Saturday 1 October 2016

ಮೂರು ಕಣ್ಣ ಅಹೋರಾತ್ರ ...ಮೂರ್ಖನಲ್ಲ...

ಸಂಭ್ರಮ!.. 
ಆ ದಿನ ನನ್ನೊಳಗೊಂದು ಹೊಸ ಬಗೆಯ ಹರುಷದ ಸಂಭ್ರಮ. ಮನಸ್ಸು ಆ ವ್ಯಕ್ತಿಯನ್ನು ನೋಡಲು ತುಂಬಾ ದಿನದಿಂದ ಮಿಡಿಯುತ್ತಿತ್ತು. ಒಳಗಿದ್ದ ಒಂದಿಷ್ಟು ಭಾವಗಳು ಪ್ರೀತಿಯಲಿ ತುಡಿಯುತ್ತಿತ್ತು. ವೃತ್ತಿ ಜೀವನದಲ್ಲಿ ಅನೇಕ ನಟ-ನಟಿಯರು, ರಂಗಭೂಮಿ ಕಲಾವಿದರು, ಸಾಧನೆಯ ಶಿಖರವೆತ್ತಿರುವ ಸಾರಥಿಗಳು, ರಾಜಕೀಯ ನಾಯಕರು ಹೀಗೆ ಸಂದರ್ಶನಕ್ಕೆ ನನಗೆ ಬರಗಾಲವೇ ಇರಲಿಲ್ಲ ಮತ್ತು  ಅವರವರ ಪೂರ್ತಿ ಬಯೋಡೆಟಾವನ್ನು ವಿಶಾಲ ಓದುಗರಿಗೆ ಇದುವರೆಗೂ ಮುಟ್ಟಿಸುತ್ತಾ ಇರುವುದಕ್ಕೆ ಲೆಕ್ಕವೇ ಇರಲಿಲ್ಲ. ಅದೇನೋ ಗೊತ್ತಿಲ್ಲ!. ಹಿಂದಿನ ಎಲ್ಲಾ ಸಂದರ್ಶನಕ್ಕಿಂತಲೂ ಇದು ಭಿನ್ನ ಎನಿಸುತ್ತಿತ್ತು. ಕಾರಣ ಆ ದಿನ ನನ್ನೆದುರು ಸಂದರ್ಶನಕ್ಕೆ ಕೂರುವ ವ್ಯಕ್ತಿ ಅಂತಿಂತವರಾಗಿರಲಿಲ್ಲ. ಸಾಕ್ಷಾತ್ ದೇವಮಾನವ. ಈ ಹಿಂದಿನ ನನ್ನ ಎಲ್ಲಾ ಸಂದರ್ಶನವೂ ‘ಗೆದ್ದ’ಲಾದರೆ, ಸಂದರ್ಶನ ಮುಗಿಸಿ ಹೊರಬಂದಾಗ ‘ಇದ್ದಲಿನ ಪ್ರಭೆ’ ಎನ್ನಿಸಿತ್ತು.
ಗೊತ್ತಿಲ್ಲ!.. 
ಆ ದಿನ ಅವರನ್ನು ಭೇಟಿಯಾಗುವುದಿರಲಿ, ಮಾತನಾಡಲು ಸಮಯವೇ ಸಿಗುತ್ತದೆ ಅಂದುಕೊಂಡಿರಲಿಲ್ಲ. ಆಪ್ತರಾದ ಸಾವಣ್ಣ ಪ್ರಕಾಶನದ ವ್ಯವಸ್ಥಾಪಕ ಜಮೀಲ್‍ರವರಿಗೆ ಹಿಂದಿನ ದಿನವೇ ನಿಮ್ಮ ಕಛೇರಿಗೆ ಅವರೇನಾದರೂ ಬಂದರೆ ನನಗೆ ತಿಳಿಸಿ, ಸಂದರ್ಶಿಸಬೇಕೆಂದುಕೊಂಡಿರುವೆ ಎಂದು ಹಲುಬಿದ್ದೆ. ಅದು ನನ್ನ ಪುಣ್ಯವೋ, ನಿಮ್ಮ ಅದೃಷ್ಟವೋ ಗೊತ್ತಿಲ್ಲ, ಯಾರಿಗೂ ಸಮಯ ನೀಡದೆ, ಲೆಕ್ಕಾಚಾರ ಹಾಕಿ ಸಿಕ್ಕೇ ಸಿಗುತ್ತೇನೆ ಎಂದು ಮಾತನ್ನು ನೀಡದೆ, ಸದಾ ಸಾಗುತ್ತಿರುವ ಅವರು ‘ನಿನಗಾಗಿಯೇ ಈ ಸಮಯ ಕಣೋ, ದೇವರೇ ನಮ್ಮಿಬ್ಬರನ್ನು ಭೇಟಿಮಾಡಿಸಿದ. ನಾ ನಿನ್ನ ಅಭಿಮಾನಿ ಅಪ್ಪಿ’ ಎಂದು ಪ್ರೀತಿಯ ಕಂಗಳ್ಳಲ್ಲಿ, ಮಂದಾರದ ಮನಸ್ಸಲ್ಲಿ ನನ್ನ ಭರಮಾಡಿದಾಗ ಜಗತ್ತು ಗೆದ್ದ ಖುಷಿಯಲ್ಲಿ ಧಾವಿಸಿದ್ದು ಈ ಲೇಖನಕ್ಕೆ ಪೂರಕವಾಯಿತು.
