Friday 9 December 2016

ಭಾವದ ಮುಂಗಾರು ಮಳೆ...


             ಭಾವನೆಗಳು ಒಮ್ಮೊಮ್ಮೆ ನನಗೆ ತಂಪೆನಿಸುತ್ತವೆ. ನೆನಪುಗಳ ಲಾಲಿತ್ಯದಲ್ಲಿ ಮೀಯಿಸುತ್ತವೆ. ಭಾವನೆಗಳೇ ಹೊಸ ಭಾವವನ್ನು  ನೀಡುತ್ತವೆ. ಏದೆಯಾಳದಿಂದ ನೀರುಕ್ಕಿಸಿ, ಕಣ್ಣಲ್ಲಿ ಭಾಷ್ಫಾಂಜಲಿಯ ಒರತೆ ಉಕ್ಕಿಸುತ್ತವೆ. ಹೆಚ್ಚು ಜಾಗ ಪಡೆಯುವ, ಅತೀ ಹೆಚ್ಚು ಮೌಲ್ಯ ಪಡೆಯುವ, ಮುದ್ದಾಗಿ ಮುದ್ದು ಮಾಡಿಕೊಳ್ಳುವ, ಮೊದಲ ಪ್ರಾಶ್ತಸ್ತ್ಯ ಪಡೆಯುವ  ಮೊದಲಿಗ ಎಂದರೆ ಈ ಭಾವಾಂತರಂಗ... 

ಅದೇನೋ ಗೊತ್ತಿಲ್ಲ!!. ಮೊದಲಿನಿಂದಲೂ ಹಾಗೆ.., ನಾನೊಬ್ಬ ನಾನೇ!, ಆಗಿರುವುದಕ್ಕೆ ಇಷ್ಟ ಪಡುತ್ತೇನೆ. ಯಾರನ್ನೇ ಆಗಲಿ ಜಾಸ್ತಿ ಫಾಲೋ ಮಾಡಲ್ಲ!.. ಫಾಲೋ ಮಾಡಿದರೂ 50 ಪ್ರತಿಷತ ಮಾತ್ರಾ ಆಗಿರುತ್ತದೆ. ಯಾರನ್ನು ದೇವರೆನ್ನಲ್ಲ!.. ನನಗೆ ನಾನೇ ದೇವರೆನ್ನುವುದನ್ನು ಮರೆತಿಲ್ಲ. ದೇವರು ಎಲ್ಲಿಯೋ ಇದ್ದಾನೆ ಎನ್ನುವುದಕ್ಕಿಂತ ನಮ್ಮೊಳಗೆ ಇದ್ದಾನೆ ಎನ್ನುವ ತತ್ವ ನನಗೆ ಪದೇ ಪದೇ ಇಷ್ಟವಾಗುತ್ತೆ. ಎಲ್ಲಾ ಎಡಗೈಗೆ ವಾಚ್ ಕಟ್ಟಿದರೆ ನಾನು ಬಲಗೈಗೆ ಕಟ್ಟುತ್ತೇನೆ, ಬಿಕಾಸ್ ಟೈಮ್ ಶುಡ್ ಬಿ ರೈಟ್ ರೈಟ್... ಎಲ್ಲಾ ಎಡದಿಂದ ಬಲಕ್ಕೆ ತಲೆ ಬಾಚಿಕೊಂಡರೆ ನಾನು ಬಲದಿಂದ ಎಡಕ್ಕೆ ಬಾಚಿಕೊಳ್ಳುತ್ತೇನೆ. ಒಬ್ಬೊಬ್ಬನೇ ಎಲ್ಲೆಲ್ಲೋ ಅಲೆಯುತ್ತೇನೆ. ಸಂಜೆಯ ಸಮಯ ನದಿ ಪಕ್ಕ ಹೋಗಿ ಕೂರಲು ಇಷ್ಟ ಪಡುತ್ತೇನೆ. ಹಳೆ ಹುಡುಗಿಯ ನೆನಪಲ್ಲಿ ಮರುಗುತ್ತೇನೆ. ಹೊಸ ಹುಡುಗಿಗಾಗಿ ಮಿಡಿಯುತ್ತೇನೆ. ಪ್ರೇಮವನ್ನು ಅಂದವೆನ್ನುತ್ತೇನೆ, ಕಾಮವನ್ನು ಚಂದವೆನ್ನುತ್ತೇನೆ. ಯಾರಿಗೂ ಆಶ್ವಾಸನೆ ಕೊಟ್ಟು ಬದುಕೊಲ್ಲ, ಯಾರ ವಿಶ್ವಾಸದಲ್ಲೂ ಮುಳುಗೊಲ್ಲ. ಟೋಟಲ್ಲಿ ಭಿನ್ನ ವಿಭಿನ್ನವಾಗಿಯೇ ಇರುತ್ತೇನೆ. 

