Saturday 1 October 2016

ಸಿರಿ ಬುಲೆಟ್ - ಸೋಜಿಗದ ಸೋಷಿಯಲ್ ಮೀಡಿಯಾ...


ಬಳಸುವಾಗ ನಲಿ-ಕಲಿ, ಯಾಮಾರಿದರೆ ನೀನೇ ಬಲಿ...
ಹೊಟ್ಟೆಗೆ ಹಿಟ್ಟು ಬೇಡ, ಮೊಬೈಲ್‍ಗೆ ನೆಟ್ಟು ಮಾತ್ರಾ ಬೇಕು...
ಚರ್ಚೆಯ ವಿಮರ್ಶೆ, ಕಚ್ಚಾಡುವ ಪರಾಮರ್ಶೆ...
ಇನ್‍ಫಾರ್ಮೆಷನ್ ಸಹವಾಸ, ಅಡಿಕ್ಟ್ ಆಗಿಬಿಟ್ಟಿದ್ದೇವೆ; ಹೆಚ್ಚಿನವರಿಗೆ ಜಾಲತಾಣವೇ ವಾಸ.

                ಈಗೇನಿದ್ದರೂ ಇಂಟರ್‍ನೆಟ್ ಆಟ. ಮೊದಲೆಲ್ಲ ವಿರಳ ಅತೀ ವಿರಳ ಎನ್ನುವಂತಿದ್ದ ಅಂತರ್ಜಾಲ ಇಂದು ಅದೇ ಒಂದು ದೊಡ್ಡ ಜಾಲವೆಂಬಂತೆ ಹಬ್ಬಿಕೊಂಡಿದೆ. ಇದರಿಂದ ಎಲ್ಲವೂ ಬದಲಾವಣೆಗೊಂಡಿದೆ. ನಿಂತಲ್ಲೇ ಏನನ್ನು ಬೇಕಾದರೂ ನೋಡಬಹುದಾದ, ಏನನ್ನು ಬೇಕಾದರೂ ಕೇಳಬಹುದಾದ, ಇನ್‍ಫಾರ್ಮೆಷನ್‍ನನ್ನು ಪಾಸ್ ಮಾಡುವ ಸೋಜಿಗ ಸೃಷ್ಟಿಯಾಗಿದೆ.

  ಒಂದು ಹಂತದವರೆಗೆ ಸ್ಥಿರವಾಗಿದ್ದ, ವೆಬ್ ಪುಟಗಳನ್ನು, ಸಂವಹನಾತ್ಮಕವಾಗಿ ಬದಲಾಗುತ್ತಿದ್ದ ವಿದ್ಯಮಾನವನ್ನು ಪ್ರತಿಯೊಬ್ಬರು ಕಣ್ಣಾರೆ ಕಂಡವರೆ!! ಮತ್ತು ಅದರಿಂದ ಪ್ರಯೋಜನ ಪಡೆಯುತ್ತಿರುವವರೇ!!.ಆಗಿದ್ದಾರೆ.
 ಎಲ್ಲೋ ಒಂದು ಕಡೆ ಕುಳಿತು ಊಡಿಸಿದ ಮಾಹಿತಿಗಳನ್ನು ಜಾಲಿಗರು ಓದುವ ಸ್ಥಿತಿ ಬದಲಾಯಿತು. ಓದುತ್ತಲೇ ಅದಕ್ಕೆ ಪ್ರತಿಕ್ರಿಯಿಸವ ಅವಕಾಶ ದೊರೆಯಿತು. ಮಾಹಿತಿಯ ಬಳಕೆದಾರರೇ ಮಾಹಿತಿಯನ್ನು ಸೃಷ್ಟಿಸುವ ಅವಕಾಶವನ್ನು ಜಾಲತಾಣಗಳು ಬಳಸಿಕೊಳ್ಳಲು ಆರಂಭಿಸಿದ ನಂತರ ಒಂದು ಮೌನ ಕ್ರಾಂತಿಯೂ ನಡೆಯಿತು. ಅಲ್ಲಿಯ ತನಕ ಜಾಲ ತಾಣಗಳನ್ನು ನೋಡುವ ಅವಕಾಶ ಕಲ್ಪಿಸಿದ್ದ ಬ್ರೌಸರ್ ಮಾಹಿತಿಯನ್ನು ಸೃಷ್ಟಿಸುವ ಉಪಕರಣವಾಗಿಯೂ ಬಳಕೆಯಾಯಿತು.
