Tuesday 27 February 2018

ಧನ್ಯತೆಯ ವಿದಾಯ ನಿನಗೆ...

           
   8ಕ್ಕೂ ಅಧಿಕ ವರ್ಷದ ಕನಸದು, ಮುಂದೊಂದು ದಿನ ಕೈ ಹಿಡಿದರೆ ನಿನ್ನೆ ಹಿಡಿಯಬೇಕೆನ್ನುವ ಛಲವದು, ಮುಂಗಾಲಿನ ನನ್ನ ನಡೆಯ ಹಿಂದೆ ನಿನ್ನ ನಡೆಗೆ ದಾರಿ ತೋರಿ ಸಪ್ತಪದಿ ತುಳಿಸಿಕೊಂಡು ಮನೆಯ ಹೊಸ್ತಿಲ ಮೇಲೆ ಸೇರನ್ನಿಟ್ಟು ಅಕ್ಕಿ ತುಳಿಸಿ, ಮನೆ-ಮನೆತನದ ಬೆಳಕಿನ ಜೊತಗೆ ಈ ದೀಪನಿಗೂ ಪ್ರಜ್ವಲಿಕೆಯ ಬೆಳಕನ್ನಾಗಿಸಿಕೊಳ್ಳಬೇಕೆಂಬ ಕುರುಡು ಆಸೆಯದು, ಪರಿಸ್ಥಿತಿಯ ಗಾಳದಲ್ಲಿ ಮುಂದೊಂದು ದಿನ ಬರುತ್ತೆ ಆಗ ನೀ ನನ್ನ ಮದುವೆಯಾಗ್ತೀಯಾ ಎಂದು ಕೇಳೋಣವೆನ್ನುವ ಹೆವಿ ಕಾನ್ಫಿಡೆನ್ಸ್‍ನ ಕಂಪು ಅದು, ಶುರುವಾದಾಗಿನಿಂದ ಇಲ್ಲಿಯವರೆಗೂ ಮೈಗೆತ್ತಿಕೊಂಡ ಬರವಣಿಗೆಯಲ್ಲಿ ಮನವರಿಕೆ ಮಾಡುವೆ ಎನ್ನುವ ಅಮಾಯಕ ಗೀಚುದು, ನೀ ಎದುರು ಬಂದಾಗ ಒಳಗಿದ್ದ ಹೇಳಲಾರದ ತಳಮಳಗಳು ಒಟ್ಟಿಗೆ ಥಂಡಿಗೇರಿಸಿ ನಡುಗಿಸಿದ ನಲ್ಮೆಯದು, ದೂರಿಂದ ನಿನ್ನ ನೋಡಿ ಖುಷಿಪಡುತ್ತಿದ್ದ ಮನದಂದವದು, ಭಾವಗಳ ತೋಳ್ತೆಕೆಯಲ್ಲಿ ಅದೆಷ್ಟೋ ರಾತ್ರಿ ಕನಸಿನಲೇ ನಿನ್ನಿಯನಾಗಿ ರಾಜ್ಯವಾಳಿದ ಕುಬೇರ ಸುಖವದು, ನನ್ನೆಲ್ಲಾ ಸಾಧನೆ ಮುಗಿದ ಬಳಿಕ ನಿನ್ನೆದುರು ಬಂದಾಗ ಓಡಿ ಬಂದು ತಬ್ಬಿಕೊಳ್ಳುತ್ತಿಯಾ ಎನ್ನುವ ಆಶಾದಾಯಕದ ಕನಸದು, ಕಷ್ಟವಾಗಲಿ-ಸುಖವಾಗಲಿ ಸಿಕ್ಕೇ ಸಿಗುವೆ ಎಂದು ಅತಿಯಾಗಿ ಹಚ್ಚಿಕೊಂಡ ಆತ್ಮೀಯತೆಯದು...