ಇದು ಹತ್ತು ವರ್ಷಗಳ ಹಿಂದಿನ ಭಾವನೆ ಇಂದು ಹೊಸ ಮನ್ವಂತರದಿಂದ ಮರುಕಳಿಸಿದ ಸಂದರ್ಭದಲ್ಲಿ ಬರೆಯುತ್ತಿರುವ ಅಂಕಣ. 

ನಾನಾಗ ಎಸ್ಸೆಸ್ಸೆಲ್ಸಿ ಮುಗಿಸಿ ಪಿ.ಯು.ಸಿ ಕಲಿಕೆಗೆ ನೆರೆದು ನಿಂತಿದ್ದೆ. ಆ ಸಂದÀರ್ಭ ಕನ್ನಡ ಚಿತ್ರರಂಗದಲ್ಲಿ ‘ಮುಂಗಾರು ಮಳೆ’ ಎನ್ನುವ ಹೊಸ ಬಗೆಯ ಹನಿ ಹನಿಯ ಪ್ರೇಮ್ ಕಹಾನಿ’ಹೊಸ ಮಳೆಯನ್ನೇ ಸುರಿಸಿತ್ತು. ಅದು ಸುಮಾರು ವರ್ಷಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ಬಹುದೊಡ್ಡ ಬ್ರೇಕ್ ಕೊಟ್ಟ ಸಿನಿಮಾ ಎಂದರೆ ತಪ್ಪಾಗಲಾರದು. ಪಟ್ಟಣದಿಂದ ಹಳ್ಳಿ ಹಳ್ಳಿಯವರೆಗೂ ಜನ ಆ ಚಿತ್ರವನ್ನು ಮುಗಿಬಿದ್ದು ನೋಡೋಕೆ ಚಿತ್ರ ಮಂದಿರದ ಕಡೆ ಹೋಗುತ್ತಿದ್ದದ್ದನ್ನು ನಾನು ಪೇಪರ್‍ಗಳಲ್ಲಿ ಓದಿ ತಿಳಿದಿದ್ದೆ. ನಮಗೆ ಆಗೆಲ್ಲಾ ಸಿನಿಮಾ ಅಂದರೆ ಏನು ಅನ್ನುವುದೇ ತಿಳಿದಿರಲಿಲ್ಲ. ಆದರೆ ‘ಮುಂಗಾರು ಮಳೆ’ ಸಿನಿಮಾ ಸೂಪರ್ ಇದೆಯಂತೆ, ಟಿಕೆಟ್ ಸಿಕ್ತಾನೆ ಇಲ್ವಂತೆ, ಹೌಸ್ ಫುಲ್ ಪ್ರದರ್ಶನ ಕಾಣ್ತಾ ಇದ್ಯಂತೆ ಎನ್ನುವ ಸಂದೇಶ ನಮ್ಮ ಊರಲ್ಲಿ ಓಡಾಡುತ್ತಿದ್ದದ್ದನ್ನು ನೋಡಿ, ನಾನು ಒಮ್ಮೆ ಆ ಸಿನಿಮಾವನ್ನು ನೋಡಬೇಕು ಅಂತ ಹಪಹಪಿಸಿದ್ದೆ. ಆದರೆ ಸಿನಿಮಾ ನೋಡಲು ಸುಮಾರು 35 ಕಿ.ಮೀ ದೂರದ ಕುಂದಾಪುರ ಎನ್ನುವ ತಾಲೋಕು ಪಟ್ಟಣಕ್ಕೆ ಹೋಗಿ ಅಲ್ಲಿ ಇದ್ದ ಚಿತ್ರಮಂದಿರದಲ್ಲಿ ನೋಡಬೇಕಿತ್ತೇ ಹೊರತು ಬೇರೆಲ್ಲೂ ಕಾಣಲು ಸಿಕ್ತಾ ಇರಲಿಲ್ಲ. ಅಷ್ಟು ದೂರ ಒಬ್ಬೊಬ್ಬರಿಗೆ ಹೋಗಲು ಮನೆಯಲ್ಲೂ ಬಿಡ್ತಾ ಇರಲಿಲ್ಲ... ಹಾಗೆಲ್ಲ ಸಿನಿಮಾಗೆ ಹೋಗಿದ್ದ ನೆನಪು ನನಗಿಲ್ಲ. ಆದರೆ ಅದೊಂದು ದಿನ ಕಾಲೇಜಿಗೆ ನೋಟ್ ಬುಕ್ ಖರೀದಿಸಬೇಕು ಎನ್ನುವ ಕಾರಣಕ್ಕಾಗಿ ಅಮ್ಮನ ಜೊತೆಯಲ್ಲಿ ಕುಂದಾಪುರಕ್ಕೆ ಹೋದ ನಾನು ಪಿಚ್ಚರ್‍ಗೆ ಹೋಗೋಣ್ವಾ ಅಮ್ಮಾ!!, ಚೆನ್ನಾಗಿದೆಯಂತೆ... ಸಂಜೆ ಮನೆಗೆ ಹೋಗೋಕೆ ಬಸ್ ಸಿಗತ್ತೆ... ನೋಡಿಯೇ ಹೋಗೋಣ ಎಂದು ಹಠಕ್ಕೆ ಬಿದ್ದೆ. ಅಮ್ಮನಿಗೂ ಅದೇನು ಅನಿಸಿತ್ತೋ ಗೊತ್ತಾಗಲಿಲ್ಲ. ಸರಿ ಹೋಗೋಣ... ಎಂದು ಚಿತ್ರಮಂದಿರದ ಕಡೆಗೆ ಹೆಜ್ಜೆ ಹಾಕಿದೆವು. 