ಹೌದು!., ಆ ವ್ಯಕ್ತಿ ಬೇರೆ ಯಾರೂ ಅಲ್ಲ!! ತನ್ನನ್ನು ತಾನು ಮೂರ್ಖ ಎಂದು ಕರೆದುಕೊಂಡು, ನಾನೇನು ಅಲ್ಲ, ಇವನು (ಮೂರು ಕಣ್ಣ) ಹೇಳಿದಂತೆ ನುಡಿವ ಪಾತ್ರಧಾರಿ ಎನ್ನುವ ‘ಅಹೋರಾತ್ರ’...
‘ಜ್ಞಾನವೆನ್ನುವುದು ಶ್ರೇಷ್ಠ ಆದರೆ ಧ್ಯಾನ ಅದಕ್ಕಿಂತ ಶ್ರೇಷ್ಠ’ ಎನ್ನುವ ಮಾತು ಭಗವದ್ಗೀತೆಯಲ್ಲಿದೆ. ಅಂತೆಯೇ ನನಗೆ ಇವರನ್ನು ಸಂದರ್ಶಿಸಿದಾಗ ಇವರು ಅವೆರಡಕ್ಕಿಂತಲೂ ಶ್ರೇಷ್ಠವಾಗಿದ್ದಾರೆಂದು ಅನಿಸಿತು. ಪ್ರತಿಯೊಬ್ಬರನ್ನು ಪ್ರಚೋದಿಸುವ, ಮಾತನಾಡಿಸುವ, ಉನ್ಮಾದಿಸುವ, ನಯ-ವಿನಯತೆಯ ಸರಳ ಸಜ್ಜನಿಕೆ ಇವನಿಗೆ ಹೇಗೆ ಬಂತೋ ನಾ ಕಾಣೆ!!. ಡಿ.ವಿ.ಜಿಯವರ ಮಾತಿನಂತೆ ‘ಹಳೆ ಬೇರನ್ನು ಇಟ್ಟುಕೊಳ್ಳೋಣ ಹೊಸ ಚಿಗುರು ಬದಲಿಸೋಣ’ ಎನ್ನುವ ತತ್ವ ಇವರದು.
ನಿಮಗೆಲ್ಲಾ ಗೊತ್ತಿರಬಹುದು ಬಹಳ ಇತ್ತೀಚೆಗೆ ‘ಮೂರ್ಖನ ಮಾತುಗಳು’ ಎನ್ನುವ ಪುಸ್ತಕ ಬಿಡುಗಡೆಯಾಗಿ ಎಲ್ಲೆಲ್ಲೂ ಅನೇಕಾನೇಕರು ಅದರ ಬಗ್ಗೆ ಮಾತನಾಡಿದ್ದರು. ಆ ಪುಸ್ತಕವನ್ನು ನೀವೊಮ್ಮೆ ಓದಿದರೆ ಇವನ್ಯಾರು?, ಅವನ್ಯಾರು?, ನಾನ್ಯಾರು? ನೀನ್ಯಾರು? ಇವನ ಅಂತರಂಗದ ಶಕ್ತಿಯೇನು?, ಬಹಿರಂಗದ ಆಸೆಗಳೇನು? ಆತ್ಮದ ಮಾತುಗಳೇನು? ಇವನ ನಡೆಯ ಗುಟ್ಟೇನು? ಹೀಗೆ ಎಲ್ಲವೂ ತಿಳಿಯಬಹುದು. 