           
ಸಾಕಾಗಿಲ್ಲ ಅನ್ನಿಸುತ್ತೆ!,, ಎಸ್... ಎಷ್ಟು ವರ್ಣಿಸಿದರೂ, ಎಷ್ಟು ಬರೆದರೂ, ಎಷ್ಟೆಲ್ಲಾ ಹಲುಬಿಕೊಂಡರೂ ಈ ಕ್ಷಣಕ್ಕೆ ಎಲ್ಲವೂ ಶೂನ್ಯ ಯಾಕೆಂದರೆ ನೀನಿಲ್ಲ... ಇನ್ಮುಂದೆ ನನ್ನ ತೋಳ್ತೆಕ್ಕೆಯಲ್ಲಿ ನೀನಿರುವುದಿಲ್ಲ.., ಹೌದು ನೀನಿರಲ್ಲ!..

           ನಿಜ! ನನಗೆ ಈ ಬರವಣಿಗೆ ಕಲಿಸಿದವಳೆ ನೀನಲ್ವಾ!? ಯಾರಿಗೆ ಯಾರು ಸ್ಫೂರ್ತಿಯಾಗುತ್ತಾರೋ ನಾ ತಿಳಿಯೇ!, ಆದರೆ ನನಗಂತೂ ನೀನೇ ಸ್ಪೂರ್ತಿ ಕಣೋ... ಅನೇಕರ ನಿರೀಕ್ಷೆಯ ಮುಂದೆ ಇಂದಿಲ್ಲಿ ನಾನು ರಹದಾರಿಯಲ್ಲಿ ಕ್ರಮಿಸಿ ಸಾಗುತ್ತಿರಬಹುದು ಆದರೆ ಒಮ್ಮೆ ಹಿಂದಿರುಗಿ ನೋಡಿದರೆ, ಅಕ್ಕಪಕ್ಕ ಇಣುಕಿ ನೋಡಿದರೆ ಸನಿಹ ಖಾಲಿ ಖಾಲಿ...  ಉಳಿದಿದೆ ಒಂಟಿಪಯಣದ ಜೋಲಿ...

          ಇನ್ನೇನು  ಮಾಡಲಾಗದು, ಎಲ್ಲವೂ ವಿಧಿಬರಹ..! ಆ ಬರಹದಲ್ಲಿ ನೀನೊಂದು ಪಾತ್ರ..! ಅನುಕ್ಷಣವೂ ಸನಿಹವೇ ಇರುತ್ತಿಯಾ ಅಂದುಕೊಂಡ ಅಕ್ಷರಗಳಿಗೆ ಪೂರ್ಣವಿರಾಮ. ಗೀಚಲ್ಲಿ ಕಂಡಿದ್ದ ಪಾತ್ರಗಳಿಂದ ಮರೆಯಾಗಿ ಮಾಪನವೇ ಇಲ್ಲದೆ ದೂರಾಗಿ ವಿಧಿಯಲ್ಲಿ ಬರೆದಿಲ್ಲ ಎಂದು ಸಾಲನ್ನು ನುಂಗಿ ಕೊನೆಗಾಣಿಸಿವೆ ಎಂದರೆ ನೀನೊಪ್ಪುತ್ತೀಯಾ!?

           
 ತಪ್ಪಿಲ್ಲ. ಆಗ ನೀನು ಪಿ.ಯು.ಸಿ  ಓದುತ್ತಿದ್ದೆ. ನನ್ನದು ಅದೇ ಪಿ.ಯು.ಸಿ ಸ್ಟಡಿಯಾದರೂ ಇಬ್ಬರದ್ದೂ ಬೇರೆ ಬೇರೆ ಕಾಲೇಜ್. ಆದ್ದರಿಂದ ಮನೆಯವರ ಪರಿಚಯ ಬಿಟ್ಟರೆ ನನಗೆ ನಿನ್ನ ಯಾವ ಒಳಪರಿಚಯ ಆಗಲಿ, ಹೊರ ಪರಿಚಯವಾಗಲಿ, ನಗುವಿನ ಪರಿಚಯವಾಗಲಿ ಇರಲೇ ಇರಲಿಲ್ಲ.

        ಒಂದು ಮಾತನ್ನು ಹೇಳುತ್ತೀನಿ ಕೇಳು.., ನನ್ನಯ ಪರೀಧಿಯ ಪುಸ್ತಕದಲ್ಲಿ ನೀನು ಯಾವಾಗಲೂ ಬೀಡು ಬಿಟ್ಟಿರೋ ಶಿಲಾಕಲ್ಲು. ಹತ್ತಾರು ಬಾರಿ ಮಾತನಾಡಿಸಬೇಕೆಂದರೂ, ಹೇಳಬೇಕೆಂದರೂ ಆಗದ ಒತ್ತಡಕ್ಕೆ ಸಿಲುಕಿದ ಮೂಖಪ್ರಾಣಿ ನಾನು. 

          ಸದ್ಯ ನಿನ್ನ ಕಾಲ್ತೊಳೆದು ಬೀಳ್ಕೊಡಬೇಕಾದ ಸಮಯ ನನ್ನಯ ಪಾಲಿಗೆ ಒದಗಿರುವುದು ಕಣ್ಣಂಚಲಿ ಹನಿ ನೀರು ಮೂಡಿಸಿದೆ.  ಚಿಂತೆಯಿಲ್ಲ!!, ಕೊನೆಯ ಮಾತೆನ್ನುವಂತೆ ನೀನಾಡಿದ ಒಂದೆರಡು ಮಾತೇ ನನ್ನಯ ಇಂಪಿನ ಬಾಳ್ವೆಯ ತೆಕ್ಕೆಯಲ್ಲಿ ಪದೆ ಪದೇ ಲಹರಿಯಾಗಿ ಹರಿಯುತ್ತಲೇ ಇದೆ. ಅದೆಂದಿಗೂ ಇರುತ್ತದೆ.

         ಅಳುವಿದೆ, ಬೇಜಾರಿಲ್ಲ ಅಪ್ಪಿ!.. ಎಲ್ಲಿದ್ದರೂ ಸುಖವಾಗಿರು... ಗಳೆತನಕ್ಕೆ ಪ್ರತಿ ಜನ್ಮವೂ ಜೊತೆಯಾಗಿರು...

           
ಅಂದು ನೀ ನನ್ನ ಕಣ್ಣಿಗೆ ಬಿದ್ದಾಗಲೂ ನಾನು ಶೂನ್ಯನಾಗಿದ್ದೆ, ನಡುವೆ ನಿನ್ನ ಪಡೆಯಬೇಕೆನ್ನುವ ಹಂಬಲದಲ್ಲಿ ಒಂದಿಷ್ಟು ಪಡೆದ ಸ್ವರ ಸ್ಥರದಲ್ಲಿದ್ದೆ. ಆದರೆ ಇಂದು ನೀ ಹೊರಡುವ ಸಮಯ ಬಂದಿದೆ.  ಆಶ್ಚರ್ಯವೆಂದರೆ ಗೊತ್ತಿಲ್ಲದೇ ಮತ್ತೆ ಶೂನ್ಯನಾಗಿ ಬಿದ್ದಿದ್ದೇನೆ!. ಚಿಂತೆಯಿಲ್ಲ!.. ಏಳು-ಬೀಳು ಬಂದರೆ ಬದುಕು ಗಡಸಾಗಿರುತ್ತೆ ಎಂದು ಹಿರಿಯರು ಹೇಳುತ್ತಾರೆ ಅದು ನಿಜವೂ ಕೂಡ. ಆದರೇನು ಮಾಡಲಿ ಅಂದೆಲ್ಲಾ ನೀ ನನ್ನೊಳಗೆ ಸ್ಫೂರ್ತಿ ಚಿಲುಮೆಯಾಗಿದ್ದೆ ಇಂದು ನೀನೇ ಇಲ್ಲದ ಶೂನ್ಯ ಸಂಪಾದನೆಯ ಬಾಳಲ್ಲಿ ಮತ್ತೆ ಎದ್ದೇಳುವುದು ಹೇಗೆ!?, ಏಳ್ತೀನಾ!?, ಬೀಳ್ತೀನಾ!?, ಸಾಯ್ತೀನಾ!? ಒಂದೂ ನಾ ಅರಿಯೆ...

