬಯೋಡೇಟಾ ಹರಿದಾಡಬಹುದು. ಹಲವರ ಫ್ರೋಫೈಲ್ ಪಿಕ್‍ನಲ್ಲಿ ನನ್ನ ಭಾವಚಿತ್ರದ ನಗುಬೀರಬಹುದು. ಫೇಸ್ ಬುಕ್‍ನಲ್ಲಿ ಲೈಕ್ ‘ಸಾ’ವಿರದ ಗಡಿದಾಟಬಹುದು. ತೀರಾ ಹತ್ತಿರದಿಂದ ನನ್ನ ನೋಡಿದ್ದ ಆತ್ಮೀಯರು ನಮ್ಮನೆಗೆ ಬಂದು ಕೊನೆ ನೋಟ ಎಂಬಂತೆ ನೋಡಿ ಕೈಮುಗಿದು ಕಣ್ಣೀರಿತ್ತು ಸಾಗಬಹುದು, ವೈರಿಯೊಬ್ಬ ಖುಷಿಪಡಬಹುದು, ಕೊಂದಾತ ಅಡಗಬಹುದು, ಊರಿಗೆ ಊರೇ ಪ್ರತಿಭಟಿಸಬಹುದು, ಮತ್ತೆ ತಂಪಾದ ಗಾಳಿ ಬೀಸಬಹುದು...
ಇಷ್ಟೇ..,ಇಷ್ಟೇ..,ಇಷ್ಟೇ!!...
ನಿಜ ಅಲ್ವಾ!?
ಎಸ್!!!...
ಹೀಗೊಂದು ಕಲ್ಪನೆ ನನ್ನೊಳಗೆ, ನಾನೊಬ್ಬ ಸತ್ತೋದರೆ!?... ಎಂದು ಚಿಂತನೆಗೆ ಅಡಿಯಿಟ್ಟ ಕ್ಷಣದಿಂದ, ದೇಹ ಭಾಷೆಯಿಂದಲೋ, ಸ್ವರಭಾಷೆಯಿಂದಲೋ, ಮನದಭಾಷೆಯಿಂದಲೋ, ಎಲ್ಲಿಂದೆಂದು ನಿಖರವಾಗಿ ತಿಳಿಯಲಾರದೇÀ ಅಸಹಾಯಕ ಕಂಪನದಿಂದ ಮನಸ್ಸಿನೊಳಗೆ ಮೇಳೈಸಹತ್ತಿದೆ. ಒಂಥರಾ ‘ಬೇಸ್‍ವಾಯ್ಸ್’ ತಳದಿಂದ ಜಿನುಗಿದಂತಿದೆ... ಸಾವಧಾನವಾಗಿ ಶಿಸ್ತಿನಿಂದ ಸುರುಳಿ ಸುರುಳಿಯಾಗಿ ಕರುಳಿನಿಂದ ಮೇಲೆದ್ದ ಸ್ವರ ವ್ಯಂಜನಗಳು, ಅನುಸ್ವಾರ ವಿಸರ್ಗಗಳು ಕೊರಳ ವಯಾ ಲೋಕಾರ್ಪಣೆಯಾಗುತ್ತಿರುವಂತೆ ವಿರಳ ಧ್ವನಿತ ಶ್ರುತಿಗೊಂಡು ಕಲಾಪ ನಡೆಸಿದಂತಿದೆ. ಕಾಲಕಾಲಕ್ಕೆ ಉಂಟಾಗುವ ಪ್ರತಿಯೊಂದು ಭ್ರಮಾಭಂಗವೂ ನಮ್ಮನ್ನು ಇನ್ನೊಂದು ಸಾಕ್ಷಾತ್ಕಾರಕ್ಕೆ ನೂಕುತ್ತದಂತೆ. ಅದು ಇದೇನಾ!? ಅಥವಾ ಇದೂ ಅದೇನಾ!? ಎನ್ನುವಂತೆ ಗೊಮದಲದ ಗೂಡಿಗೆ ನೂಕಿದೆ.

