Friday 5 May 2017

ಸ್ಯಾಂಡಿ...


ಎಸ್..! ಎಕ್ಸಾಕ್ಟ್ಲೀ ಒನ್ ಇಯರ್...
ಈ ಜನವರಿ 1ಕ್ಕೆ  ಸ್ಯಾಂಡಿಗೆ ಒಂದು ವರ್ಷವಾಯ್ತು... ಆದರೆ ನನಗೆ ಹಾಗನ್ನಿಸುತ್ತಾ ಇಲ್ಲ. ಮೊನ್ನೆ ಮೊನ್ನೆ  ಮನೆಗೆ ಬಂದಂತೆ ಇದ್ದಾನೆ. ಇಷ್ಟು ಬೇಗ ಒಂದು ವರ್ಷವಾಯ್ತು ಎಂದರೆ ನಂಬೋಕೆ ಆಗ್ತಿಲ್ಲ. ಆದ್ರೂ ನಿಜ ಒಂದು ವರ್ಷವಾಗಿದೆ!!. ವರ್ಷಗಳು ಹಾಗೇ ಅಲ್ವಾ!!, ಫಾರ್ ಎಕ್ಸಾಂಪಲ್  ನಮ್ಮನ್ನೇ ತಗೊಳ್ಳಿ , ಚಡ್ಡಿ ಹಾಕೊಂಡ್ ಆಡ್ತಾ ಇದ್ದ ಬಾಲ್ಯ ಜೀವನ ಮೊನ್ನೆ ಮೊನ್ನೆ ಮುಗಿತಷ್ಟೇಯೇನೋ ಅನ್ನಿಸುವಷ್ಟರ ಮಟ್ಟಿಗೆ ಸ್ಫೀಡ್ ಲಿಮಿಟ್ ಇಲ್ಲದೇ ದಿನಗಳನ್ನು, ತಿಂಗಳುಗಳನ್ನು, ವರ್ಷಗಳನ್ನು ಕಳೆದುಕೊಂಡಿದ್ದೇವೆ. ಮೊನ್ನೆ ನಿನ್ನೆ ಕಂಡಿದ್ದ ದಿನಗಳು ಆಗಲೇ ಒಂದು ವರ್ಷ ಆಯಿತು ಎಂಬ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿವೆ. ಹಾಗೆ ನಮ್ಮ ಸ್ಯಾಂಡಿ ವಯಸ್ಸು ಕೂಡ ಕಳೆದದ್ದೆ ಗೊತ್ತಾಗಲಿಲ್ಲ.

ಜಾಸ್ತಿ ಪ್ರೀತಿಸುವವರನ್ನು  ಬಿಟ್ಟಿದ್ದರೆ ದಿನಗಳು ವರ್ಷಗಳಾಗುತ್ತವೆ, ಹತ್ತಿರ ಇಟ್ಟುಕೊಂಡರೆ ವರ್ಷಗಳು ದಿನಗಳಾಗುತ್ತವೆ ಎನ್ನುತ್ತಾರಲ್ಲ ಹಾಗಾಯ್ತು ನನ್ನ ಕತೆ. ಸ್ಯಾಂಡಿ ಪ್ರತಿ ದಿನವೂ ನನ್ನ ಜೊತೆ ಇದ್ದ. ನನ್ನೆಲ್ಲಾ ನಡಿಗೆಗೆ, ಓಡಾಟಕ್ಕೆ, ಸಭೆ ಸಮಾರಂಭಕ್ಕೆ ಅವನೇ ಸಾರಥಿಯಾಗಿ ಕುದುರೆಯಂತೆ ಮುನ್ನುಗ್ಗಿ ಓಡುತ್ತಿದ್ದ, ಅದಕ್ಕೆ ನಾನು ಅವನಿಗೆ ಮುಂದಿನ ಕಾಲಿನ ಮೇಲ್ಭಾಗದ ರಕ್ಷಣಾ ಕವಚದಲ್ಲಿ ಕಾಲೆತ್ತಿ ಜಿಗಿಯುತ್ತಿರುವ ಕುದುರೆಯನ್ನು ಕಟ್ಟಿ ನೀನು ಸಾರಥಿ ಕಣೋ ಎನ್ನುವ ಬಿರುದನ್ನು ನೀಡಿದ್ದು ಬಿಟ್ಟರೆ ಮತ್ತಿನ್ನೇನು ಜಾಸ್ತಿ ಕೊಟ್ಟಿಲ್ಲ...