ಇಂದು ಭಾರತದ ಮಟ್ಟಿಗೆ ಇದೊಂದು ದೊಡ್ಡ ಬೆಳವಣಿಗೆ. ಇಂಟರ್‍ನೆಟ್ ಬಳಕೆ ಹೆಚ್ಚಿರುವ ಪಾಶ್ಚಾತ್ಯ ದೇಶಗಳಲ್ಲಿ ದೊಡ್ಡ ದೊಡ್ಡ ಕಂಪೆನಿಗಳ ಸೇವಾ ಲೋಪವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭಟಿಸುವ ಮಾದರಿಗಳಿವೆ. ಹಾಗೆಯೇ ಮರಗಳನ್ನು ಕಡಿಯುವುದು ಪ್ರಾಣಿಗಳನ್ನು ಉಳಿಸುವುದು ಮುಂತಾದ ಅನೇಕ ಹೋರಾಟಗಳಿಗೂ ಈ ಮಾಧ್ಯಮ ಬಳಕೆಯಾಗುತ್ತಿದೆ.  ಜಗತ್ತಿನ ಯಾವುದೇ ಮೂಲೆಗಳಲ್ಲಿ ಕುಳಿತಿರುವರನ್ನು ಒಂದು ಉದ್ದೇಶಕ್ಕಾಗಿ  ಒಂದುಗೂಡಿಸುವ ಕೆಲಸವನ್ನು ಈ ಸಾಮಾಜಿಕ ಜಾಲತಾಣಗಳು ಮಾಡುತ್ತಿವೆ. 
ಸಾಂಪ್ರದಾಯಿಕ ಸುದ್ಧಿ ಮೂಲಗಳ ಬುಡವನ್ನು ಅಲುಗಾಡಿಸುವಂತಹ ಸಿದ್ಧಿಯ ವಿಶ್ವಾಸಾರ್ಹತೆಯ ವಿಮರ್ಶೆ ಟ್ವಿಟರ್, ಫೇಸ್ ಬುಕ್, ಯೂಟ್ಯೂಬ್, ವ್ಯಾಟ್ಸಾಪ್, ಹೀಗೆ ಹತ್ತು ಹಲವು ಮುಖಗಳಲ್ಲಿ ಅಣುಬಾಂಬ್‍ನ ಸ್ಫೋಟಕ ಕಾಣುವ ವಿದಳನಾ ಕ್ರಿಯೆಯಂತೆ ಮುಂದುವರಿಯುತ್ತ್ತಿದೆ. ಒಬ್ಬ ವ್ಯಕ್ತಿ ತನ್ನ ಫೇಸ್‍ಬುಕ್, ವ್ಯಾಟ್ಸಾಪ್, ಟ್ವೀಟರ್ ನಲ್ಲಿ ಬರೆದು ಶೇರ್ ಮಾಡಿದ ವಿಷಯ ಆತನ ಹಿಂಬಾಲಕರ ಕಂಪ್ಯೂಟರ್, ಮೊಬೈಲ್, ನೆಟ್‍ಬುಕ್, ಲ್ಯಾಪ್ಟಾಪ್ ಇತ್ಯಾದಿಗಳ ಪರದೆಯ ಮೇಲೆ ಬರುತ್ತಿದ್ದಂತೆಯೇ ಆ ವಿಷಯದ ಪರ ಅಥವಾ ವಿರೋಧ ಮಾತುಕತೆಗಳು ಸಂವಾದದ ರೂಪದಲ್ಲಿ ಇಂಟರ್‍ನೆಟ್ ಒಡಲು ತುಂಬುತ್ತಾ ಹೋಗುತ್ತದೆ.