ಉದ್ದ ಸಾಲು, ಬಹುಶಃ ಅಂತಹ ಸಾಲನ್ನು ಇಂದು ನಾ ಯಾವ ಚಿತ್ರಮಂದಿರದಲ್ಲೂ ಕಂಡಿಲ್ಲ. ಟಿಕೆಟ್‍ಗಾಗಿ ಅದೆಷ್ಟೋ ಜನ ಪಣತೊಟ್ಟು ನಿಂತಿದ್ದರು. ಮಕ್ಕಳು, ಹೆತ್ತವರು, ಲವರ್ಸ್‍ಗಳು ಹೀಗೆ ಎಲ್ಲರೂ ಲೈನ್‍ನಲ್ಲಿ ನಿಂತು ಸಾಯುತ್ತಿದ್ದರು. ನನಗೆ ಮೊದಲಿನಿಂದಲೂ ಈ ಸರತಿಯಲ್ಲಿ ನಿಲ್ಲುವುದೆಂದರೆ ಆಗುತ್ತಿರಲಿಲ್ಲ. ಅದಕ್ಕಾಗಿ ನಾನು ದೇವಸ್ಥಾನ ಹಾಗೂ ಸರ್ಕಾರಿ ಇಲಾಖೆಯಲ್ಲಿ ಕೊಡುವ ರೇಷನ್ ಸೆಂಟರ್‍ಗಳಿಗೆ ಹೋಗುತ್ತಲೇ ಇರಲಿಲ್ಲ. ಇಲ್ಲೂ ಅದೇ ಫೀಲ್ ಆಯ್ತು. ಉದ್ದ ಇದ್ದ ಸರತಿ ಸಾಲನ್ನು ನೋಡಿ ಭಯಪಟ್ಟು, ‘ಬೇಡ ಅಮ್ಮ ಇದೆಲ್ಲಾ ನಮಗೆ ಆಗಲ್ಲ, ಇಲ್ಲಿ ಟಿಕೆಟ್ ಕೂಡ ಸಿಗುವಂತೆ ಕಾಣುತ್ತಿಲ್ಲ. ಹೊರಟು ಬಿಡೋಣ ಬಾ’, ಎಂದು ವಾಪಾಸ್ಸು ಮನೆಗೆ ಹೊರಡುವ ಪ್ಲಾನ್ ಮಾಡಿದ್ದೆ. ಆದರೆ ಅಮ್ಮನಿಗೆ, ಇಷ್ಟು ದೂರ ಬಂದಿದ್ವಿ ನೋಡೇ ಹೋಗೋಣ ಬಿಡು ಎನ್ನುವ ಧೃಡಕಾಯ ಮನದಲ್ಲಿತ್ತು. ನೋಡೋಣ ಇರು. ಎನ್ನುತ್ತಿರುವಾಗಲೇ ಫಸ್ಟ್ ಕ್ಲಾಸ್ ಟಿಕೆಟ್ ಸೋಲ್ಡ್ ಔಟ್ ಎನ್ನುವ ಮಾತು ಕೌಂಟರ್ ನಿಂದ ಕೇಳಿಬಂತು. ಆದರೂ ಅಮ್ಮ ಇಷ್ಟು ಹೇಳುತ್ತಿದ್ದಾಗ ನಾನು ಟಿಕೆಟ್ ತಗೊಂಡು ಬಂದಿಲ್ಲ ಅಂದ್ರೆ ಸರಿಹೋಗುತ್ತಾ ಎಂದು ಸೆಕೆಂಡ್ ಕ್ಲಾಸ್ ಟಿಕೆಟ್‍ಗೆ ಟ್ರೈ ಮಾಡಿದೆ. ಅಂತೂ ನಿಂತು ನಿಂತೂ ಟಿಕೆಟ್ ಸಿಕ್ಕೆ ಬಿಡ್ತು.