ಈಗ ನನ್ನ ಮುಂದಿರುವ ಕನ್‍ಫ್ಯೂಷನ್ ಏನೆಂದರೆ ಇವರ ಬಗ್ಗೆ ಬರೆಯಲಾ!? ಇವರೊಳಗಿರುವ ಅವನ ಬಗ್ಗೆ ಬರೆಯಲಾ!? ಸಾಧನೆಗಳನ್ನು ಪಟ್ಟಿ ಮಾಡಲಾ!? ಇವರ ಪುಸ್ತಕದ ಬಗ್ಗೆ ಬರೆಯಲಾ!? ಇಲ್ಲಾ ಇವರ ಜ್ಞಾನಾರ್ಜನೆ ಮತ್ತು ಸಾಧನಾತೀತತೆಗಳ ಬಗ್ಗೆ ಬರೆಯಲಾ ಎನ್ನುವುದಾಗಿದೆ.

          ಎಲ್ಲವನ್ನು ಚ್ಯುತಿ ಬಾರದಂತೆ ನಿಮಗೆ ವಿವರಿಸಬೇಕು, ಅದು ಅವರದೇ ಮಾತುಗಳಲ್ಲಿ ವ್ಯಕ್ತವಾದಂತಿರಬೇಕು, ‘ಬೇಡ ಕಣೋ ಅಪ್ಪಿ’ ಎನ್ನುವ ಅವರ ಮಗುವಿನಂಥ ಭಾವಕ್ಕೆ ಋಣಿಕಾಂತಿ ನಾವಾಗಬೇಕು ಆದ್ದರಿಂದ ಅವರದೇ ‘ಮೂರ್ಖನ ಮಾತು’ಗಳ ದಾಟಿಯಲ್ಲಿ ಅವರೇ ಹೇಳಿದಂತೆ ನಿಮಗೆ ಭಟ್ಟಿ ಇಳಿಸುತ್ತೇನೆ. ಗುರುವರ್ಯಾ ತಪ್ಪಿದ್ದಲ್ಲಿ ಕ್ಷಮೆ ಇರಲಿ...
ಇವರ ಮೂಲ ಹೆಸರು ನಟೇಶ್ ಪೋಲಿಪಳ್ಳಿ. ಜಗಜ್ಜಾಹೀರವಾಗಿರುವುದು ‘ಅಹೋರಾತ್ರ’ ನಾಮಾಂಕಿತದಿಂದ. ‘ಅಹೋರಾತ್ರ’ ಎಂದರೆ ಹಗಲು ಮತ್ತು ಬೆಳಕನ್ನು ಪ್ರತಿನಿಧಿಸುವ ‘ಅಹೋ’ ಹಾಗೂ ರಾತ್ರಿ ಮತ್ತು ಕತ್ತಲನ್ನು ಪ್ರತಿನಿಧಿಸುವ ‘ರಾತ್ರ’ ಸೇರಿ ಸಂಪೂರ್ಣತೆಯ ಸಂಕೇತವಾಗಿ ‘ಅಹೋರಾತ್ರ’ವಾಯಿತು ಎನ್ನುತ್ತಾರೆ.
(ಮಾತಿನಲ್ಲಿ ‘ಇವನು’ ಎಂದು ಸಂಭೋದಿಸುವ ‘ಅಹೋರಾತ್ರ’ರ ಮಾತಲ್ಲೇ ಬರವಣಿಗೆಯನ್ನು ನಿಮ್ಮ ಮುಂದಿಡುತ್ತೇನೆ. ಆಗ ಅಂಕಣಕ್ಕೊಂದು ಅರ್ಥಬರಬಹುದು. -ಇಲ್ಲಿ ‘ಇವನು’ ಎಂದರೆ ಮೂರು ಕಣ್ಣ ಎನ್ನುವ ಅರ್ಥವೂ ಬರುತ್ತದೆ)
 ಇವನ ಬಾಲ್ಯವೇ ಇವನ ಆಧ್ಯಾತ್ಮಿಕ ಜೀವನಕ್ಕೆ ಅಡಿಪಾಯ. ತುಂಬಾ ಪುಟ್ಟ ಗ್ರಾಮವಾದ ಕೋಲಾರ ಜಿಲ್ಲೆಯ ಬಾಗೆಪಲ್ಲಿ ತಾಲೋಕಿನ ಪಾತಪಾಳ್ಯ ಎನ್ನುವ ಹಳ್ಳಿಯಲ್ಲಿ ಇವನ ಜನನವಾಗುತ್ತದೆ. ತಾತ ಸ್ವಾತಂತ್ರ್ಯ ಹೋರಾಟಗಾರರು. ಕ್ರೀಡೆ, ವಾಲಿಬಾಲ್ ಅಕಾಡೆಮಿ, ಸ್ವಾತಂತ್ರ್ಯ ಹೋರಾಟ ಇವುಗಳಲ್ಲೇ ಸದಾ ಕಾಲ ಕಳೆದ ಬಾಲ್ಯ ಜ್ಞಾನಿ. ಸುಮಾರು 32 ಬಾಗಿಲಿನ ದೊಡ್ಡ ಮನೆ. ಅಪ್ಪ ಕಷ್ಟಪಟ್ಟು ಮನೆಗೆ ದುಡಿಯುತ್ತಿದ್ದರು.ಮನೆಯ ಎಲ್ಲಾ ವಾತಾವರಣವನ್ನು ಅವರೇ ಸಂಭಾಳಿಸಬೇಕಾಗಿತ್ತು. ಆ ಸಮಯ ಇವನು ತನ್ನನ್ನು ತಾನೂ ಪೂರ್ಣ ಶರಣಾಗಿಸಿಕೊಂಡಿದ್ದು ಹೆತ್ತಮ್ಮನಿಗೆ ಮಾತ್ರಾ.