        ಅರಳಿ ಕಟ್ಟೆಯಲ್ಲಿ ಕೂತು ಹರಟುವ ಹಾಗೂ ರಾಜ್ಯ ಮತ್ತು ದೇಶದ ಸುದ್ಧಿಗಳ ಬಗ್ಗೆ ವಿಚಾರ ವಿನಿಮಯ  ಮಾಡಿಕೊಂಡು ಅದಕ್ಕೆ ನಮ್ಮದೇನಾದರೂ ಕಾಣಿಕೆ ಕೊಡಲಿಕ್ಕೆ ಸಾಧ್ಯವೇ ಎಂದು ಯೋಚಿಸಿ ಪತ್ರವ್ಯವಹಾರ ಮುಖೇನ ವ್ಯವಹರಿಸಿ ವರ್ಷಾನುಗಟ್ಟಲೆ ಕಾದು ಕೂರುವ ದಿನಗಳಲ್ಲಿ ಈಗ ನಾವಿಲ್ಲ. ಹಳ್ಳಿಗನೂ ಇಂದು ವಿಶ್ವದ ಇನ್ಯಾವುದೋ ಮೂಲೆಯ ವಿಜ್ಞಾನಿಯ ನೆರವನ್ನು ಪಡೆದು ತನ್ನ ಉತ್ಫತಿಯನ್ನು ಹೆಚ್ಚಿಸಿಕೊಳ್ಳುವ ಕಾಲವಿದು. ಮೊದಲೆಲ್ಲ ಸ್ಥಿರ ದೂರವಾಣಿಯನ್ನು ಬಳಸುತ್ತಿದ್ದವರು ಇಂದು ಕೈಗೆಟುಕುವ ಬೆಲೆಯಲ್ಲಿ ಮೊಬೈಲ್! ಅಲ್ಲಲ್ಲ.., ಆ್ಯಂಡ್ರಾಯ್ಡ್ ಮೊಬೈಲ್‍ನ್ನೇ ಖರೀದಿಸಿಕೊಂಡು ಇಂಟರ್ ನೆಟ್ ಮೂಲಕ ಬೇಕಾದÀ ಗೆಳೆಯರ ಸಂಘವನ್ನು ಸೇರಬಹುದು. ಯಾರು ಯಾರನ್ನು ಬೇಕಾದರೂ ಸಂಧಿಸಬಹುದು.
ಇಲ್ಲಿಯವರೆಗೆ ಎಲ್ಲವೂ ಚೆನ್ನಾಗೆ ಇತ್ತು. ಯಾವಾಗ ಚಿಲ್ಲರೆ ಖಾಸಿಗೂ ಇಂಟರ್‍ನೆಟ್ ದೊರೆಯಲು ಪ್ರಾರಂಭವಾಯ್ತೋ ಅಲ್ಲಿಂದಲೇ, ಏನೋ ಒಂದು ಯಡವಟ್ಟು ಪ್ರದೇಶಕ್ಕೆ ನಾವು ಕಾಲಿಟ್ಟುಬಿಟ್ಟೆವು ಏನಿಸಿದಂತಾಗಿದೆ. ಮುಖ್ಯವಾಗಿ ಇಂದಿನ ಯುವ ಜನತೆ ಈ ಸೋಷಿಯಲ್ ಮೀಡಿಯಾಗಳಿಂದ ಹಾದಿ ತಪ್ಪುತ್ತಿದ್ದಾರೆ. ಕೋಮುವಾದದ ದಳ್ಳುರಿಗೆ ಈಡಾಗುತ್ತಿದ್ದಾರೆ. ತಮ್ಮ ನಿಲುವನ್ನು ವಿರೋಧಿಸುವವರ ಧ್ವೇಷ ಕಟ್ಟಿಕೊಳ್ಳುತ್ತಿದ್ದಾರೆ. 