ಸಿನಿಮಾ ನೋಡಿ ಹೊರ ಬಂದ್ವಿ. ಆವತ್ತಿಗೆ ಆ ಸಿನಿಮಾ ಅಷ್ಟೇನೂ ತಲೆಗೆ ಹೋಗದಿದ್ದರೂ ಅದೊಂದು ಅದ್ಭುತ ಸಿನಿಮಾ ಓಳ್ಳೆಯ ನಿರ್ದೇಶನ, ನಟನೆ ಇರುವ ಚಿತ್ರವೆನ್ನುವುದು ಕೆಲವು ದಿನಗಳ ಬಳಿಕ ಮನನವಾಗಿತ್ತು.

ಆದರೆ ಇಂದು ಹತ್ತು ವರ್ಷದ ಬಳಿಕ ಮತ್ತೆ ಮುಂಗಾರು ಮಳೆ-2 ಬಂದಿದೆ... ದೈವಲೀಲೆ ಎಂಬಂತೆ ಅಂದು ಊರಿನಲ್ಲಿದ್ದ ಅಮ್ಮ ಬೆಂಗಳೂರಿಗೆ ಬಂದಿರುವ ಕಾರಣ ಈ ಸಿನಿಮಾಗೆ ಅಮ್ಮನನ್ನು ಕರೆದುಕೊಂಡು ಹೋಗುವ ಸುಸಮಯ ನನಗೆ ಬಂದಿರುವುದು ಭಾವಗಳ ಅದೃಷ್ಟೋ ನನ್ನ ಅದೃಷ್ಟವೋ ತಿಳಿಯದೇ ಖುಷಿಪಟ್ಟೆ. ವಿಷಯ ಸಿಂಪಲ್ ಆದರೆ ಭಾವಗಳ ಗರಿಗೆದರುವಿಕೆ ಒಮ್ಮೊಮ್ಮೆ ವೆರಿ ಇಮೋಷನಲ್ ಆಗುವ ಛಾನ್ಸಸ್ ಕೂಡ ಇರುತ್ತವೆ ಎನ್ನುವ ಮಾತು ನಿಜ. ಅಂದು ಪುಟ್ಟ ಹಳ್ಳಿಯಲ್ಲಿ ಏನೊಂದು ತಿಳಿಯದೇ ಪರದೆ ಮುಂದೆ ಕುಳಿತಿದ್ದ ಆ ದಿನಗಳಿಗೂ, ಇಂದು ಅಂದರೆ 10 ವರ್ಷದ ಬಳಿಕ ಕುಳಿತಿರುವ ಈ ದಿನಮಾನಸಗಳಿಗೂ ಅಜಗಜಾಂತರ ವ್ಯತ್ಯಾಸ ಕಾಣುತ್ತಿದೆ. ಮೊದಲೆಲ್ಲ ಸಿನಿಮಾ ನಟರನ್ನು ನೋಡುವುದೇ ಒಮದು ಮಹತ್ಕಾರ್ಯದಷ್ಟೂ ಸಂಭ್ರಮವಾಗಿತ್ತು. ಆದರೆ ಇಂದು ಅವರೆದುರೆ ಕುಳಿತು ಗಂಟೆಗಟ್ಟಲೇ ಹರಟಿ ಕಾಫಿ,ಟೀ ಕುಡಿದು ಬರುವ ನನಗೆ ಸಿನಿಮಾ, ಶೂಟಿಂಗ್ ಇತ್ಯಾದಿಗಳ ನಂಟನ್ನು ತೋರಿಸಿಕೊಟ್ಟಿದೆ. ಅಂದು ಏನೊಂದು ಭಾವವಿರದೇ ಸಿನಿಮಾ ನೋಡಿದ್ದ ಅಮ್ಮಾ ಇಂದು ಎದೆಯಾಳದಲ್ಲಿ ಮುಂದೊಂದು ದಿನ ನನ್ನ ಮಗನೂ ಆ ಪರದೆ ಮೇಲೆ ಬರುವನೇನೋ!?,ಬಂದರೆ ಹೇಗೆ ಕಾಣುವನು!? ಇತ್ಯಾದಿ ಇತ್ಯಾದಿ ಆಸೆಗಳನ್ನು ಕಟ್ಟಿಕೊಂಡು ನೋಡಿದ್ದು ನನಗೂ ಕಣ್ಣಾಲಿ ತೇವಗೊಳಿಸಿತ್ತು.