"ಒಂದಂಕ್ಕಿ ಕಾಳಿಗೂ ನೀ ಬೇಕು ಊಟವಿಕ್ಕಲೂ,
ಪ್ರತಿ ಕ್ಷಣಗಳೂ ಕಾಯುತಿವೆ ನಿನ್ನಯ ಸೋಂಕಿಗೆ ಸೋಕಲು...
ಮೈ ರೋಮಗಳ ನಡುಗುವಿಕೆಗೆ ಭಯವಿದೆ ಇಂದಿಗೂ,
ನಲುಮೆಗಳು ಕೇಳುತಿವೆ ಇನ್ನ್ಹೇಗೆ ನಾ ಜೀವ ಪಡೆಯಲಿ ವೈಯಾರಿಸಲು...”
                                                                                                                             ಎಂದಿಗೂ ನಿನ್ನವ,
                                                         - ಸಂದೀಪ್ ಶೆಟ್ಟಿ ಹೆಗ್ಗದ್ದೆ

Monday 26 February 2018

ಮೌನ ಕೊರೆಯಿತು...



(ಹಾಯ್.., ಹೆಲೊ.., ನಮಸ್ಕಾರ ಪ್ರೇಮಿಗಳ ದಿನದ ವಿಶೇಷವಾದ ಪೇಮಾಯಣ ಕಾರ್ಯಕ್ರಮಕ್ಕೆ ಆತ್ಮೀಯವಾದ ಸ್ವಾಗತ ನಾನು ಸಂದೀಪ್ ಶೆಟ್ಟಿ ಹೆಗ್ಗದ್ದೆ...

ಕಳೆದ ತಿಂಗಳ ಧನ್ಯತೆಯ ವಿದಾಯದ ಮುಂದಿನ ಭಾಗ ಇದು...ಪ್ರೇಮಾಯಣ ಭಾಗ 2 ಮೌನ ಕೊರೆಯಿತು...ಕೇಳಿ ಕೇಳಿಸಿ... ನಿಮ್ಮಲ್ಲೂ ಈ ರೀತಿಯ ಪ್ರೀತಿ ಕಥೆಗಳಿದ್ದರೆ ನಮ್ಮ ವ್ಯಾಟ್ಸಾಪ್ ಸಂಖ್ಯೆಗೆ ಬರೆದು ಕಳಿಸಿ... ನೆನಪಿರಲಿ ಇದು ಸಿರಿ ಮೊಬೈಲ್ ಟಿವಿಯ ಪ್ರಸ್ತುತಿ
ನಮ್ಮ ವ್ಯಾಟ್ಸಾಪ್ ಸಂಖ್ಯೆ : 9611976709)



           
ಅದು ನನ್ನ  ಅವಳ ಕೊನೆಯ ಭೇಟಿ... ಇದು ಅವಳಿಗಾಗಿ ಅಂದುಕೊಳ್ಳುತ್ತಿರುವ ಕೊನೆಯ ಅಂಕಣ... ಇನ್ನೂ ಮುಂದೆಯೂ ಅಕ್ಷರಗಳ ಮೆರವಣಿಗೆ ನೀರಿನಂತೆ ಹರಿದರೆ ನಾನೇನು ಮಾಡಲಾಗದು...
ಮುದ್ದು ಗೆಳತಿ!! ನೀನೂ ಕೂಡ ಕ್ಷಮಿಸು ನನ್ನ, ಯಾಕೆಂದರೆ ಈ ಹಿಂದೆಯ ಅಂಕಣದಲ್ಲೂ ಧನ್ಯತೆಯ ವಿಧಾಯವೆಂದು ಬೀಳ್ಕೊಂಡು ಅದೇ ಕೊನೆಯದು ಎಂದು ಅರುಹಿಯೂ ಇನ್ನೊಂದು ಅಂಕಣ ನಿನ್ನ ಮುಂದಿಡುತ್ತಿರುವೆ... 