ಹಾಗೇ ನೋಡಿದರೆ ಸ್ಯಾಂಡಿ ಇಡೀ ಒಂದು ವರ್ಷದಲ್ಲಿ ಇಡೀ ಬೆಂಗಳೂರನ್ನು ಮಾತ್ರವೇ ಓಡಿದ್ದು. ಮತ್ತೆಲ್ಲೂ ಓಡಾಡೋಕೆ ಹೋಗಿಲ್ಲ. ಆಸೆಯಿದ್ದರೂ ಹೊಟ್ಟೆಪಾಡಿನ ಬದುಕು ಎಲ್ಲಿಗೂ ಕರೆಸಿಕೊಳ್ಳಲಿಲ್ಲ. ಅದನ್ನು ಲೆಕ್ಕಹಾಕಿದರೆ ಟೋಟಲ್ಲಾಗಿ ಬರೋಬ್ಬರಿ 13,000 ಕಿ.ಮೀ...ಎನ್ನುವ ನಿಖರತೆ ಮೀಟರ್ ತೋರಿಸುತ್ತಿದೆ. ನೀವು ಹೇಗೆ ಅಂದಾಜು ಹಾಕಿ ನೋಡಿದರೂ ಇಲ್ಲಿಂದ ಕನ್ಯಾಕುಮಾರಿಯವರೆಗೆ 9 ರಿಂದ 10 ಬಾರಿ ಹೋಗಿ ಬರಬಹುದು ಅಷ್ಟು ದೂರ ಓಡಾಡಿದ್ದಾನೆ. ಆದರೂ ಎಂದು ಅವÀನ ಉತ್ಸಾಹ ಸುಸ್ತಾಗಿಲ್ಲ, ಬೆಂಡಾಗಿಲ್ಲ.
ಸ್ಯಾಂಡಿನ ನಾನು ತುಂಬಾ ಇಷ್ಟ ಪಟ್ಟೆ ಕೊಂಡಿದ್ದು. ಅವನು ಬರುವಾಗ ಹೇಗೆ ಪಳ ಪಳ ಅಂತಿದ್ದನೋ ಇಂದಿಗೂ ಹಾಗೆ ಇರುವಂತೆ ನೋಡಿಕೊಂಡಿರುವುದು ನಾನವನನ್ನು ಎಷ್ಟು ಕೇರ್ ಮಾಡ್ತೀನಿ ಎನ್ನುವುದಕ್ಕೆ ಸಾಕ್ಷಿಯಾಗುತ್ತದೆ. ಇದು ನನಗೂ ಗರ್ವ ಹೆಮ್ಮೆ.