         ಒಂದು ಅಂದಾಜಿನ ಪ್ರಕಾರ, ಭಾರತದಲ್ಲಿ ದಿನದಿಂದ ದಿನಕ್ಕೆ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಒಂದು ವರ್ಷದಲ್ಲಿ ನಗರ ಪ್ರದೇಶಗಳಲ್ಲಿ ಸಾಮಾಜಿಕ ಬಳಕೆದಾರರ ಸಂಖ್ಯೆ ಶೇ. 35ರಷ್ಟು ಹೆಚ್ಚಾಗಿದೆ ಎಂದು ಇಂಟರ್ ನೆಟ್ ಆ್ಯಂಡ್ ಮೊಬೈಲ್ ಅಸೋಸಿಯೇಷನ್ ಇಂಡಿಯಾ ಮತ್ತು ಐಎಂಬಿಆರ್‍ಬಿ ಇಂಟರ್ ನ್ಯಾಷನಲ್ ತನ್ನ ವರದಿಯಲ್ಲಿ ಹೇಳಿದೆ.
ಇಂದು ಒಂದಲ್ಲ ಒಂದು ಸಾಮಾಜಿಕ ಜಾಲತಾಣ ನಮ್ಮ ಜೀವನದ ಅವಿಭಾಜ್ಯ ಅಂಗದಂತೆಯೇ ಆಗಿಬಿಟ್ಟಿದೆ. ನಾವು ಕೆಲಸ ಮಾಡುವ ಸ್ಥಳದಲ್ಲೂ ಸೋಷಿಯಲ್ ಮೀಡಿಯಾ ಬಳಸದೇ ಸುಮ್ಮನಿರಲು ಆಗುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಅಡಿಕ್ಟ್ ಆಗಿಬಿಟ್ಟಿದ್ದೇವೆ. ಬ್ಲೂ ಕೋಟ್ ಸಂಸ್ಥೆಯ ಸಮೀಕ್ಷೆ ಪ್ರಕಾರ, ವಿಶ್ವದಾದ್ಯಂತ ಪ್ರತೀ 5 ಉದ್ಯೋಗಿಗಳಲ್ಲಿ  ಇಬ್ಬರು ಸೋಷಿಯಲ್ ಮೀಡಿಯಾ ಬಳಕೆ ಮಾಡುತ್ತಾರಂತೆ. ಅಂದರೆ ಕೆಲಸದ ಸ್ಥಳಗಳಲ್ಲಿ ಶೇ.40 ರಷ್ಟು ಮಂದಿ ಸೋಷಿಯಲ್ ಮೀಡಿಯಾ ಬಳಸುತ್ತಾರೆ ಎಂದಾಯ್ತು.
ನಿಜಕ್ಕೂ ಇದು ಅಘಾತಕಾರಿ!. ‘ಅತಿಯಾದರೆ ಅಮೃತವೂ ವಿಷ’ ಎಂಬಂತೆ ನಮಗೆ ಸಾಮಾಜಿಕ ಜಾಲತಾಣಗಳಿಂದ ಎಷ್ಟು ಉಪಯೋಗವಾಗುತ್ತಿದೆಯೋ ಅಷ್ಟೇ ಕೆಡುಕೂ ಇದೆ. ಒಂದು ಸಣ್ಣ ಮಾಹಿತಿಯನ್ನೇ ಎತ್ತಿಕೊಂಡು ಕ್ಷಣಮಾತ್ರದಲ್ಲಿ ಜಗತ್ತಿನ ಮೂಲೆ ಮೂಲೆ ತಲುಪುವಿಕೆಯನ್ನು ಕಾಣಬಹುದಾದ ಉಪಯೋಗವಿರುವ ಇಂಟರ್‍ನೆಟ್ ಅದೆಷ್ಟೋ ಯುವ ಜನಾಂಗವನ್ನು ದಾರಿ ತಪ್ಪಿಸುತ್ತಿದೆ. ಹಲವು