       ನಾನೇನ್ ಮಾಡ್ಲಪ್ಪಿ, ಆಗ್ತಿಲ್ಲ ನಂಗೆ... ನೀನೇನೆ ಹೇಳಿದರೂ, ಯಾರೇನೇ ಅರುಹಿದರೂ, ನೀ ನನ್ನೊಳಗೆ ಪ್ರತಿ ಸಲವೂ ಹೊಸಬಗೆಯ ತಲ್ಲೀನತೆ ಕೊಟ್ಟು ಮತ್ತೆ ಮತ್ತೆ ಬರೆಸುತ್ತಿರುವೆ... ಪ್ಲೀಸ್ ಅಪ್ಪಿ ಕ್ಷಮಿಸು... ಇದೊಂದು ಲೇಖನವನ್ನ ಒಡಲಿಗೆ ಅರ್ಪಿಸು...

   ಮೊದಲೇ ಅಂದುಕೊಂಡಂತೆ, ನಮ್ಮಿಬ್ಬರದೂ ಅದು ಕೊನೆಯ ಭೇಟಿ ಮಾಮೂಲಾಗಿ ಇಬ್ಬರಲ್ಲೂ ಯಾವ ಆಡಂಬರವಿಲ್ಲದಿದ್ದರೂ, ಆ ದಿನ, ಆ ಭೇಟಿ ನನಗೆ ಹೊಸ ಸಂಭ್ರಮ ಬಿತ್ತಿತ್ತು. ಅದರ ಮುಂದೆ ಯಾವ ಮನೋರಂಜನೆಯು ನಿಲ್ಲದು ಕಣೆ , ಅಂತಹÀ ಮೇಳೈಕೆ ಅದು. ಆ ಸಂಭ್ರಮ, ಆ ಏಕಾನತೆ, ಆ ಮೇಳೈಕೆ ನಿನಗೂ ಗೊತ್ತಿರಬಹುದು, ಕೇವಲ ನಿನಗೆ-ನನಗೆ ಮಾತ್ರಾ ಏನು ಮಹಾ, ಪ್ರೀತಿಸುವ ಪ್ರತಿಯೊಬ್ಬನಿಗೂ ಗೊತ್ತಿರುತ್ತದೆ...

     ಕೈ ನಡುಗುತಿದೆ, ಸ್ವರ ಕಂಪಿಸುತಿದೆ, ಬಟ್ಟೆ ಬರೆಯೆಲ್ಲಾ ಖಡಕ್ ಐರನ್ ಹಾಕೊಂಡು ಮೈಗೊತ್ತಿಕೊಂಡಿದೆ. ಎಂದೂ ಕನ್ನಡಿ ಕಾಣದ ಮುಖ, ಬಿಂಬದಲ್ಲಿ ಹೊಸತನವನ್ನು ಅರಸುತ್ತಿದೆ, ಲಲನೆಯ ಕೆನ್ನೆಗೆ ಕ್ರೀಮ್ ಬೇಕು ಎಂದು ಕೈ, ಎದುರಿದ್ದ ಮೇಕಪ್ ಕಿಟ್‍ನ್ನ ತಡಕಾಡಿದೆ, ಎಂದೂ ಇಲ್ಲದ ಕೊನೆಯ ಭರವಸೆ ಪ್ರೀತಿ ಅರುಹಲು ತುದಿಗಾಲಲ್ಲಿ ಕುಂತಿದೆ, ಅಕ್ಕಪಕ್ಕ ನೋಡಿದ್ದೆಲ್ಲಾ ಸುಂದರವಾಗಿ ಸವಿಯೆನಿಸತೊಡಗಿದೆ. ಎಕೋ ಏನೋ ಹೊಸಬಗೆಯ ಇತಿಹಾಸವೊಂದು ಸೃಷ್ಟಿಯಾಗಿ ಪುಟ ಸೇರುತ್ತೆ ಎನ್ನುವ ಖುಷಿ, ಬೇಸರ, ನಲ್ಮೆ ಎಲ್ಲವೂ ಗರಿಗೆದರಿದೆ. ಒಂಥರಾ ಭಯ, ಒಂಥರ ನಡುಕ, ಒಂಥರಾ ಸೋಜಿಗ, ಅಯ್ಯೋ, ಅಯ್ಯೋ.., ಅವೆಲ್ಲಾ ಈಗ ಹೇಗೆ ವರ್ಣಿಸಲಿ ಗೆಳತಿ... ಎಲ್ಲವೂ ವರ್ಣಾನಾತೀತ ಬಿಡು... 