ಅಮ್ಮ ನನಗೆ ಸಿಕ್ಕ ಒಳ್ಳೆಯ ದೇವರು. ಹೆಣ್ಣಿನ ಎಲ್ಲಾ ತನವೂ ನನ್ನಮ್ಮನಲ್ಲಿದೆ, ಹರೆಯದಲ್ಲಿ ಯಾವುದೋ ಹುಡುಗಿಯನ್ನ ಲವ್ ಮಾಡಿ ಅವಳಿಗೇನೋ ತಿನ್ನಿಸುವ ಹುಡುಗರನ್ನು ನೋಡಿದರೆ ಅವರಮ್ಮ ಏನು ಮಾಡುತ್ತಿರಬಹುದೆಂಬ ನೋವು ನನಗಾಗುತ್ತೆ. ಆದರೆ ನನ್ನಮ್ಮನಿಗೆ ಆ ನೋವೆಲ್ಲಾ ಏನೂ ಇಲ್ಲ. ನಾನು ಅವಳ ಉಪಸ್ಥಿತಿ ಎಲ್ಲ ಕಡೆಗಳಲ್ಲೂ ಕಂಡುಕೊಳ್ಳಲು ಇಷ್ಟ ಪಡುತ್ತೇನೆ. ಅವಳಿಗಾಗಿಯೇ ಮಿಡಿಯುತ್ತೇನೆ. ಸುಮಾರು ಜನ ತುಂಬಾ ಒಳ್ಳೆಯ ಮಗನನ್ನು ಹೆತ್ತಿದ್ದೀರಾ ಅಮ್ಮಾ ಎನ್ನುವ ಪ್ರಶಂಸೆಯ ಮಾತುಗಳನ್ನಾಡಿರುವುದನ್ನು ದೂರದಿಂದಲೇ ಕೇಳಿ ಖುಷಿ ಪಟ್ಟಿದ್ದೇನೆ.
ಬದುಕು ಸಿನಿಮಾ ಅಲ್ಲಾ. ಆದರೆ ಸಿನಿಮೀಯಾ ಆಗಬಹುದಲ್ವಾ!? ಆದರೆ ತಾಯಿ ಪ್ರೀತಿ ಎಂದೂ ಸಿನಿಮೀಯ ಅಲ್ಲ. ಪ್ರೇಮಕ್ಕೆ ಬೇರಿನ್ನಾವ ಅರ್ಥವೂ ಇಲ್ಲ. ಪ್ರತಿಯೋರ್ವನೂ ತಾನು ಯಾರನ್ನಾದರೂ ಪ್ರೀತಿಸಬೇಕೆಂದೂ, ಯಾರಿಂದಲಾದರೂ ಪ್ರೀತಿಯನ್ನು ಪಡೆಯಬೇಕೆಂದು ಅಪೇಕ್ಷಿಸುವನು...ಆದರೆ ತಾಯಿ ಪ್ರೀತಿ ಎಂದೂ ಅಂತಹ ಸಾಲಿಗೆ ಸೇರದು. ನೀವು ಪ್ರೀತಿಸಿ, ಪ್ರೀತಿಸದೆ ಇರೀ ಅದು ಎಂದೂ ಮಿಡಿಯುತ್ತಲೇ ಇರುತ್ತದೆ.