ತೀರಾ ಚಿಕ್ಕವನಿರುವಾಗ ಊರಲ್ಲೊಬ್ಬ ಶ್ರೀಮಂತ ವ್ಯಕ್ತಿ ಗುಡು ಗುಡು ಸದ್ದು ಮಾಡುತ್ತಾ ಬುಲೆಟ್ ಏರಿ ಬರುತ್ತಿದ್ದ ಅವನು ಮಾರು ದೂರದಲ್ಲಿ ಬರುವಾಗಲೇ ನಾವದನ್ನು ನೋಡಲು ಮನೆಯ ಪಕ್ಕದಲ್ಲೇ ಇದ್ದ ರಸ್ತೆ ಬದಿಗೆ ಓಡಿ ಬಂದು ನಿಲ್ಲುತ್ತಿದ್ದೆವು. ಅವನು ನಮ್ಮನ್ನ ನೋಡಿ ಇನ್ನೂ ಒಂದಿಂಚು ಜಾಸ್ತಿನೇ ಫೋಸ್ ಕೊಟ್ಟು ರಾಜನಂತೆ ಗಾಂಭೀರ್ಯದಲಿ ಮುಗುಳ್ನಗೆ ಬೀರುತ್ತಾ ಹೋಗುತ್ತಿದ್ದ. ಆದರೆ ಎಂದೂ ಇಂತಹ ಒಂದು ಬುಲೆಟ್‍ನ ಒಡೆಯ ನಾನೂ ಆಗತ್ತೇನೆ ಎನ್ನುವ ಯಾವ ಕನಸೂ ನನ್ನಲ್ಲಿರಲಿಲ್ಲ. ಅವನ್ನೆಲ್ಲಾ ಎಣಿಸಿದರೆ ನನ್ನಿಷ್ಟದ ಆ ಕನಸನ್ನು ನೆರವೇರಿಸಿದ ಹೆಮ್ಮೆ ಸ್ಯಾಂಡಿಗೆ ಸಲ್ಲುತ್ತದೆ... ಥ್ಯಾಂಕ್ಸ್ ಕಣೋ ಸ್ಯಾಂಡಿ.

ಕೇವಲ ನನಗಷ್ಟೇ ಅಲ್ಲ... ಮನೆಯಲ್ಲಿ ಎಲ್ಲಿರಿಗೂ ಅವನೆಂದರೆ ಇಷ್ಟ. ಸದಣ್ಣ ನಿತ್ಯಣ್ಣನಿಗೂ ಇವನ ಓಟ ಇಷ್ಟ. ಅವನೊಂತರ ಗಾಳೀಲಿ ನುಗ್ಗೋ ಬುಲೆಟ್ ಥರಾ... ಅವನ ಮುಂದೆ ಯಾವ ಸಹಪಾಠಿಯ ಆಟವೂ, ಓಟವೂ ನಡೆಯದು. ಕೇವಲ ನನಗೆ, ನನ್ನ ಮನೆಯವರಿಗೆ ಮಾತ್ರಾ ಯಾಕೆ, ಅನೇಕ ಹುಡುಗೀಯರು ಇವನಿಗೆ ಲೈನ್ ಹಾಕುತ್ತಾರೆ. ನಂಗೋತ್ತರಾ ಹೊಟ್ಟೆ ಉರಿಯುತ್ತೆ ಆದರೂ ತಾಳ್ಮೆ ವಹಿಸುತ್ತೇನೆ ಕಾರಣ ಸ್ಯಾಂಡಿ ನನ್ನೋನಲ್ವಾ ಅದಕ್ಕೆ. ಎಲ್ಲಾ ಗೊತ್ತಿದ್ದೂ ಗೊತ್ತಿದ್ದೂ ಒಂದಿಬ್ಬರೂ ಗೆಳತಿಯರು ನನಗೆ ಅನೇಕ ಬಾರಿ ಆಫರ್ ಮಾಡಿದ್ದರು. ಸ್ಯಾಂಡಿ ಜೊತೆ ನಾವೂ ಬರ್ತೀವಿ ಕರ್ಕೊಂಡು ಹೋಗು ಎಂದಿದ್ದರು. ಆದರೆ ನಾವ್ಯಾರಿಗೂ ಮಣೆ ಹಾಕೋದಿಲ್ಲ ಬಿಕಾಸ್ 'ನಾನು ಸ್ಯಾಂಡಿ ದೋಸ್ತಿ'...