   
 ನನ್ನ ನಿನ್ನ ಪ್ರೀತಿಯೊಂಥರ ಲಾಲಿಯ ಜೋಲಿ ಇದ್ದಹಾಗೆ. ಒಂದು ಬಾರಿ ಕೈಲಿರುತ್ತೆ, ಇನ್ನೊಂದು ಬಾರಿ ಕೈ ತಪ್ಪುತ್ತಿರುತ್ತೆ.  ನೀನು ಹಾಗೆ ಬಿಡು, ತೂಗಿ ತೂಗಿ ಕೊನೆಗೂ ಕೈಬಿಟ್ಟು ಹೋಗುತ್ತಿರುವೆಯಲ್ಲಾ, ಮದುವೆಯಾದ ಮೇಲೆ ಸಿಗುತ್ತಿಯೋ ಇಲ್ಲವೋ ಗೊತ್ತಿಲ್ಲ.  ಆದರೆ ಇವತ್ತು ಮಾತ್ರಾ ಸಿಗುತ್ತಿರುವೆ, ಎಸ್...ಇವತ್ತು ನಮ್ಮ ಭೇಟಿ...
ಅದಕ್ಕೆ ಈ ದಿನಕ್ಕೆ 'ಪ್ರೀತಿ ದಿನ' ಎಂದು ಹೆಸರಿಟ್ಟಿರುವೆ. ಇಂದು ನನ್ನ ದಿನ ಬಿಡು ಎಂದುಕೊಳ್ಳುವಾಗಲೇ ಸಿಗ್ನಲ್ ಬಿತ್ತು. ಅಯ್ಯೋ ನಾನು ಅದೆಂತಹ ಹುಚ್ಚ ನೋಡು!, ಬೈಕಲ್ಲಿ ನಿನ್ನ ಬಳಿ ಬರುತ್ತಿರುವುದನ್ನೇ ಮೈಮರೆತಿದ್ದೆ. ಎಲ್ಲಿಯೂ ನಿಲ್ಲದವ ಸಿಗ್ನಲ್‍ನಲ್ಲಿ ನಿಂತ ಎನ್ನುವಂತೆ ಕಾತರಿಕೆಯ ಚಡಪಡಿಕೆಯಲ್ಲೇ ಅವಸರಿಕೆಯಲ್ಲೇ ಪ್ರತಿ ಸೆಕೆಂಡ್‍ಗೂ ವ್ಯಾಲ್ಯೂ ಇದೆ ಎನ್ನುವಂತೆ ಮುಂದಿನ ಕ್ಷಣಗಳನ್ನ ನಿನ್ನ ಜೊತೆ ಕಳೆಯುತ್ತೀನಲ್ಲ, ಅದು ಬೇಗ ಬರಲಿ ಎಂದು, ನಿನ್ನ ಬಳಿ  ಬಂದು ಕುಳಿತುಕೊಳ್ಳುವ ಅವಕಾಶ ಬಹಳ ಬೇಗ ದೊರಕಲಿ ಎನ್ನುವ ಮನದಿಂಗಿತದಲ್ಲಿ ಬೇರ್ಯಾವ ದಾರಿಯೂ ಅಡ್ಡಗಟ್ಟುವುದು ಬೇಡ ಎಂದು ದೇವರನ್ನು ಬೇಡಿಕೊಳ್ಳುತ್ತಿದ್ದೆ.

ಅಂತೂ ಇಂತೂ ವರ್ಷದಿಂದ ಕಾದಿದ್ದ ನಮ್ಮ ಭೇಟಿಗೆ ಅಮೂಲ್ಯ ಕ್ಷಣ ಬಂದೆ ಬಿಟ್ಟಿತ್ತು. ನೀ ಎದುರು ಬಂದಾಗ ಗೆಳತಿ ಎನ್ನುವ ನನ್ನ ಸುಂದರ ಪ್ರೀತಿಯ ಮಾತಿಗೆ ಆ ನಿನ್ನ ಗುಂಡು ಮೊಗದಲ್ಲಿ ನಗು ಬೀರಿತ್ತು... ಯಾಕೋ ಗೊತ್ತಿಲ್ಲ ಅಪ್ಪಿ, ಫೋನ್‍ನಲ್ಲಿ ಮಾತನಾಡುವಾಗ ಇದ್ದ ಧೈರ್ಯ ನೀ ಎದುರು ಬಂದಾಗ ಇರುವುದೇ ಇಲ್ಲ. ಎಲ್ಲವೂ ಗುಹಾಂತರವಾಗುತ್ತದೆ. ಹೇ! ಯಾಕೋ ಗಂಟಲಲ್ಲಿ ಏನು ಮಾತೇ ಹೊರಬೀಳುವುದಿಲ್ಲ, ಮೊದಲೆಲ್ಲ ನಿನ್ನ ನೋಡಿದಾಗ ಕಂಪಿಸುತ್ತಿದ್ದ, ಆ ಭಯ ಇನ್ನೂ ನನ್ನ ಬಿಟ್ಟಿಲ್ಲ ಅನ್ಸುತ್ತೆ. ಇಷ್ಟು ದಿನ ಮನದಲ್ಲಿದ್ದ ಪ್ರೀತಿಯನ್ನ ಇವತ್ತಾದರೂ ಹೇಳುತ್ತೇನೆಂದುಕೊಂಡು, ಕೊನೆಯ ಭೇಟಿಯಲ್ಲಾದರೂ ಆ ನನ್ನ ಅಮರ ಪ್ರೀತಿಯನ್ನ ಅರುಹಿ ಹೋಗುವೆ ಎಂದೂ, ಒಪ್ಪದಿದ್ದರೂ ಅಪ್ಪಿಕೊಳ್ಳಬಹುದೇನೋ ಎಂದು ಕೊಂಡಿದ್ದ ಎಲ್ಲಾ ಆಸೆ, ಭಾವಗಳೆಲ್ಲ ಕೆಂಡಮಂಡಲವಾಗಿ ಸುಟ್ಟುಕರಕಲಾದಂತೆ ವಿಷಪ್ರಾಶನದಲ್ಲಿ ಮಡಿದಂತೆ ಮಲಗಿಯೇ ಬಿಟ್ಟಿದ್ದವು...