ಓಶೋರವರು ಹೇಳುವಂತೆ ಜಗತ್ತಿನಲ್ಲಿ ಪ್ರತಿಯೊಬ್ಬನೂ ಶೂನ್ಯನೇ!. ಇರುವಷ್ಟು ದಿನ ಹೊಡೆದಾಟ, ಬಡಿದಾಟ ಅಷ್ಟೇ. ಸತ್ತಮೇಲೆ ಎಲ್ಲರಾಗುವುದು ಇಷ್ಟೇ!. ‘ಆಸೆಯ ಬಸಿರಿಗೆ ನಿರಾಶೆಯೇ ಹೆರಿಗೆ’ ಎಂಬಂತೆ ಎಂತಹ ಆತ್ಮಸ್ಥೈರ್ಯವಿದ್ದರೂ ಸಾವು ಸನ್ನಿಹಿತ ಎಂದರಿತ ಕ್ಷಣದಿಂದ ಏನೂ ಮಾಡಲಾಗದ ಕೈಕಟ್ಟಿದ ಅನುಭವ ನಮ್ಮನ್ನೂ ಶೂನ್ಯಕ್ಕೆ ತಳ್ಳುತ್ತದೆ ಮತ್ತು ಕೆಳಸ್ಥರಕ್ಕೆ ಮಂತ್ರಿಸುತ್ತದೆ, ಸತ್ತರೇ ಮುಂದೇನು!?, ಎನ್ನುವ ನಿರಾಶೆ ಇದ್ದ-ಬದ್ದ ಎಲ್ಲಾ ಆಸೆಗಳನ್ನು ತನ್ನ ತೆಕ್ಕೆಯಲ್ಲಿ ಸಾಯಿಸುತ್ತದೆ ಎನ್ನುವಲ್ಲಿ ಅನುಮಾನವೇ ಇಲ್ಲ!..

ನಿಜಕ್ಕೂ ನಾನು ಒಂದಲ್ಲ ಒಂದು ದಿನ ಸಾಯುತ್ತೇನೆ. ಅದರಲ್ಲಿ ಯಾವ ಅನುಮಾನವಿಲ್ಲ. ಸತ್ತ ನಂತರ ನಾನೇನಾಗಬಹುದು!. ಎಲ್ಲಿಗೋಗಬಹುದು! ಯಾರಿಗೂ ತಿಳಿದಿಲ್ಲ. ಆದರೂ ಏನಾಗಬಹುದೆಂದು ತಿಳಿಯುವ ಕಾತರದ ಯೋಚನಾ ನಡೆ, ಪ್ರತಿಯೊಬ್ಬರಲ್ಲೂ ಹರಿದಾಡೇ-ಆಡಿರುತ್ತದೆ. 

     ನನ್ನ ಸ್ವರೂಪ ಬದಲಾಗಬಹುದು. ಪಾತ್ರ ಬದಲಾಗಬಹುದು, ಸ್ಥಳ ಬದಲಾಗಬಹುದು, ವಾತಾವರಣ ಬದಲಾಗಬಹುದು, ಮೌಲ್ಯಗಳು ಕುಸಿಯಬಹುದು, ಬದುಕಿನ ಶೈಲಿ ಬದಲಾಗಬಹುದು. ಇವಿಷ್ಟೇ ಅಲ್ಲದೇ ಇನ್ನಿಷ್ಟು ಯಕ್ಷಪ್ರಶ್ನೆಗಳು ಕುಣಿದಾಡಿರುತ್ತವೆ!.. ಸತ್ತ ನಂತರ ಆತ್ಮದ ನಿಯಮ ಹೇಗಿರಬಹುದು, ನಾನಿಲ್ಲೇ ಇರುತ್ತೇನಾ!?,  ನನ್ನಾತ್ಮ ಇಲ್ಲೇ ಸುತ್ತಬಹುದಾ!? ನಾನಂತೂ ಅವರಿಗೆ ಕಾಣಿಸುವುದಿಲ್ಲ,.. ಇವರೆಲ್ಲಾ ನನಗೆ ಕಾಣಿಸಬಹುದಾ!? ಯಾರ್ಯಾರು ನನ್ನ ಬಗ್ಗೆ ಏನೆಲ್ಲಾ ಹೇಳಬಹುದು!?, ನಾನು ಆ ಕಡೆ ಸ್ವರ್ಗಕ್ಕೂ ಹೋಗದೇ, ಈ ಕಡೆ ನರಕಕ್ಕೂ ಹೋಗದೇ ಮನೆಯಂಗಳದ ಹುಣಸೇ ಮರದಲ್ಲಿ ವಾಸಿಸಲು ಯಮಧರ್ಮರಾಯ ಪರ್ಮಿಷನ್ ನೀಡಬಹುದಾ!? ಆತ್ಮದ ಅಲೆದಾಟವಿದೆ ಎನ್ನುವ ನನ್ನ ಕಾಣದ ಕಲ್ಪನೆ ಸುಳ್ಳಿರಬಹುದಾ!? ಸತ್ತ ಮೇಲೆ ಏನೂ ಇಲ್ಲವಾ!? ಇತ್ಯಾದಿಗಳೆಲ್ಲ ಹೊಸ ಭ್ರಮೆಯಲ್ಲಿ ಕಾಡತೊಡಗಿರುತ್ತವೆÉ. ಹಿಂದಿದ್ದ ಎಲ್ಲಾ ಆಶಾಭಾವನೆ, ಆತಂಕ, ಆಧ್ಯಾತ್ಮಿಕ ಪ್ರಜ್ಞಾವಾಹಿನಿಯ ಮೂಲ ಪ್ರೇರಪಣೆಯಾಗಿ ಕಾರ್ಯ ನಿರ್ವಹಿಸುವುದು ಇಲ್ಲಿ ವಿಪರ್ಯಾಸವಾದರೂ ಸತ್ಯ.

ಪ್ರತಿ ದಿನವನ್ನೂ ನಾವು ಆರಾಮದಾಯಕವಾಗಿ ವ್ಯರ್ಥಮಾಡುತ್ತಲೇ ಸಾಗುತ್ತೇವೆ. ಆಗಾಗ ಒಮ್ಮೊಮ್ಮೆ ಸೆಟೆದು ನಿಂತು ಮಹತ್ಕಾರ್ಯದತ್ತ ಗೌಡಾಯಿಸುತ್ತೇವೆ. ಸಾಧನೆ ಆದಾಗ ಹಿಗ್ಗುತ್ತೇವೆ, ಸೋಲಾದಾಗ ಕುಗ್ಗುತ್ತೇವೆ. ಒಬ್ಬರೂ ಇನ್ನೊಬ್ಬರನ್ನು ನೋಡಿ ಉರಿದುಕೊಳ್ಳುತ್ತೇವೆ, ಸಾಯಿಸಬೇಕೆಂದು ಹೊಂಚುಹಾಕುತ್ತೇವೆÉ. ಎಲ್ಲವೂ ನನ್ನದು, ನನಗೆ ಸೇರಬೇಕೆಂದು ಪಾಪದ ಕೂಪದಲ್ಲಿ ಬೀಳುತ್ತಿರುತ್ತೇವೆ. ಆದರೆ ಬದುಕ ಅಂತಿಮ ಸತ್ಯ ಅಡಗಿರುವುದು ಸಾವಲ್ಲಿ ಎನ್ನುವುದನ್ನು ಮರೆತಿರುತ್ತೇವೆ.