ನಮ್ಮದೀಗ ಖಾಸಾ ಸಂಬಂಧ, ಮನಸ್ಸಿನ ಆಸೆಯ ಪ್ರಕಾರ ಕೊನೆಯವರೆಗೂ ಸ್ಯಾಂಡಿ ನನ್ನ ಜೊತೆಗೆ ಇರುತ್ತಾನೆ. ನನ್ನ ಹಲವು ಫ್ಯೂಚರ್ ಪ್ರಯಾಣಗಳಲ್ಲಿ ಸ್ಯಾಂಡಿಯೇ ಸಾರಥಿಯಾಗಿ ನನ್ನನ್ನು ಯಾವ ತೊಂದರೆಯೂ ಇಲ್ಲದೇ ಕರೆದುಕೊಂಡು ಹೋಗುತ್ತಾನೆ ಎನ್ನುವ ಕನಸು ಬಗಲಲ್ಲಿದೆ. ಈಗಾಗಲೇ ಸಾಕಷ್ಟು ಓಡಾಡಿದ್ದೀವಿ. ಆದರೆ ಯಾವತ್ತೂ ಸ್ಯಾಂಡಿ ಬೇಜಾರು ಮಾಡಿಕೊಂಡಿಲ್ಲ. ಒಮ್ಮೊಮ್ಮೆ ರಣ ರಣ ಬಿಸಿಲಲ್ಲಿ ನಿಲ್ಲಿಸಿ ಇಲ್ಲೇ ಇರು ಬೇಗ ಬರ್ತೀನಿ ಎಂದು ಹೇಳಿ ಹೋಗಿದ್ದಾಗಲೂ ಬೆಂಡಾಗದೇ ನಾನು ಬರುವವರೆಗೂ ಹಾಗೆಯೇ ನಿಂತು ನನ್ನ ಗೆಳೆತನಕ್ಕೆ ಋಣಿಯಾಗಿದ್ದೆಲ್ಲಾ ಏಣಿಸಿದರೆ ಅವನ ಮುಂದೆ ನನಗ್ಯಾರು ಅತೀ ಆತ್ಮೀಯರು ಇಲ್ಲ ಎನಿಸುತ್ತದೆ. ಇದನ್ನೆಲ್ಲಾ ನೋಡಿ ನನ್ನ ಕಣ್ಣಲ್ಲೂ ಭಾವನೆಯ ಕಣ್ಣೀರು ಬಂದಿದ್ದೂ ಇದೆ.

 ಅವನ ಆರೋಗ್ಯ ವರ್ಷದಲ್ಲಿ ಒಮ್ಮೆಯೂ ಕೆಟ್ಟಿಲ್ಲ, ಆದರೆ ಎರಡು ಬಾರಿ ಹಿಂ’ಗಾಲಿ’ಗೆ ಮೊಳೆ ಚುಚ್ಚಿ ಮುಂದೆ ಚಲಿಸಲಾರೆ ಎಂದು ಖಡಾಖಂಡಿತವಾಗಿ ಕುಳಿತುಬಿಟ್ಟಿದ್ದ. ಒಮ್ಮೆ ಉಸಿರಾಟದ ಸಮಸ್ಯೆ ತಲೆದೋರಿ ಮಧ್ಯೆ ಮಧ್ಯೆ ನಿಂತು-ನಿಂತು ಓಡಿದ್ದ. ಹೀಗೆಲ್ಲಾ ಆದಾಗ ತಡಮಾಡದೇ ಅವನಿಗೆ ಬೇಕಾದ ಚಿಕಿತ್ಸೆ ನೀಡಿ ಜಾಗೃತೆವಹಿಸಿ ಮತ್ತೆ ಚೇತರಿಸಿಕೊಳ್ಳುವಂತೆ ಮಾಡಿದ್ದೆ.  

ನನಗೀಗಲೂ ಗೊತ್ತು, ಸ್ಯಾಂಡಿ ಮೇಲೆ ಅನೇಕರಿಗೆ ಕಣ್ಣಿದೆ. ಅನೇಕರ ಕಣ್ಣೂ ಬಿದ್ದಿದೆ. ಆದರೆ ಸ್ಯಾಂಡಿ ಸ್ವಲ್ಫವೂ ಜಗ್ಗಿಲ್ಲ. ಅವನ ವರ್ಚಸ್ಸು, ಘನತೆ, ಮಿಡುಕಾಡೋ ಹೊಳಪು ಹಾಗೆ ಇದೆ. ಒಮ್ಮೆಯಂತೂ ನಡು ದಾರಿಯಲ್ಲಿ ಬಂದ ಕಾರ್‍ಗೆ  ಬುದ್ಧಿ ಹೇಳೋ ನೆಪದಲ್ಲಿ ತನ್ನ ರಕ್ಷಣಾ ಕವಚವಾದ ಗಾರ್ಡ್‍ನ್ನೇ  ಬಂಗಿಸಿಕೊಂಡು ಕಾರ್‍ನ ಮುಂಬಾಗವನ್ನೇ ಜಜ್ಜಿ ತನ್ನ ಕೋಪ ತೋರಿಸಿದ್ದ. ಆದರೆ ನನಗೇನೂ, ಕೊಂಚವೂ ನೋವು ಮಾಡದೇ ರಕ್ಷಣೆಯಲ್ಲೇ ಹರಿಹಾಯ್ದು ಸಮಾಧಾನವನ್ನು ಪಡೆದುಕೊಂಡಿದ್ದ.
ಅವನೊಂಥರ ಮುಗ್ಧ, ಏನೂ ಗೊತ್ತಿಲ್ಲ. ಅವನಿಗೆ ಹೊಟ್ಟೆಗೆ ಪೆಟ್ರೋಲ್, ಟೈಮ್ ಟು ಟೈಮ್‍ಗೆ ಸರಿಯಾದ ಜೀವನಾವಶ್ಯಕ ಸರ್ವೀಸ್ ಬಿಟ್ಟರೇ ಬೇರೇನೂ ಬೇಡ. ಆದರೆ ನನಗೆ ಅವನ ಆರೋಗ್ಯದ ಜೊತೆಗೆ ಅವನಂದವೂ ಇಂಪಾಟೆಂಟ್. ಅದಕ್ಕಾಗಿ ಅವನನ್ನು ಮನೆಗೆ ಕರೆದುಕೊಂಡು ಬಂದಿದ್ದ ಮೊದಲಲ್ಲೇ, ಅವನಿಗೆ ಬೇಕಾಗಿರುವ ಸಿಂಗಾರವನ್ನೆಲ್ಲಾ ಮಾಡಿಸಿದ್ದೆ. ಹಿತ್ತಾಳೆಯ ಓಲೆಗಳು, ಹಿಂದಿನ ಕೆಂಬಂಣ್ಣದ ದೀಪಕ್ಕೆ ಗಾಯವಾಗಬಾರದೆಂದು ಕಪ್ಪನೆಯ ಹೊದಿಕೆಯನ್ನು ಮುಂದಿನ ಚಕ್ರದ ಮೇಲೆ ಸಾರಥಿಯನ್ನು  ಹಾಕಿ ಅವನಂದವನ್ನು ಕಣ್ತುಂಬಿಕೊಂಡಿರುವೆ.

ನನಗೂ ಅಷ್ಟೇ ಒಂದಿನವೂ ಅವನ ಮೇಲೆ ಬೇಜಾರಾಗಿದ್ದಿಲ್ಲ. ಅವನು ಒಂದು ಸ್ವಲ್ಪ ಕೊಳಕ ಯಾಕೆಂದರೆ ದಿನಾ ಸ್ನಾನ ಮಾಡುವುದಿಲ್ಲ. ದೇಹತೂಕದಲ್ಲಿ ಆನೆ ಮರಿಯನ್ನೇ ಹೋಲುವಂತಿದ್ದರೂ, ಇನ್ನೂ ಪುಟ್ಟ ಮಗುವಿನ ಥರ ಸುಮ್ಮನೆ ನಿಂತು ಬಿಡುತ್ತಾನೆ. ಸ್ನಾನ ಕೂಡ ನಾನೇ ಮಾಡಿಸಬೇಕು. ನನಗೂ ಅವನನ್ನ ದಿನಾ ಸ್ನಾನ ಮಾಡಿಸೋಕೆ ಆಗಲ್ಲ ಅದಕ್ಕಾಗಿ ವಾರಕ್ಕೊಮ್ಮೆ ಟೈಮ್ ತಗೊಂಡು ಮೈಯನ್ನೆಲ್ಲಾ ತೊಳೆಸುತ್ತೇನೆ. ಒಮ್ಮೊಮ್ಮೆ ಸಮಯ ಇಲ್ಲದಾಗ 15 ದಿನಕ್ಕೊಮ್ಮೆ ಸ್ನಾನ ಮಾಡಿದರೂ ವಿಪರ್ಯಾಸವೇನಿಲ್ಲ.

ಇವನೊಂಥರ ನನ್ನ ಅರ್ಧಾಂಗಿ ಇದ್ದ ಹಾಗೆ. ಎಲ್ಲಾ ಕೆಲಸದಲ್ಲೂ ಇವನ ಕಾರ್ಯವೇ ಜಾಸ್ತಿ ಇರುತ್ತೆ. ಅದು ಸಂದರ್ಶನವಾಗಿರಬಹುದು, ಆಫೀಸ್ ಬಿಟ್ಟು ನನ್ನ ಪರ್ಸನಲ್ ಕೆಲಸವಾಗಿರಬಹುದು ಅಥವಾ ಯಾವ ಕಾರ್ಯಕ್ರಮಗಳೇ ಆಗಬಹುದು ಅದನ್ನೆಲ್ಲಾ ಆಯೋಜನೆ ಮಾಡಲು, ಭಾಗವಹಿಸಲು ನನ್ನನ್ನು ಕರೆದುಕೊಂಡು ಓಡಾಡುವವನು ಇವನೊಬ್ಬನೇ.

ಸ್ಯಾಂಡಿ ನನ್ನ ಬ್ಯುಸಿ ಬದುಕಿನ ಒಂದು ಭಾಗ. ಆದ್ದರಿಂದ ನನ್ನ ಹೆಸರಿನ ಅರ್ಧ ಹೆಸರನ್ನು ಅವನಿಗೆ ಕೊಟ್ಟು ಸ್ಯಾಂಡಿ ಎಂದು ಹೆಸರಿಟ್ಟಿದ್ದು. ಕಪ್ಪಗಿರಲಿ, ಕೊಳಚಾಗಿರಲಿ ಇವನು ಸದಾ ಮಿಡುಕುವ ಮಡಿವಂತನೇ ಆಗಿದ್ದಾನೆ. ಹಿ ಇಸ್ ಮೈ ಬೆಸ್ಟ್ ಫ್ರೆಂಢ್... ನಿನ್ನ ನನ್ನ ಸ್ನೇಹ ಹೀಗೆ ಇರಲಿ, ನಮ್ಮಿಬ್ಬರ ಭಾವ ಸದಾ ಬಳುಕುತ್ತಿರಲಿ, ಆರೋಗ್ಯ ಆಯುಷ್ಯ ಏರಡನ್ನು ಆ ಭಗವಂತ ನನಗಿಂತ ನಿನಗೆ ಜಾಸ್ತಿ ನೀಡಲಿ ಎನ್ನುತ್ತಾ ಕೊನೆಯದಾಗಿ ಹೇಳುತ್ತಿರುವೆ 'ವಿಶ್ ಯೂ ಹ್ಯಾಪಿ ಬರ್ತ್ ಡೇ ಕಣೋ'...

No comments:

Post a Comment