ಚಪ್ಪಲಿ ಹಾಕಿಕೊಳ್ಳುತ್ತಿರಲಿಲ್ಲ. ಅದರ ಅವಶ್ಯಕತೆಯೂ ಇರಲಿಲ್ಲ. ಪ್ರಕೃತಿ ಮಧ್ಯೆ ಹೊಲಗದ್ದೆಗಳಲ್ಲಿ ಓಡಾಡಿಕೊಂಡು ಬೆಳೆದವನು ಈತ. ಚಿಕ್ಕಂದಿನಲ್ಲೇ ಹರಿಕಥೆಗಳು, ಭುರ್ರ ಕತೆಗಳು, ಮಂದಿರದ ಉತ್ಸವಗಳೆಲ್ಲ ಇವನಿಗಿಷ್ಟವಾಗತೊಡಗಿತ್ತು. ಜೀವನದಲ್ಲಿ ಮನೆಗೋಸ್ಕರ ಬದುಕಬಾರದು, ಇದಕ್ಕೆ ಮೀರಿ ಬದುಕಬೇಕು ಅಂದುಕೊಳ್ಳತೊಡಗಿದನು. ಮನೆಯಲ್ಲಿ ಸಮೃದ್ಧಿ ಇತ್ತು. ತೋಟದ ತುಂಬೆಲ್ಲಾ ಇರುತ್ತಿದ್ದ ಮಾವು, ಉಗ್ರಾಣದ ತುಂಬೆಲ್ಲಾ ತುಳುಕುತ್ತಿದ್ದ ಧಾನ್ಯಗಳು ಇವನಿಗೆ ಹೊಟ್ಟೆಪಾಡಿಗಾಗಿ ಬದುಕಬೇಕು ಎನ್ನುವ ಆಸೆಗಳನ್ನೇ ತುಂಬಲಿಲ್ಲ.
ಓದು ಪ್ರಾರಂಭಿಸಿದಾಗ ತಾಯಿ, ‘ದೊಡ್ಡ ಆಫೀಸರ್ ಆಗು’ ಎಂದು ಹೇಳಲೇ ಇಲ್ಲ. ಚಿಕ್ಕಂದಿನಿಂದಲೂ ಕೂರಿಸಿಕೊಂಡು ಚಂದಮಾಮನ ಕತೆ ಹೇಳಿ ಇದೊಂದಿದ್ದರೆ ಸಾಕು ಜೀವನ ಅರಿಯಬಹುದು ಎಂದು ತಿಳಿ ಹೇಳ್ತಾ ಇದ್ರು. ಅದನ್ನೇ ಇವನು ಸೀರಿಯಸ್ಸಾಗಿ ತೆಗೆದುಕೊಂಡ. ಪ್ರತಿಯೊಂದು ಕಥೆಯಲ್ಲೂ ಜೀವನ ಸಿಕ್ತು. ಇವನಿಗೆ ಪ್ರಕೃತಿಯ ಸಹಜತೆಯನ್ನು ತಾಯಿ ಬಹಳ ಅಂದವಾಗಿ ತೋರಿಸಿದ್ದರು. ಹಾವಿನ ಪೊರೆ ಬಿಡುವುದು, ನವಿಲಿನ ನರ್ತನ, ಜೀವಿಗಳ ಮಿಲನ ಇತ್ಯಾದಿಗಳೆಲ್ಲವನ್ನು ತೋರಿಸಿ, ಬಿಡಿಸಿ ಹೇಳುತ್ತಿದ್ದರು, ‘ಫೇಲಾದರೆ ನೀನು ನನ್ನ ಜೊತೆ - ಪಾಸಾದರೆ ನಾನು ನಿನ್ನ ಜೊತೆ ಇದ್ದೀನಿ ಬಿಡೋ’ ಎಂದು ಧೈರ್ಯ ತುಂಬಿ ಸಹಜತೆಯ ಬದುಕಿಗೆ ದಾರಿ ಮಾಡಿದ್ದರು. 
