Saturday 1 October 2016

ಕವಿ ಕನವರಿಕೆ: ಪ್ರೇಮಾಯಣ - #4


     ಅವನು ಒಂಥರಾ!!! ಅವಳು ಒಂಥರಾ!!! 
ಅವಳು ಹೇಳುವುದನ್ನು ಬಿಟ್ಟಿಲ್ಲ!, ಅವಳು ಹೇಳಿದ್ದನ್ನು ಅವನು ಕೇಳುವುದಿಲ್ಲ!.. ಅವನಿಗೆ ಅವಳೆಂದರೆ ಇಷ್ಟ ಆದರೆ ಅವಳ ನಡೆ ನುಡಿ, ಸುತ್ತಮುತ್ತಲ ಪರಿಕರಗಳೆಲ್ಲ ಒಮ್ಮೊಮ್ಮೆ ಇಷ್ಟವಾದರೂ ಸಹಿಸಿಕೊಳ್ಳುತ್ತಾನೆ, ಕೋಪಿಸಿಕೊಳ್ಳುತ್ತಾನೆ, ಒಂದರ್ಧ ಗಂಟೆ ಬಿಟ್ಟು ಮುದ್ದಿಸುತ್ತಾನೆ. ಅವಳಿಗೆ ಅವನ ಎಲ್ಲವೂ ಇಷ್ಟ. ಪ್ರೀತಿಯಲ್ಲಿ ಅವಳು ಹೆಚ್ಚೆನಿಸಿದರೂ ಅವನೇ ಒಂದು ಬೊಗಸೆ ಜಾಸ್ತಿಯೇ ತೂಗುತ್ತಾನೆ... ಗಜಗಯಿಸಿ ಕಚ್ಚಾಡುತ್ತಾರೆ, ಅಷ್ಟಕ್ಕಷ್ಟೇ ಪ್ರೀತಿಸುತ್ತಾರೆ...

ಇಬ್ಬರಲ್ಲೂ ಪ್ರೀತಿ ಪರಿಣಾಮ ಬೀರಿದೆ, ಕಾಣದ ಸುಖ ನೀಡಿದೆ. ಒಂದಿನವೂ ಒಬ್ಬgನ್ನೊಬ್ಬರು ಬಿಟ್ಟಿದ್ದರೆ ಆ ದಿನ ಇಬ್ಬರೂ ಏನೋ ಕಳೆದಂತೆ, ಕಳೆದುಕೊಂಡಂತೆ!!. ವಾರಕೊಮ್ಮೆ ಸಂಧಿಸದಿದ್ದರೆ ಎಲ್ಲವೂ ಮೋಸದಂತೆ, ಇಲ್ಲಿ ಪ್ರೀತಿ ಕುರುಡೋ, ಅವರಿಬ್ಬರ ನಂಬಿಕೆ ಕುರುಡೋ ಇಬ್ಬರಿಗೂ ಗೊತ್ತಿಲ್ಲ!.

ಬೆಳಗೆದ್ದು ಗುಡ್ ಮಾರ್ನಿಂಗ್ ಹೇಳುವುದರಿಂದ ಹಿಡಿದು ಸಂಜೆ ಮಲಗುವವರೆಗೂ ನಡೆದಿದ್ದೆಲ್ಲವೂ ವಿನಿಮಯವಾಗಲೇಬೇಕು. ಸುತ್ತಮುತ್ತ ಸುನಾಮಿಯೇ ಬರಲಿ ಅವರಿಗ್ಯಾವ ಪರಿಯೂ ಇಲ್ಲ. ಕಳ್ಳ-ಕಾಕರು, ಮದ-ಮತ್ಸ್ಯರು, ಉರಿ-ಗರಿಗಳಲ್ಲಿ ಜಗ ಬೇಯುತ್ತಿದ್ದರೂ ಇವರಿಗದ್ಯಾವುದರ ಪರಿವೇ ಕಾಣದು. ಇಬ್ಬರು ಜೊತೆಯಾದರೆ ಜಗವನ್ನೇ ಮರೆತುಬಿಡುತ್ತಾರೆ. ಪ್ರತಿದಿನವೂ ಕಂಪಿಸುವ ಪ್ರೀತಿಯ ಇಂಪಿಗೆ ಹಾತೊರೆಯುತ್ತಾರೆ. ಅವನ ಬಿಸಿಯುಸಿರಿಗೆ ಆಕೆ ಆವಿಯಾಗುತ್ತಾಳೆ. ಕಚ್ಚಾಡಿಕೊಂಡರು ಕೋಪಿಸಿಕೊಂಡರೂ ಅವನೆದೆಯ ತೆಕ್ಕೆಯಲ್ಲಿ ಅವಳು ಆರಾಮಾಗಿಯೇ ಅಪ್ಪಿ ಅಮಲ ಪಾಶದಲ್ಲಿ ನಿದ್ದೆಗೆ ಜಾರುತ್ತಾಳೆ. ಪ್ರೇಮಾಯಣದಲ್ಲಿ ಅವರಿಬ್ಬರ ಹೃದಯವೂ ಒಂದಾಗಿ ಮತ್ತೆ ಮತ್ತೆ ಹುಟ್ಟಿ ಮತ್ತೆ ಮತ್ತೆ ಪ್ರೀತಿಯಲ್ಲಿ ಬದುಕಬಹುದೆಂದು ಎಲ್ಲರಿಗೂ ತೋರಿಸುತ್ತಿದ್ದಾರೆ.

No comments:

Post a Comment