    ನಾನೊಬ್ಬ ಸತ್ತೋದರೆ!?... ಎಂದುಕೊಂಡು ಮನಸಿಗೆ ಚಿಂತನೆಯ ಬೆಂಕಿ ಹತ್ತಿಸಿಕೊಂಡಾಗಲೇ, ಬದುಕಿನ ಅಪರಿಮಿತ ಮುಖಗಳೆಲ್ಲವೂ ವಿನ್ಮಿತ ಕಣ್ಣುಗಳಲ್ಲಿ ತೆರೆದುಕೊಂಡಂತಾಗುವುದು. ಆ ಬೆರಗಿನ ಭಾವ ಕ್ಷಣ ಕ್ಷಣವನ್ನು ಲೆಕ್ಕಹಾಕಿಸುತ್ತದೆ. ಯಾವ್ಯಾವುದೋ ವಿಚಾರದಲ್ಲಿ ತರ್ಕತೆ ಬೇಡ ಎಂದು ಅನುಸಂಧಾನ ಕಾಣಿಸುತ್ತದೆ. ಭಯ ತರಿಸುತ್ತದೆ, ಅನುಕಂಪ ಮೂಡಿಸುತ್ತದೆ. ಎಲ್ಲರನ್ನೂ, ಎಲ್ಲವನ್ನೂ ಬಿಟ್ಹೋಗುತ್ತೀನಲ್ಲಾ ಛೇ ಎಂದೆನಿಸಿ, ಇನ್ನೊಂದಿಷ್ಟು ದಿನವಾದರೂ ಬದುಕೋ ಹಾಗೆ ಮಾಡಪ್ಪಾ ಅನಿಸುತ್ತದೆ. ಅಲ್ಲದೇ ಸಾವಿಗೆ ಮುಂಚೆ ಉಳಿದಿರುವ ಸಮಯ ಬರಿಯ ಕಳೆದ ದಿನಗಳ ಯೋಚನೆ ಮತ್ತು ಸರಿ-ತಪ್ಪುಗಳನ್ನು ಸರಿದೂಗಿಸಿಕೊಳ್ಳುವ ನಿಷ್ಠೆಯಲ್ಲಷ್ಟೇ ಕಾಲ ಸವೆಸುತ್ತಿರುತ್ತದೆ ಹೊರತು, ದೇಹ, ಮನ ಯಾವ ಮಹತ್ಕಾರ್ಯಕ್ಕೂ ಅಡಿಯಿಡುವುದಿಲ್ಲ. ಅದು ಸಾಧ್ಯವಾಗುವುದು ಇಲ್ಲ. ಯಾಕೆಂದರೆ ಅಲ್ಲಿ ಆತ್ಮದ ನಡುಕ ಗಡ ಗಡಿಸಲು ಶುರುವಿಟ್ಟಿರುತ್ತದೆ. ಎಲ್ಲವೂ ಶೂನ್ಯಕ್ಕೆ ವಾಲಿರುತ್ತದೆ. ಹೊಸ ಭಯ ಬೆವರಿಳಿಸುತ್ತಿರುತ್ತದೆ.

    ಸಿಂಪಲ್ ಮಾತಲ್ಲಿ ಹೇಳಬೇಕೆಂದರೆ, ಜೀವಿತದಲ್ಲಿ ಸಾವಿನ ಭಯವಿಲ್ಲದ ದಿನಗಳನ್ನು, ವೀರ್ಯ ಸ್ಖಲನದ ಬಳಿಕವೂ ಹೆಣ್ಣನ್ನು ಸಂಭೋಗಿಸುವ ‘ಸ್ಫಿರಿಟ್’ ಕಾಪಾಡಿಕೊಂಡೇ ತಿರುತ್ತೇನೆಂದು, ಮುನ್ನವೇ ಪ್ರತಿಜ್ಞೆ ಮಾಡಿ ಪಲ್ಲಂಗವೇರುವ ಪ್ರತಿಪುರುಷನ ಉನ್ಮತ್ತ ಭ್ರಮೆಯಾದರೆ, ಸಾವಿನ ಭಯ ಕಂಡಿರುವ ದಿನಗಳನ್ನು ವೀರ್ಯ ಸ್ಖಲನ ನಂತರದ ಅವಸ್ಥೆ ಎನ್ನಬಹುದು. ಪೂವೋತ್ತರ ಸ್ಥಿತಿಗಳೆರಡೂ ಭ್ರಮೆಯೇ ಆದರೂ, ಪೂರ್ವದಲ್ಲಿ ಚೈತನ್ಯಕ್ಕೆ ಮಿತಿಯೇ ಇರುವುದಿಲ್ಲ, ಉತ್ತರದಲ್ಲಿ ಇದುವೇ ನನ್ನ ಶಾಶ್ವತ ವಿರಕ್ತಿಯೆನ್ನುವ ಭ್ರಮೆ ಕಾಡದೇ ಬಿಡುವುದಿಲ್ಲ.