ಶಾಲೆಯಲ್ಲಿ ಗುರುಗಳು ಇವನನ್ನೇ ಜಾಸ್ತಿ ಪ್ರೀತಿ ಮಾಡುತ್ತಿದ್ದರು. ‘ಇವನ ಜೊತೆ ವೈವಿಧ್ಯಮಯ ಪ್ರಶ್ನೆಗಳಿವೆ!, ಇವನು ಇಲ್ಲಿರಬಾರದು, ಬೇರೆ ಎಲ್ಲಾದರೂ ಕಳಿಸಿ’ ಅಂತಿದ್ರು, ಅಮ್ಮನ ಬಗ್ಗೆ ವಿಶೇಷ ಮಮತೆ ಹೊಂದಿದ್ದ ಇವ, ‘ಈ ಪ್ರಶ್ನೆಗಳೇ ನನ್ನನ್ನು ತಾಯಿಯಿಂದ ದೂರ ಮಾಡುತ್ತವೋ ಎನೋ’ ಎಂದು ಕೆಲವೊಮ್ಮೆ ಪ್ರಶ್ನೆಯನ್ನೇ ಕೇಳದೆ ಇರುತ್ತಿದ್ದ. ಕಾರಣ ಅಮ್ಮನಿಲ್ಲದೇ ಇರುವ ಧೈರ್ಯ ಇವನಿಗಿರಲಿಲ್ಲ. 
ಹೀಗೆ ಇವನ ಬಾಲ್ಯ ಜೀವನ ತುಂಬಾ ಉತ್ತಮವಾದ ಆಕಾರವಾಯಿತು. ಎಲ್ಲಾ ಜಾತಿ ಬೇಧಗಳನ್ನು ತೊರೆದು ನಿಂತಿತು. ‘ಪಾಸಾಗುವುದಕ್ಕೆ ಓದಬೇಡ ತಿಳಿದುಕೊಳ್ಳುವುದಕ್ಕೆ ಓದು’ ಎನ್ನುವ ಮನಸ್ಥಿತಿ ಇವನದಾಯಿತು. ಇವನ ತಾತನಿಗೆ ಜ್ಯೋತಿಷ್ಯ ಜ್ಞಾನವಿತ್ತು. 4ನೇ ತರಗತಿ ಇರುವಾಗಲೇ ತಾತ ಮಂದ ದೂರದೃಷ್ಟಿ ಹೊಂದಿದ್ದರಿಂದ ಜಾತಕಗಳನ್ನು ಇವನ ಕೈಯಿಂದಲೇ ಬರೆಸಲು ಆರಂಭಿಸಿದರು. ಅಲ್ಲಿಂದ ಜಾತಕಗಳನ್ನು ಬರೆಯುವ ಕಾಯಕ ಪ್ರಾರಂಭವಾಯಿತು.

ತಿಳಿದ ಹಾಗೆ ಮಾತಾಡುವ ಜಾಯಮಾನ ಇವನದಾಯ್ತು. ಅದೃಷ್ಟವೋ ಏನೋ ಎಂಬಂತೆ ಓದಿದ ಎಲ್ಲ ವಿಷಯಗಳು ಉತ್ತಮ ಅಂಕವನ್ನೇ ಹೊತ್ತು ಬಂದವು. ಒಳ್ಳೆಯ ಮಾರ್ಕ್ ಬಂದರೆ ಮಾರಕ ಎನ್ನುವ ಅಂಶವೂ ತಿಳಿಯಿತು. ಇಂಜೀನಿಯರಿಂಗ್ ಓದಲು ಸೀಟ್ ಸಿಕ್ತು. ಆದರೆ ಜನರನ್ನು ಓದಬೇಕೋ!?, ಇಂಜಿನಿಯರಿಂಗ್ ಓದಬೇಕೋ!? ಎನ್ನುವ ಪ್ರಶ್ನೆಗಳು ಇವನನ್ನು ಕಾಡತೊಡಗಿತು. ದಿನ ಮುಗಿಸುವಷ್ಟರಲ್ಲಿ ಆಧ್ಯಾತ್ಮದ ಸೆಳವು ಇವನನ್ನು ಓವರ್ ಟೇಕ್ ಮಾಡಿತು. ‘ನಾನು ಇದಕ್ಕೋಸ್ಕರ ಹುಟ್ಟಿಲ್ಲ, ನನ್ನಿಂದ ಬೇರೇನೋ ಆಗಬೇಕಿದೆ ಅಂದೆನಿಸಿ ಅಮ್ಮನ ಬಳಿ ಅತ್ತು ಹೇಳಿ’ ಅಮ್ಮನ ಪೂರ್ಣ ಹಾರೈಕೆಯೊಂದಿಗೆ ಗವಿ ಗಂಗಾಧರೇಶ್ವರ ದೇವಸ್ಥಾನಕ್ಕೆ ಹೋಗಿ ಕುಳಿತುಕೊಂಡು ಮಾತು ಆರಂಭಿಸುತ್ತಾನೆ. ಜನರ ಸೆಳೆವು ಆರಂಭವಾಗುತ್ತದೆ. ಅಂತೆಯೇ ಜನರ ಸಂಖ್ಯೆ ಜಾಸ್ತ್ತಿಯಾಗುತ್ತದೆ. ಕಠಿಣವಾದ ವಿಚಾರ, ದೇವರ ಪ್ರೀತಿ ಧ್ಯಾನ, ಭಗವದ್ಗೀತೆಯ ಓದು, ಸಾಹಿತ್ಯದ ಒಲವು ಹೀಗೆ ಎಲ್ಲವೂ ಇವನನ್ನ ಸೆಳೆಯುತ್ತದೆ.
ಮುಂದೆ ಈತ ಹೇಳಿದ್ದೆಲ್ಲಾ ನಿಜವಾಗುತ್ತಾ ಸಾಗಿತು. ಅಂದಿನ ದಿನಗಳಲ್ಲಿ, ಬರೇ ಮನುಷ್ಯರೊಡನೆ ಮಾತನಾಡುತ್ತಿದ್ದ ಇವ, ಮಾತು ಕಿರಣದ ಹಾಗೆ, ಪ್ರತಿಕಿರಣದ ಅವಶ್ಯಕತೆ ಅದಕ್ಕಿಲ್ಲ ಎಂದು ಅರಿತು ನಂತರ ಮಾತು ಮಾತಿನ ಮಾತಲ್ಲೇ ಮುಳುಗಿ ಹೋದ. ಇರುವೆಯೊಡನೆಯೂ ಮಾತು, ಕರುವಿನೊಡನೆಯೂ ಮಾತು, ಬಳ್ಳಿಯೊಡನೆಯೂ ಮಾತು, ಕಲ್ಲಿನೊಡನೆಯೂ ಮಾತು. ಅದೊಂದು ರೋಮಾಂಚನ ಅನುಭವ. ದೇವನೆಂದೂ ಮಾತನಾಡುವುದಿಲ್ಲ, ಅದೊಂದು ಬಯಸಿದಾಗೆಲ್ಲ ಓದುವಂತಹ ಪುಸ್ತಕ ಎಂಬುದು ತಿಳಿಯುತ್ತಲೇ ಹೋಯಿತು. ಜಗತ್ತಿಗೆ ಅದರ ಅರಿವನ್ನು ಸಾರಲು ಎದ್ದು ನಿಂತನು.
ಇವನಿಗೆ ಚಿಕ್ಕಂದಿನಿಂದಲೂ ಅಮ್ಮನೇ ಅಪಾರ ಧೈರ್ಯ. ಅಮ್ಮನಿಲ್ಲದಿದ್ದರೆ ನಾನಿರಲು ಸಾಧ್ಯವಿಲ್ಲವೆಂಬಂತೆ ಬದುಕುತ್ತಿದ್ದವನಿಗೆ ಒಮ್ಮೆ ದೇವಾಲಯದ ಬಳಿ ಕುಳಿತಿದ್ದಾಗ ಜ್ಞಾನೋದಯವಾಗಿತ್ತು. 