ಆಗೆಲ್ಲಾ ಟ.ವಿಗಳ ಹವಾ ಜೋರಿರಲಿಲ್ಲ, ಆಕಾಶಾಣಿಯ ಅಶರೀರ ವಾಣಿ ಕೇಳಿ ಖುಷಿಪಡುತ್ತಿದ್ದೆವು. ಅಂದು ಯಾವ ಪರಿಯೂ ಇಲ್ಲದೆ ಪರಿವೆ ಮೀರಿ ಆನಂದಿಸಿಕೊಳ್ಳುತ್ತಿದ್ದೆವು. ಅಂದು ಒಂದು ಸಿನಿಮಾ ನೋಡಬೇಕೆಂದರೆ 50 ರೂಪಾಯಿ ಹೆಚ್ಚಾಗುತ್ತಿತ್ತು. ಇಂದು 500  ರೂ ಕೂಡ ಕಡಿಮೆ ಆಗುತ್ತದೆ. ನಿಜಕ್ಕೂ ಒಮ್ಮೊಮ್ಮೆ ಕಣ್ಮುಚ್ಚಿ ಎಣಿಸಿ ಕುಳಿತರೆ ಹಳೆಯ ದಿನಗಳು ಹೊಸ ಆಯಾಮದಲ್ಲಿ ಮನಸ್ಸಿಗೆ ಉಲ್ಲಸಿತವಾಗುತ್ತವೆ. ನಾನು ಮೇಲೆ ಹೇಳಿದ ವಿಷಯ ಸಣ್ಣ ಸಿನಿಮಾಗೆ ಹೋಗಿದ್ದ ಸ್ಟೋರಿ ಅಷ್ಟೆ. ಆದರೆ ಅದರ ಹಿಂದಿನ ನೆನಪುಗಳನ್ನು ಹತ್ತು ವರ್ಷದ ಮೇಲೆ ಎಣಿಸಿಕೊಳ್ಳುವ ಮಜವಿದೆಯಲ್ಲ ಅದು ಇಂದು ಎಷ್ಟು ಕೋಟಿ ಕೊಟ್ಟರೂ ಸಿಗಲಿಕ್ಕಿಲ್ಲ. ನಿಮಗೆ ನಗು ಬರಬಹುದು ಆದರೆ ನನಗೆ ಅದಕ್ಕಿಂತ ದೊಡ್ಡ ವಿಚಾರ ಬೇರೊಂದಿದೆ ಎನಿಸುತ್ತಿಲ್ಲ. 

ಹೇಗೆ ರೂಪದೊಳಗೆ ಅರೂಪವಿದೆ, ದೃಶ್ಯದೊಳಗೆ ಅದೃಶ್ಯವಿದೆಯೋ ಹಾಗೆ ಪ್ರತಿಯೊಂದು ಸಮಯದ ಹಿಂದೆಯೂ ಅರಿಯದ ಭಾವವಿರುತ್ತದೆ. ಒಮ ಮನಸ್ಸು ಬಿಚ್ಚಿ ಹದಮೀರಿ ಹಳೆ ಹಾಡನ್ನು ಕಿವಿಗೆ ಸಿಕ್ಕಿಸಿಕೊಂಡು ಶೂನ್ಯನಾಗಿ ವಿರಮಿಸಲು ನಿಂತಾಗ ಅವೆಲ್ಲವೂ ಮತ್ತೆ ನಿನ್ನೊಳಗೆ ಬಂದು ಹೊಸ ಸಜ್ಜಿಕೆಯಲ್ಲಿ ನೃತ್ಯ ಮಾಡುವುದ ಖಂಡಿತ. ನೆನಪಿರಲಿ ಯಾವುದನ್ನೇ ಸ್ವೀಕಾರ ಮಾಡಿದಷ್ಟೂ ನಾವು ಮುಕ್ತರಾಗುತ್ತಾ ಸಾಗುತ್ತೇವೆ...ಆದ್ದರಿಂದ ನಿಮ್ಮೊಳಗಿನ ಭಾವನೆಗಳನ್ನು ಇಂದೇ ಎಡೆಯಿಲ್ಲದೇ ಸ್ವೀಕರಿಸಿ...ನಿಮ್ಮೋಳಗೆ ನೀವೂ ಮುಕ್ತರಾಗಿರಿ...


No comments:

Post a Comment