     
ಇಂದು ನಿನಗೆ ಬೇರೊಬ್ಬನ ಜೊತೆ ಮದುವೆ ಫಿಕ್ಸ್ ಆಗಿದ್ದು ತಿಳಿದು ಕೊನೆಯ ಬಾರಿ ನೋಡಿಕೊಂಡು, ನನ್ನೊಳಗಿದ್ದ ಪ್ರೀತಿನಾ ಹೇಳಿಕೊಂಡು ಎಲ್ಲಿದ್ದರೂ ಚೆನ್ನಾಗಿರು ಎನ್ನುವ ನಲ್ಮೆಯ ವಿದಾಯ ಗೀಚೋಣವೆಂದುಕೊಂಡಿದ್ದ ಮಾತಿನ ಭರವಸೆ ಕೊನೆಗೂ ಸುಳ್ಳಾಗಿ ಹೋಯಿತು. ನನ್ನ ಭುಜತಟ್ಟಿ ಮಾತಾಡು ಮಾತಾಡು ಎನ್ನುತ್ತಿದ್ದ ನಿನ್ನ ತುಟಿಯಂಚಲಿ ಹೊರಬರುವ ಪುಣ್ಯಪಡೆದ ಮಾತುಗಳು ಕೇಳುತ್ತಿದ್ದವೇ ಹೊರತೂ ಒಂದೂ ಮಾತು ನನ್ನ ಸ್ವರಕೋಶದಿಂದ ಹೊರಬೀಳಲೇ ಇಲ್ಲ.
ವಾತಾವರಣ ಹದಮಾಡುತಿದೆ, ನಿನ್ನ ಸನಿಹ ಮತ್ತೆ ಮತ್ತೆ ಮನಸನ್ನ ಸೆರೆಯಲಿ ಬಚ್ಚಿಟ್ಟಂತಿದೆ, ಮಾತನಾಡಲು ಕುಳಿತುಕೊಳ್ಳಲು ನೆಪವೆಂದುಕೊಂಡು ತರಿಸಿಕೊಂಡಿದ್ದ ಐಸ್ ಕ್ರೀಮ್ ಮನದ ಧಗ ಧಗಿಸುವಿಕೆಗೆ ಕುದಿದು, ನನ್ನ ಒಳಮನಸಿನಂತೆ ನೀರಾಗಿ ಹರಿಯುತಿದೆ... ದೂರದ ಅನಂತದಿಂದ ಮನದ ಮೂಲೆಯ ಸ್ವರವೊಂದು ಕಂಪಿಸುತ್ತಾ ಕೇಳಿದೆ ಕಾಲ್ತೊಳೆಯಲೇ, ನಿನ್ನ ಕೈ ನಡೆಯಲೇ.., ಅಥವಾ ಹಿಡಿದ ಕೈ ಬಿಟ್ಟು ಹೃದಯ ಒಡೆದುಕೊಳ್ಳಲೇ...

    ಪ್ರಶ್ನೆಗಳು ಸಾವಿರಾರು ಎದ್ದಿವೆ... ದಿಕ್ಕೇ ಇಲ್ಲದ ದೋಣಿಯ ಬಾಳಂತೆ ಉತ್ತರವೇ ಸಿಗದೇ ಒದ್ದಾಡಿವೆ... ಒಂದು ಕಡೆ ಅನುಕಂಪ, ಇನ್ನೊಂದು ಕಡೆ ಪ್ರೀತಿ ಬಿಂಬ, ಮಗದೊಂದು ಕಡೆ ಅನ್ಯತಾ ಬಂಧ... ಕೊನೆಗೂ ಇನ್ನೊಬ್ಬರ ತೆಕ್ಕೆಗೆ ನಿನ್ನರ್ಪಿಸುವ ಗೊಂದಲ... ಅಷ್ಟಾದರೂ ಮತ್ತೆ ಮತ್ತೆ ನಿನ್ನೇ ಕನಿಕರದಿಂದ ಕಾಣುವ ಮನದಂದ... ಎಲ್ಲದರ ನಡುವೆ ಬಡಪಾಯಿಯಾಗಿ ಕುಳಿತು ಎದ್ದವ ನಿರಾಶೆಯ ವಿಧಾಯವಿತ್ತು ತೆರೆಕಾಣುವ ಕೆಂಪನೆಯ ಸೂರ್ಯನ ಬಿಂಬ ನೋಡಲು ಕಡಲತಡಿಗೆ ಬೈಕ್ ಚಲಿಸಿದ್ದೆ... ಮೌನ ಅಲೆಯಂತೆ ಕೊರೆಯುತ್ತಿತ್ತು...
                                                                         - ಸಂದೀಪ್ ಶೆಟ್ಟಿ ಹೆಗ್ಗದ್ದೆ

Sandeep Shetty Heggadde 2018 New Photos