ಭದ್ರತೆ ಭಯದ ತಾತ್ಕಾಲಿಕ ವಿರಾಮ, ಭದ್ರತೆ ಇಲ್ಲದೆ ನಿರ್ಭಯತೆ ಪೂರ್ಣವಿರಾಮ, ಅದೇ ಮುಕ್ತಿ, ದೇಹ ಕಳಚಿದ ಆಕಾಶ. ಆವರಣವಿಲ್ಲದ ಸ್ವಾತಂತ್ರ್ಯ, ಗಡಿಯಿಲ್ಲದ ದೇಶ, ವಿದೇಶವೂ ಸ್ವದೇಶವೂ ಒಂದಾಗುವುದು. ಯುದ್ಧವಿಲ್ಲದಂತಾಗುವುದು. ದೇಹ, ದೇಶಗಳು ದೇವನಲ್ಲಿ ಲೀನವಾಗುವ ಕ್ರೀಯೆ, ಸಮ್ಯಕ್ಮುಕ್ತಿ, ಬಯಸುವಿಕೆಯಿಂದ ಹುಟ್ಟುವ ಮೊದಲ ವೈರಿ ಭಯ. ಅಹಂಕಾರದೊಂದಿಗಿನ ನಿರ್ಭಯತೆ ನಾಟಕವಷ್ಟೇ. ಅಹಂಕಾರ ತೊರೆದ ನಿರ್ಭಯತೆ ಸೌಜನ್ಯವಾಗುತ್ತದೆ. ಸೌಜನ್ಯ ನಿರ್ಭಯದ ಸರೋವರದಲ್ಲಿ ಅರಳುವ ಕಮಲ. ಭಯ ದುಃಖದ ತಾಯಿ, ದುಃಖವು ದೇಹ ದೇಶ ದೇವರನ್ನು ವಿಭಜಿಸುತ್ತದೆ. ಭಯ ನಿರ್ಮೂಲನೆಯ ಪ್ರಯೋಗಗಳು ಆವರಣಗಳನ್ನು ಭೇಧಿಸುತ್ತದೆ ಎಂಬುದನ್ನು ಅರಿತೇ ಬಿಟ್ಟ್ಟ. ಅಂದಿನಿಂದ ಭಯವಿಲ್ಲದೇ ಬದುಕಲಾರಂಭಿಸಿದ.
ಹೀಗೆ ಇವರ ಬದುಕು ಕರ್ನಾಟಕದಿಂದ ದೂರದ ಮುಂಬೈವರೆಗೂ ಚಲನೆ ಕಂಡು ಇಂದು ಮುಂಬೈನಲ್ಲೇ ವಾಸವಾಗಿ ತಾಯ್ನಾಡಿಗೆ ಆಗಾಗಾ ಬಂದು ಹೋಗುತ್ತಿದ್ದಾರೆ. ಆಧ್ಯಾತ್ಮ, ಧ್ಯಾನ, ಸಾಹಿತ್ಯ, ಸಂಸ್ಕøತಿ, ಓದು, ವಿಚಾರ-ವಿನಿಮಯ ಇತ್ಯಾದಿಗಳೆಲ್ಲದರಲ್ಲೂ ತಾನೊಬ್ಬ ನಿಷ್ಣಾತನಾದರೂ ಎಲ್ಲಿಯೂ ಯಾರ ಬಳಿಯೂ ಏನನ್ನೂ ತೋರಿಸಿಕೊಳ್ಳದೇ ಮಾಮೂಲಿಯಾಗಿಯೇ ನಡೆದುಕೊಂಡೆ ಹೋಗುತ್ತಾರೆ. ದುಡ್ಡಿಗಾಗಿ ಕಲಿಯುವ, ಮುನ್ನಡೆಸುವ ಅದೆಷ್ಟೋ ಜ್ಯೋತಿಷ್ಯ ಶಾಸ್ತ್ರ ಸಮಾಜದಲ್ಲಿಂದು ತಲೆಯೆತ್ತಿರುವುದನ್ನು ನಾವು ನೋಡುತ್ತಲೇ ಇದ್ದೇವೆ. ಆದರೆ ಇವರೆಂದು ಆ ಶಾಸ್ತ್ರವನ್ನು ಓದಿ ವಾಡಿಕೆ ಮಾಡಿಕೊಂಡವರಲ್ಲ ಮತ್ತು ಅದನ್ನು ಹಣಕ್ಕಾಗಿ ದುರುಪಯೋಗ ಪಡಿಸಿಕೊಂಡವರಲ್ಲ. ಬರಿಯ ಪ್ರೀತಿ ಬಿಟ್ಟರೆ ಯಾರಿಂದ ಏನನ್ನೂ ಬಯಸದ ಮಗುವಿನ ಮನಸು ಅವರದು. ಅವರ ಜ್ಞಾನಕ್ಕೆ, ಅವರಿರುವ ಗೌರವಕ್ಕೆ ಇಂದು ಬಂಗಲೆಯನ್ನೇ ನಿರ್ಮಿಸಿಕೊಂಡು ಐಷಾರಾಮಿಯಾಗಿ ಬದುಕಬಹುದು ಆದರೆ ಹತ್ತು ಮನೆಗಳನ್ನು ಬದಲಿಸಿದರೂ ಅವರಿಂದಿರುವುದು ಬಾಡಿಗೆ ಮನೆಯಲ್ಲೇ ಎಂದರೆ ನೀವು ನಂಬಲಸಾಧ್ಯ.