ಅತೀರೇಖತೆಗಳು, ಜನಾಂಗೀಯ ಘರ್ಷಣೆಗಳು, ಮಾನ ಹರಣಗಳು, ಅಶ್ಲೀಲತೆಯ ಗುಂಗು ಇತ್ಯಾದಿಗಳಿಗೆ ಎಡೆಯಿಕ್ಕುತ್ತಿದೆ. ಇಂದು ಅನೇಕರು ಸೋಷಿಯಲ್ ಮೀಡಿಯಾಗಳನ್ನೇ ಬ್ಯುಸಿನೆಸ್ ಆಗಿ ಕನ್‍ವರ್ಟ್ ಮಾಡಿಕೊಂಡು ಹಲವರಿಗೆ ಹಣದ ಆಮಿಷವಿತ್ತು ಅದೆಷ್ಟೋ ಭ್ರಷ್ಟತನಕ್ಕೆ, ಅನ್ಯಾಯಕ್ಕೆ, ಅತ್ಯಾಚಾರಕ್ಕೆ ನಾಂದಿ ಹಾಡಿಕೊಂಡಿದ್ದಾರೆ.
ಸಾಮಾಜಿಕ ಸೈಟ್‍ನಿಂದ ಯಾರು ಯಾರನ್ನು ಬೇಕಾದರೂ ಫ್ರೇಂಡ್ ಮಾಡಿಕೊಳ್ಳಬಹುದು, ಫ್ರೇಂಡ್ ಶಿಪ್ ಮುಂದೆ ಎಂತಹ ಕೆಟ್ಟ ಕೆಲಸಗಳನ್ನು ಮಾಡಿಸಬಹುದು. 
ಉದಾಹರಣೆಗೆ;
1. ಅವಳಿಗೆ ಅವನು ಯಾರೆಂದೇ ಗೊತ್ತಿರುವುದಿಲ್ಲ. ಸಾಮಾಜಿಕ ತಾಣದ ಮೆಸೇಜ್‍ನಿಂದ ಪರಸ್ಫರ ಬಾಂಧವ್ಯ ಬೆಳೆಸಿ, ಒಂದಿಷ್ಟು ದಿನ ಕಳೆದ ಮೇಲೆ ಈಕೆ ಅವನ ಹಗಲಾಸೆಗೆ ಮಾರು ಹೋಗಿ, ಯಾರೂ ಕಾಣದ ಗುಡ್ಡದ ಮೇಲೆ ಅತ್ಯಾಚಾರಗೊಂಡು ಅನಾಥೆಯಾಗಿ ಸತ್ತು ಬಿದ್ದಿದ್ದಾಳೆ.
2. ನಿಮಗೆ ನಿಮ್ಮಿಷ್ಟ ಬೆಲೆಯ ಸೈಟ್ ಮಾಡಿಸಿಕೊಡುತ್ತೇವೆಂದು ಪ್ರಚಾರಗಿಟ್ಟಿಸಿಕೊಂಡು, ಹಣ ಹೊಡೆದು ಪರಾರಿಯಾಗಿ ನಾಮ ಏಳೆದುಕೊಂಡವರೂ ಇದ್ದಾರೆ. 
  ಇಷ್ಟೇ ಯಾಕೆ ಮೊನ್ನೆ ಮೊನ್ನೆ ಯಾವುದೋ ಪತ್ರಿಕೆಯಲ್ಲಿ ಓದಿದ ನೆನಪು, ‘ಇದೀಗ ದೇವರ ದರ್ಶನ, ಪ್ರಸಾದವೆಲ್ಲವೂ ಇಂಟರ್‍ನೆಟ್‍ನಲ್ಲಿ ತೋರಿಸುತ್ತಿದ್ದಾರಂತೆ. ಜನ ಮನೆಯಲ್ಲೇ ದೇವರನ್ನು ನೋಡಿ ಬೇಡಿಕೊಳ್ಳುತ್ತಿದ್ದಾರಂತೆ ಆ ಬ್ಲಾಗ್ ನ ವೀವರ್ ಸಂಖ್ಯೆ ಲಕ್ಷದ ಗಡಿ ದಾಟಿದೆಯಂತೆ” ಇದಕ್ಕೆ ನಗಬೇಕೋ ಅಳಬೇಕೋ ನೀವೇ ಹೇಳಿ.
ಮುಖ್ಯವಾಗಿ ಇಂದಿನ ಮಕ್ಕಳು ಅತೀ ಹೆಚ್ಚು ಸಮಯವನ್ನು ಇಂಟರ್‍ನೆಟ್ ನೊಂದಿಗೆ ಕಳೆಯುತ್ತಿದ್ದಾರೆ. ಒಂದು ಕಡೆ ಓದು ಹಾಳಾದರೆ ಇನ್ನೊಂದು ಕಡೆ ಬಾಲ್ಯ ಜೀವನದ ಅತೀ ಅಮೂಲ್ಯ ಸಮಯವನ್ನು ಹಾಳುಗೆಡವಿಕೊಳ್ಳುತ್ತಿದ್ದಾರೆ. ಪೋಷಕರೇ ಪ್ಲೀಸ್, ನಿಮ್ಮ ಐಶ್ವರ್ಯ ನಿಮ್ಮ ಮಗನಿಗೆ ಮುಂದೆ ಉಪಯೋಗಿಸಿಕೊಳ್ಳಲು ಸಮಯ ಸಿಕ್ಕೆ ಸಿಗುತ್ತೆ. ಹಾಗಂತ ಈಗಲೇ ಮಕ್ಕಳ ಮಂಡೇಗೆ ಅನಾವಶ್ಯಕ ಎಲೆಕ್ಟ್ರಾನ್‍ಗಳ ಗೋಜು ಕೊಡಬೇಡಿ. ನೀವು ಅಷ್ಟೇ ಅವರೆದುರು ಸೋಷಿಯಲ್ ಮೀಡಿಯಾಗಳಲ್ಲಿ ಬ್ಯುಸಿಯಾಗಿ ಅನಾವಶ್ಯಕ ಕಾಲಹರಣ ಮಾಡಬೇಡಿ. ಯಾವುದೋ ಲೈಕ್ ಕಮೆಂಟ್‍ನಿಂದ ಬರುವ ಖುಷಿಗೆ ಮಾರುಹೋಗದೆ ಅದೇ ಖುಷಿಯನ್ನು ನಿಮ್ಮ ಮನೆ ಮಂದಿಯೊಂದಿಗೆ ಕಳೆಯಿರಿ.
           ಹೇಳಿದ ತಕ್ಷಣಕ್ಕೆ ಎಲ್ಲವೂ ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ. ನಮಗೆ ನಮ್ಮ ಜಾಗೃತಿ, ನಮ್ಮವರ ಕಾಳಜಿ ಇರಬೇಕು ಅಷ್ಟೆ. ಯಾವುದನ್ನು ಎಷ್ಟು ಬೇಕೋ ಅಷ್ಟು ಬಳಸಿಕೊಳ್ಳೋಣ. ಸೋಷಿಯಲ್ ಮೀಡಿಯಾ ಇಂದು ಜನರ ಹವ್ಯಾಸವಾಗಿ ಬೆಳೆಯುತ್ತಿದೆ. ಅದಕ್ಕೆ ಸಾಂಪ್ರದಾಯಿಕ ಮಾಧ್ಯಮಗಳ ಸುದ್ಧಿ ಹರಿವಿನಷ್ಟು ಪ್ರಭಾವ ಬೀರಲು ಇನ್ನೂ ತಂತ್ರಜ್ಞಾನದ ಪ್ರಸರಣೆಯ ದೃಷ್ಟಿಯಿಂದ ಸಾಧ್ಯವಾಗದಿದ್ದರೂ, ವಿದ್ಯಾವಂತರ ನಡುವೆ ಬಹಳಷ್ಟು ಬಳಕೆಯಲ್ಲಿದೆ. ದಿನನಿತ್ಯ ಈ ತಂತ್ರಜ್ಞಾನದಿಂದ ಅನೇಕ ಪಾಠಗಳನ್ನು ಕಲಿಯುತ್ತಿದ್ದೇವೆ, ಅದರ ಅನೇಕ ಮುಖಗಳ ದರ್ಶನವನ್ನೂ ಈಗಾಗಲೇ  ಕಂಡಿರುತ್ತೇವೆ. ಇನ್ನಾದರೂ ಎಷ್ಟು ಬೇಕೋ ಅಷ್ಟನ್ನು ಉಪಯೋಗಿಸಿಕೊಳ್ಳುತ್ತಾ, ಅನಾವಶ್ಯಕವಾಗಿ ಮೈದೊರವ ಸಮಸ್ಯೆಗಳ ಬಗ್ಗೆ ಎಚ್ಚರಿಕೆಯ ಹೆಜ್ಜೆಯಿಡುತ್ತಾ ಮುನ್ನುಗ್ಗೋಣ.

ಇದೂ ತಿಳಿದಿರಲಿ:
ಸದ್ಯಕ್ಕೆ ಪೋರ್ನ್ ವೀಕ್ಷಣೆಯ ವಿಷಯದಲ್ಲಿ ಭಾರತ ಟಾಪ್ 3 ಪಟ್ಟಿಯಲ್ಲಿದೆ. ಕಛೇರಿಯಲ್ಲಿ ಐಟಿ ವಿಭಾಗದವರ ಕಣ್ತಪ್ಪಿಸಿ ಹೊಸ ಅಪ್ಲೀಕೇಷನ್ ಬಳಕೆ ಮಾಡುವುದರಲ್ಲಿ ಭಾರತೀಯರಾದ ನಾವು ಸಿದ್ಧ ಹಸ್ತರು. ಶೇ. 30 ರಷ್ಟು ಭಾರತೀಯ ನೌಕರರು ಅಕ್ರಮವಾಗಿ ಅಪ್ಲೀಕೇಷನ್ ಯೂಸ್ ಮಾಡುತ್ತಾರಂತೆ. ಈ ವಿಷಯದಲ್ಲಿ ಸಿಂಗಾಪುರ ಮತ್ತು ಬ್ರಟನ್ ಮೊದಲೆರಡು ಸ್ಥಾನದಲ್ಲಿದೆ.

ಅಭಿವ್ಯಕ್ತ ಸ್ವಾತಂತ್ರ್ಯ ಎತ್ತಿ ಹಿಡಿಯುವ ಬೆಳವಣಿಗೆ:
ಇದೀಗ ಸಾಮಾಜಿಕ ಜಾಲತಾಣಗಳಲ್ಲಿನ ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತಾಗಿನ ಮಾಹಿತಿ, ಸಂದೇಶಗಳನ್ನು ಅಪರಾಧ ಎಂದು ಪರಿಗಣಿಸಲಾಗದು ಎಂದು  ಸುಪ್ರೀಂ ಕೋರ್ಟ್‍ಗೆ  ಕೇಂದ್ರ ಸರಕಾರವು ವಿವರಣೆ ನೀಡಿದೆ. ವ್ಯಕ್ತಿಯ ಅಭಿವ್ಯಕ್ತ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು ಸರ್ಕಾರ ಇಚ್ಚಿಸುವುದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಯು ದಾಖಲಿಸುವ ಅಭಿಪ್ರಾಯಗಳು ಅಪರಾಧವಾಗುವುದಿಲ್ಲ. ಆದರೆ, ಐಟಿ ಕಾಯ್ದೆಗಳು ಸೈಬರ್ ಅನ್ವಯವಾಗುತ್ತದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‍ಗೆ ತಿಳಿಸಿದೆ.

No comments:

Post a Comment