   ನೀವಿದನ್ನೂ ಏನು ಬೇಕಾದರೂ ಅಂದುಕೊಳ್ಳಿ!, ವಿವೇಕ-ಅವೀವೇಕದ ಕೊಂಡಿಯಂತಲೋ, ಬೆಳಕು ಮತ್ತು ಕತ್ತಲೆಯ ನಡುವಿನ ಕೊಂಡಿಯಂತಲೋ, ಅನಾದಿ ಮತ್ತು ಅನಂತದ ನಡುವಿನ ಕೊಂಡಿಯಂತಲೋ, ಉತ್ಫತಿ, ಲಯ, ಜಡ-ಚೇತನ, ಧ್ವೈತ-ಅಧ್ವೈತ ಹೀಗೆ ಯಾವುದಾದರೂ ಮಧ್ಯದ ಕೊಂಡಿಯಂತಲೋ, ಬಾಳಿನ ದುರ್ಬಲ ಸ್ಥರದ ಸತ್ಯವಂತಲೋ, ಒಳಿತು ಕೆಡುಕಿನ ಸತ್ಯಾಸತ್ಯತೆ ಅರಿಯುವ ಮೂಲ ಗಟ್ಟವೆಂತಲೋ ಹೀಗೆ, ಏನೂ ಬೇಕಾದರೂ ಅಂದುಕೊಳ್ಳಿ ಆದರೆ ಪ್ರತಿಯೊಬ್ಬ ನಾನಿಂದು ಸಾಯುತ್ತೇನೆಂದು ತಿಳಿದರೆ ಅರಿಯುವ ಸತ್ಯ ಈ ಮೇಲಿನದ್ದೆ ಅಂದರೆ ತಪ್ಪಿಲ್ಲ.

ವ್ಯರ್ಥವೇ ವ್ಯರ್ಥ, ಸಮಸ್ತವೂ ವ್ಯರ್ಥ, ಮನುಷ್ಯನು ಈ ಲೋಕದಲ್ಲಿ ಪಡುವ ಪ್ರಯಾಸವೆಲ್ಲವೂ ವ್ಯರ್ಥ, ಹಾಗಾದರೆ ಲಾಭವೇನು!?. ಒಂದು ತಲಾಂತರವೂ ಗತಿಸುವುದು, ಇನ್ನೊಂದು ತಲಾಂತರವೂ ಬರುವುದು. ಭೂಮಿಯಾದರೋ ಅಮರವಾಗಿ ನಿಲ್ಲುವುದು. ಸೂರ್ಯನು ಏರುವನು, ಸೂರ್ಯನು ಇಳಿಯುವವನು. ಗಾಳಿ ಬೀಸುವುದು, ನದಿಗಳೆಲ್ಲಾ ಸಮುದ್ರಕ್ಕೆ ಹರಿಯುವುದು. ಕಣ್ಣು ನೋಡಿ ತೃಪಿಗೊಳ್ಳದು, ಕಿವಿ ಕೇಳಿ ದಣಿಯದು. ಇದ್ದದ್ದೇ ಇರುವುದು, ನಡೆದದ್ದೇ ನಡೆಯುವುದು. ಹೊಸದೆಂದಿದ್ದು ತಲಾಂತರದಲ್ಲಿ ಹಳೆಯದೇ ಆಗುವುದು, ಮಣ್ಣು ಭೂಮಿಗೆ ಸೇರುವುದು ನಾವು ಒಂದಲ್ಲಾ ಒಂದಿನ ಮಣ್ಣಿಗೆ ಸೇರುವುದು...

     ಹೀಗೆ ಗತ, ಭವಿಷ್ಯ, ಪ್ರಸಕ್ತತೆಗಳು ಒಂದರೊಳಗೊಂದು ಅವಿತುಕೊಳ್ಳುತ್ತಾ ಲೀಲಾಮಯವಾದ ವರ್ತುಲವನ್ನೇ ಹೆಣೆದು ಬಿಡುವ ನಮ್ಮತನಕ್ಕೆ ಮತ್ತೇ ಮತ್ತೇ ಕಾಡಿ ಕೆಟ್ಟತನವನ್ನು ಸುಟ್ಟುಕೊಳ್ಳಲು ನಮಗಿರುವ ಒಂದೇ ನಡೆಯೆಂದರೆ... ನೇರವಾಗಿ ಮನಸ್ಸಿನೊಳಗೆ ಏಕಾಂಗಿಯಾಗಿ ಚಿಂತನೆಗಿಳಿಯಬೇಕು...

‘ನಾನೊಬ್ಬ ಸತ್ತೋದರೆ!?’......................................

No comments:

Post a Comment