ಶೂನ್ಯತ್ವ, ಮಾನವ ಧರ್ಮ, ಭಗವಂತ ಎನ್ನುವ ಶಕ್ತಿ, ಪುರಾಣತೆಯ ಸ್ಪಷ್ಟನೆ, ದೇವ-ದೇಶ-ದೇಹ ಇವು ಮೂರರ ಸಂಬಂಧ ಇತ್ಯಾದಿಗಳೆಲ್ಲವೂ ಇವರಲ್ಲಿ ನಾವು ಕಾಣದ ಗೋಚರಗಳಾಚೆ ಮಿಡಿಯುತ್ತವೆ. ಪ್ರತಿ ಮಾತಲ್ಲೂ ನಯತೆ, ವಿನಯತೆ, ನಾನೇನೂ ಅಲ್ಲ, ಎಲ್ಲವೂ ಮೂರು ಕಣ್ಣಿನ ಸುತನೇ ಹೇಳುವವ ಎಂದೆನ್ನುವ ಅಹೋರಾತ್ರರು ನಾನು ಮೂರ್ಖ ಎನ್ನುತ್ತಲೇ ಜಗತ್ತಿಗೆ, ಜನರಿಗೆ ತಮ್ಮ ನುಡಿಗಳನ್ನು ನೀಡುತ್ತಲೇ ಸಾಗುತ್ತಿದ್ದಾರೆ. ಕನ್ನಡದ ಬಗ್ಗೆ ಅಪಾರ ಅಭಿಮಾನವೀಯುತ್ತಾ ಕಬೀರರಂತೆ ರಸಗವಳದ ಸಾಲುಗಳನ್ನು ನುಡಿಯುತ್ತಾ ಹೀಗೆ ಸಾಗುತ್ತಾರೆ.
ಅಂದು ಹೊರಟವ ಇವ...
ಎಲ್ಲಿಯೂ ನಿಲ್ಲಲಿಲ್ಲ...
ಮನೆಯನೆಂದೂ ಕಟ್ಟಲಿಲ್ಲ...
ಕೊನೆಯನಿನ್ನೂ ಮುಟ್ಟಲಿಲ್ಲ...


‘ವೃಕ್ಷ-ರಕ್ಷ’
‘ಮೂರ್ಖನ ಮಾತು’ಗಳು ಪುಸ್ತಕ ಬರೆದಾಗ, ಅದರ ಹಣ ನನಗೆ ಬೇಡವೆಂದು ಹಣವನ್ನು ಸಾವಣ್ಣ ಪ್ರಕಾಶಕರಿಗೆ ಹಿಂದಿರುಗಿಸುವ ಹೊತ್ತು, ಪ್ರಕಾಶಕ ಜಮೀಲ್ ಮತ್ತು ಅಹೋರಾತ್ರರಿಬ್ಬರು ಒಟ್ಟಿಗೆ ಯೋಚಿಸಿ ನಾನ್ ಮನಿ ಸಂಸ್ಥೆಯನ್ನು ಸ್ಥಾಪಿಸಿ ‘ವೃಕ್ಷ-ರಕ್ಷ’ ಎನ್ನುವ ಹೆಸರಿನೊಂದಿಗೆ, ಮನುಷ್ಯನ ಹೃದಯಕ್ಕೆ ಮತ್ತು ವೃಕ್ಷಕ್ಕೆ ನೇರ ಸಂಪರ್ಕ ಒದಗಿಸುವ ಹೊಸ ಯೋಜನೆಯನ್ನು ಪ್ರಾರಂಭಿಸಿ ಎಲ್ಲೆಲ್ಲೂ ವೃಕ್ಷದ ಬೀಜಾಂಕುರ ಮಾಡುವ ಕೆಲಸವನ್ನು ಮಾಡುವ ಯೋಜನೆಗೂ ಕೈ ಹಾಕಿದ್ದಾರೆ.
‘ವೃಕ್ಷ-ರಕ್ಷ’ದ ಚಿಹ್ನೆ ಹೇಳುವಂತೆ, 32 ಜನ, 16 ಜೋಡಿಗಳು ವೃಕ್ಷದ ಸುತ್ತುವರಿದಿದ್ದಾರೆ, ವೃಕ್ಷದ ಮೇಲೆ ಮಕ್ಕಳು ಆಟವಾಡುತ್ತಿದ್ದಾರೆ.

1 comment: