Friday 5 May 2017

ಪ್ರೇಮಾಯಣ...ಕವಿ ಕನವರಿಕೆ: 9


           ಅವಳೇ ಹಾದು ಹೋದಂತಾಯಿತು...
ಮೊನ್ನೆ ಮೊನ್ನೆ ನಾನೋದಿದ ಡಿಗ್ರಿ ಕಾಲೇಜ್ ಎದುರಲ್ಲಿ ಪಾಸಾಗುವಾಗ ಹಿಂಬದಿಯಲ್ಲಿ ಅದೇ ತಿಳಿಕಂಪು ಬಣ್ಣದ ಲಾಂಗ್ ಚೂಡಿಯ ಯುನಿಫಾರ್ಮ್ ತೊಟ್ಟ ಹುಡುಗಿಯೊಬ್ಬಳು ಚಕ್ಕನೆ ಹಾದು ಹೋದಾಗ ಎದೆಯಲ್ಲೇನೋ ಕಳವಳ, ಕಂಪು, ಬಣ್ಣ ಬಣ್ಣದ ವಿಚಿತ್ರ ವೇಷದ ಡೊಳ್ಳುಕುಣಿತ ತಾಳ ಹಾಕಿದಂತಾಗಿ ಮತ್ತೆ ಕಣ್ಣು ಮಿಟುಕಿಸದೇ ಅವಳೇಯೇನೋ ಎಂಬಂತೆ ಹಾದು ಹೋದವಳನ್ನೇ ಮಿರಿ ಮಿರಿ ದಿಟ್ಟಿಸಿ ನೋಡುತ್ತಾ ನಿಂತೆ... 

ಪಕ್ಕದಲ್ಲಿದ್ದ ಗೆಳೆಯ, ಲೋ..! ಅವಳು ನಿನ್ ಡೌ ಅಲ್ಲಪ್ಪಾ... ಅವಳಿಗ ಯಾರ ಹೆಂಡತಿಯಾಗಿ ಎಲ್ಲಿದ್ದಾಳೋ, ಅಷ್ಟಕ್ಕೂ ಅವಳ್ಯಾಕೆ ಇಲ್ಲಿಗೆ ಆ ಡ್ರೆಸ್ ಹಾಕೊಂಡ್ ಬರ್ತಾಳೆ, ಅವಳಿನ್ನೂ ಇಲ್ಲೇ ಕಲಿತಿರ್ತಾಳಾ, ನೀನು ಹೇಗೆ ಕಲಿತು ಹೋದ್ಯೋ ಹಾಗೆ ಅವಳು ಹೋಗಿದ್ದಾಳೆ ಆಯ್ತಾ...’ ಎಂದಾಗಲೇ ಹಳೆ ಸೆಳೆತದ ಬಲೆಯಿಂದ ಹೊರಬಂದೆ.

   ಇಂದಿಗೂ ಆ ಕಾಲೇಜಿನಲ್ಲಿ ಅದೇ ಯುನಿಫಾರ್ಮ್ ಕಂಪಲ್ಸ್‍ರಿ ವೇರ್ ಆಗುತ್ತಲೇ ಇದೆ. ಅಂದು ಉದ್ದ ಜಡೆ ಬಿಟ್ಟು, ಬಗಲಿಗೊಂದು ಬ್ಯಾಗ್ ತೊಟ್ಟು, ಹೈ ಹೀಲ್ಡ್ ನಡಿಗೆಯಲ್ಲಿ, ಊರೇ ಅವಳನ್ನು ಕಂಡರೂ ಅವಳು ಮಾತ್ರಾ  ಕಾಲಡಿಯನ್ನೇ ನೋಡುವಂತೆ ತಲೆ ತಗ್ಗಿಸಿಕೊಂಡು ಗೆಳತಿಯರ ಜೊತೆ ಸಾಗುತ್ತಿದ್ದ ಕ್ಷಣಗಳೆಲ್ಲ ಇಂದು ಮತ್ತೆ ಮನದಂಚಲಿ ಜನಿಸಿ ಆರ್ತನಾದ ಮಾಡಿದಂತಾಯ್ತು. ಆ ಚೆಲುವೆಯ ಪರಿಗೆ ನಾನಂತೂ ನನ್ನ ಸಂಗಾತಿ ಇವಳೇ ಎನ್ನುವಷ್ಟು ಫಿದಾ ಆಗಿದ್ದೆ.

     ಒಂದು ಉದ್ದನೆಯ ಚೂಡಿದಾರದ ವೇಲ್, ಒಂದೆರಡು ಬುಕ್ ಎದೆಗೊತ್ತಿಕೊಂಡು ಆಕೆ ಎದುರಲ್ಲಿ ಸುಳಿದಾಡಿದರೆ ಸಾಕು!!, ನಮ್ಮದು ಭೂತ ಹಿಡಿದ ಭಾವ. ನವಿಲಾಗಿ ನೋಡಿ ಮುಗುಳ್ನಕ್ಕರಂತೂ ಇಡೀ ಕಾಲೇಜು ನಂದೇ ಎನ್ನುವಷ್ಟು ಸಡಗರ ಸಂಭ್ರಮ. ಒಂದಿನ ಅವಳು ಕಾಲೇಜಿಗೆ ಬಂದಿಲ್ಲವೆಂದರೆ ಅದೇನೋ ಕಳೆದುಕೊಂಡಂತೆ ಸತ್ವವಿರುವ ಎಲ್ಲವೂ ಅಸತ್ವ ತಳೆದಂತೆ, ಹೃದಯ ಕಂಪನವೇ ಇಲ್ಲದಂತೆ ಅವಳಿಗಾಗಿ ಸಾಯುತ್ತ ಬದುಕುತ್ತಿರುವಂತೆ ಅನುಭವ ಮೇಳೈಸುತ್ತಿತ್ತು.

    ಇಂದು ಅವಳಿಲ್ಲ!. ಎಲ್ಲಿರುವಳೋ ತಿಳಿದಿಲ್ಲ!, ಆದರೂ ಆ ದಾರಿ, ಆ ಸವೆತ, ಆ ನೈಜತೆಯ ಕುರುಹು ಎಲ್ಲವೂ ಹಾಗೆಯೇ ಇದೆ. ಹಳೆ ಮೇಷ್ಟ್ರು, ಹೊಸ ಹುಡುಗ್ರು, ಹುಡುಗೀರು ಎಲ್ಲದರ ಸೋಂಕು ಲಲನೆಯಲ್ಲೇ ತೂಗುತ್ತಿದೆ... ಗರಿಗೆದರಿದ ಭಾವನೆಗಳು ಆಕೆಯನ್ನು ನೆನಸಿಕೊಳ್ಳುತ್ತಿದೆ ವಿಷಯವೆಂದರೆ ಆಕೆಗೆ ನನ್ನ ನೆನಪಿದೆಯೋ, ಅರಿವಿದೆಯೋ, ತಿಳಿವಿದಿಯೋ ಎನ್ನುವುದೇ ಯಕ್ಷಪ್ರಶ್ನೆಯಾಗಿ ಈ ಕ್ಷಣವೂ ಕಾಡುತ್ತಿದೆ...

No comments:

Post a Comment